ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕಕ್ಕೆ ಭವಿಷ್ಯ

| Published : Sep 14 2024, 01:56 AM IST

ಸಾರಾಂಶ

ದೇಶ ಸೇವೆಗೆ ಸಮಾನವಾದ ಕೆಲಸ. ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕ ಭವಿಷ್ಯದಲ್ಲಿ ಭದ್ರವಾಗಿರಲು ಸಾಧ್ಯವೆಂದು ಪಟ್ಟಣದ ಮನಗೂಳಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ.ಶಾಂತವೀರ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ದೇಶ ಸೇವೆಗೆ ಸಮಾನವಾದ ಕೆಲಸ. ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕ ಭವಿಷ್ಯದಲ್ಲಿ ಭದ್ರವಾಗಿರಲು ಸಾಧ್ಯವೆಂದು ಪಟ್ಟಣದ ಮನಗೂಳಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ.ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ಸರ್ವಧರ್ಮ ಮಹಾ ಗಣಪತಿ ಮಂಡಳಿಯಿಂದ ಹಾಗೂ ವಿಜಯಪುರದ ಶಿವಗಿರಿ ರಕ್ತ ಕೇಂದ್ರ ಮತ್ತು ಸಿಂದಗಿಯ ಮನಗೂಳಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಬಹಳಷ್ಟು ಕೆಲಸ ಮಾಡುತ್ತಿದೆ. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಂದಿಗೂ ರಕ್ತವನ್ನು ಸಿದ್ಧಪಡಿಸುವ ಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಆಗಲೇಬೇಕಾಗಿದೆ ಎಂದರು.ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು, ವಯೋವೃದ್ಧರ ದೇಹದಿಂದ ರಕ್ತವನ್ನು ಪಡೆದರೂ ಹೆಚ್ಚು ಪ್ರಯೋಜನವಿಲ್ಲ. ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿರುತ್ತವೆ. ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮರ್ಥ್ಯವೂ ಕಡಿಮೆಯಾಗಿರುತ್ತದೆ. ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ತಿಳಿಸಿದರು.ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯಕ್ರಮ ಎಂದು ಭಾವಿಸಬೇಡಿ. ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು, ಹೃದಯ ಇನ್ನಿತರೆ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದೆ ಅಷ್ಟೆ. ಆದರೆ, ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ. ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಿಂದಗಿಯ ಮನಗೂಳಿ ಆಸ್ಪತ್ರೆಯಿಂದ ಸಂಪೂರ್ಣ ಸಹಕಾರ ಲಭಿಸಲಿದೆ ಎಂದು ಭರವಸೆ ನೀಡಿದರು.ಮಹಾಗಣಪತಿ ಮಂಡಳಿಯ ಅಧ್ಯಕ್ಷ ಸತೀಶಗೌಡ ಸೋಮನಗೌಡ ಬಿರಾದರ್ ಮಾತನಾಡಿ, ಇದು ಒಂದು ಸಾಮಾಜಿಕ ಕಾರ್ಯಕ್ರಮ. ಸಾಮಾನ್ಯ ಜನರಿಗೆ ಉಪಯೋಗವಾಗುವ ಉದ್ದೇಶದಿಂದ ಗಣಪತಿ ಹಬ್ಬದ ನಿಮಿತ್ಯ ಆರೋಗ್ಯ ಕಾರ್ಯಕ್ರಮವನ್ನು ಈ ವರ್ಷದಿಂದ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಸಮಾಜಕ್ಕೆ ಪೂರಕವಾಗಿರುವಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿಯಾಗಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಹೊಂದಿದ್ದಾಗಿ ತಿಳಿಸಿದರು.ರಕ್ತದಾನ ಶಿಬಿರದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಯುವಕರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ನಿಂಗರಾಜ್ ದೊಡಮನಿ, ಗುರುರಾಜ್ ಮಣೂರ ವಕೀಲರು, ಡಾ.ಸೋಮನಾಥ ಪೂಜಾರ, ಶಾಂತು ಯಡ್ರಾಮಿ, ಶ್ರೀನಿವಾಸ್ ಭಾಸಗಿ, ಸೋಮು ಕೊಪ್ಪ, ಆನಂದ ಹೂಗಾರ, ಪ್ರವೀಣ ತಳವಾರ, ಪ್ರವೀಣ ತಳವಾರ, ರಿಯಾಜ್, ಪ್ರವೀಣ ರೆಡ್ಡಿ, ವೇದಿಕೆ ಬಡಿಗೇರ, ರವಿ ನಾಗಠಾಣ, ಶಿವು ಬಿರಾದಾರ, ಈರಣ್ಣ ಕುಂಬಾರ, ರಾಕೇಶ್ ದೇವರನವಾಗಿ, ಮೈಬು ಕೆಂಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಬಹುತೇಕ ಜನರಲ್ಲಿ ರಕ್ತದ ಕುರಿತು ಮಾಹಿತಿ ಇಲ್ಲ. ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ. ಹಣ ಕೊಟ್ಟು ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ.

ಡಾ.ಶಾಂತವೀರ ಮನಗೂಳಿ, ಮನಗೂಳಿ ಆಸ್ಪತ್ರೆಯ ಮುಖ್ಯ ವೈದ್ಯ.