ಕನ್ನಡಪ್ರಭ ವಾರ್ತೆ ಕಾರವಾರ
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಭಾನುವಾರ ನಗರದ ದೈವಜ್ಞ ಸಭಾಭವನದಲ್ಲಿ ವಿನಾಯಕ ನಾಯ್ಕ ಚೆಂಡಿಯಾ ನೇತೃತ್ವದ ಬ್ಲಡ್ ಡೋನರ್ಸ್ ಕಾರವಾರ ತಂಡದ 10ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ರಕ್ತದಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾಗಿ, ಜೀವ ಉಳಿಸುವ ಕಾಯಕದಲ್ಲಿ ತೊಡಗಿರುವ ತಂಡದ ಕಾರ್ಯವನ್ನು ಕೊಂಡಾಡಿದರು.ಮುಖ್ಯ ಅತಿಥಿಗಳಾಗಿ ಹಿರಿಯ ರಕ್ತದಾನಿ ಹಾಗೂ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶಿವಾನಂದ ಶಾನಭಾಗ, ಕಾರವಾರ ಬಂದರು ಆಡಳಿತಾಧಿಕಾರಿ ಸುರೇಶ ಶೆಟ್ಟಿ, ನಗರದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಜಗದೀಶ ಬಿರ್ಕೋಡಿಕರ, ಪತಂಜಲಿ ಯೋಗ ಪೀಠದ ಜಿಲ್ಲಾ ಸಂಚಾಲಕ ಶ್ರೀನಾಥ ಗೌಡ ಹಾಗೂ ಎಲ್.ಐ.ಸಿ. ಅಧಿಕಾರಿ ಸಚಿನ್ ನಾಯ್ಕ ಅಂಕೋಲಾ ಉಪಸ್ಥಿತರಿದ್ದರು.
ಚೇತನ ಮಾಳ್ಸೇಕರ ಬಿಣಗಾ ಹಾಡಿದ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಯ ಸುಶ್ರಾವ್ಯ ಗಾಯನದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.ಬ್ಲಡ್ ಡೋನರ್ಸ್ ಕಾರವಾರ ತಂಡದ ಸಂಸ್ಥಾಪಕ ವಿನಾಯಕ ನಾಯ್ಕ ಪ್ರಾಸ್ತಾವಿಕ ನುಡಿಯಾಡಿ ಕಳೆದ 10 ವರ್ಷಗಳಲ್ಲಿ ತಂಡ ನಡೆದು ಬಂದ ದಾರಿ ಹಾಗೂ ಸೇವಾ ಉದ್ದೇಶಗಳನ್ನು ನೆರೆದಿದ್ದವರಿಗೆ ವಿವರಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತ ಒದಗಿಸಿಕೊಡುವ ಮೂಲಕ ನಿರಂತರವಾಗಿ ಜೀವ ಉಳಿಸುತ್ತಿರುವ ಬ್ಲಡ್ ಡೋನರ್ಸ್ ಕಾರವಾರ ತಂಡದ 10 ವರ್ಷಗಳ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬಳಿಕ ತಂಡದ 10 ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಇದೇ ಶುಭ ಸಂದರ್ಭ ರಕ್ತದಾನದ ಮಹತ್ವವನ್ನು ಸಾರುವ ವಿಶೇಷ ಕಿರುಚಿತ್ರ ಹಾಗೂ ಪ್ರಶಾಂತ ಎಸ್. ನಾಯ್ಕ ಭಾವಿಕೇರಿ ರಚಿಸಿದ ತಂಡದ ಕುರಿತಾದ ವಿಶೇಷ ಗೀತೆ ಬಿಡುಗಡೆಗೊಳಿಸಲಾಯಿತು.
ಸಮಾಜದ ಒಳಿತಿಗಾಗಿ ನಿರಂತರವಾಗಿ ರಕ್ತದಾನ ಮಾಡಿದ ಎಲ್ಲ ರಕ್ತದಾನಿ ಬಂಧುಗಳಿಗೆ ವಿಶೇಷ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನೋಜ ಡಿ. ನಾಯ್ಕ ಚೆಂಡಿಯಾ ಸ್ವಾಗತಿಸಿದರು. ಗುರುಪ್ರಸಾದ ಜಿ. ನಾಯ್ಕ ಚೆಂಡಿಯಾ ಕಾರ್ಯಕ್ರಮ ನಿರೂಪಿಸಿದರು.