ರಕ್ತದಾನವು ಜೀವ ಉಳಿಸುವ ಮಹತ್ತರ ಕಾರ್ಯವಾಗಿದೆ.
ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಬುಧವಾರ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಸಂಡೂರು ಘಟಕ ಹಾಗೂ ಹೆಚ್.ಡಿ.ಎಫ್. ಸಿ ಬ್ಯಾಂಕ್ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್ ನಾನಾವಟೆ ಅವರು ಶಿಬಿರವನ್ನು ಉದ್ಘಾಟಿಸಿ, ಮಾನವ ಸೇವೆಯಲ್ಲಿಯೇ ಮಹಾ ಸೇವೆ ಎಂದರೆ ರಕ್ತದಾನ. ರಕ್ತದಾನವು ಜೀವ ಉಳಿಸುವ ಮಹತ್ತರ ಕಾರ್ಯವಾಗಿದೆ. ರಕ್ತದ ಅಗತ್ಯ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಮತ್ತು ರಕ್ತ ಬ್ಯಾಂಕ್‌ಗಳಲ್ಲಿ ಆಗಾಗ ಅಭಾವ ಉಂಟಾಗುತ್ತದೆ. ಇದನ್ನು ನಿವಾರಿಸಲು, ರಕ್ತದಾನ ಕುರಿತು ಜಾಗೃತಿ ಮೂಡಿಸಲು ಹಾಗೂ ಸಮಾಜಕ್ಕಾಗಿ ರಕ್ತ ಸಂಗ್ರಹಿಸುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ರಕ್ತದಾನ ಶಿಬಿರಗಳು ಮಾನವೀಯತೆ ಮತ್ತು ಸೇವೆಯ ಸಗುಣಗಳನ್ನು ಬೆಳೆಸುವ ಉತ್ತಮ ಮಾರ್ಗವಾಗಿವೆ. ಇವು ಸಮಾಜದಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸಿ, ಅನೇಕ ಜೀವಗಳನ್ನು ರಕ್ಷಿಸಲು ಸಹಕಾರಿಯಾಗುತ್ತವೆ. ಪ್ರತಿಯೊಬ್ಬ ಆರೋಗ್ಯಕರ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬಹುದು. ಇಂತಹ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸುವುದು. ಸಮಾಜದ ಹಿತಕ್ಕಾಗಿ ಅತ್ಯಂತ ಅಗತ್ಯವಾಗಿವೆ ಎಂದರು.ಈ ಸಮಾರಂಭದಲ್ಲಿ ಟಿಹೆಚ್‌ಒ ಭರತ್‌ಕುಮಾರ್, ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಬಳ್ಳಾರಿಯ ಮಂಜುನಾಥ ಹಾಗೂ ತೋರಣಗಲ್ಲಿನ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮ್ಯಾನೇಜರ್ ಸಾಗರ್ ರಕ್ತದಾನದ ಮಹತ್ವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬಿಇಡಿ ಮತ್ತು ಡಿಗ್ರಿ ಕಾಲೇಜ್ ಹಾಗೂ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರು, ಸಂಯೋಜಕರು. ಆರೋಗ್ಯ ಸಿಬ್ಬಂದಿ. ಬಿಇಡಿ ಪ್ರಶಿಕ್ಷಣಾರ್ಥಿಗಳು, ಪೋಷಕರು, ಶಾಲಾ ಸಿಬ್ಬಂದಿ ಸೇರಿ ಒಟ್ಟು ೧೨೦ ಜನರು ರಕ್ತದಾನ ಮಾಡಿದರು.ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಬುಧವಾರ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.