ಜೆಎಸ್‌ಎಸ್‌ನಲ್ಲಿ ಡಾ. ರಾಜನ್ ದೇಶಪಾಂಡೆ ಅವರ ನೇತೃತ್ವದಲ್ಲಿ ಮಕ್ಕಳ ಅಕಾಡೆಮಿ ತನ್ನ ರಜತ ಮಹೋತ್ಸವ ಆಚರಣೆ ನಿಮಿತ್ತ ೨೫ ಸಾವಿರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವ ಮೂಲಕ ತನ್ನ ಸಾಮಾಜಿಕ ಕಳಕಳಿ ಮೆರೆದಿದೆ.

ಧಾರವಾಡ:

ರಕ್ತದ ಮಹತ್ವ ತಿಳಿಯುವುದು ಅಪಘಾತಗಳು ಸಂಭವಿಸಿದಾಗ. ಅಲ್ಲಿಯ ವರೆಗೆ ಜನರಿಗೆ ತಮ್ಮ ರಕ್ತದ ಗುಂಪು ಯಾವುದು ಎಂಬ ಮಾಹಿತಿ ಸಹ ಇರುವುದಿಲ್ಲ ಹಾಗೂ ತುರ್ತು ಸಂದರ್ಭದಲ್ಲಿ ರಕ್ತವನ್ನು ಎಲ್ಲಿ ಮತ್ತು ಹೇಗೆ ಪಡೆಯಬೇಕೆಂಬ ಅರಿವು ಸಹ ಇರುವುದಿಲ್ಲವೆಂದು ಜೆಎಸ್‌ಎಸ್‌ ಕಾರ್ಯದರ್ಶಿ ಡಾ. ಅಜಿತ್‌ ಪ್ರಸಾದ ಹೇಳಿದರು.

ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಮಕ್ಕಳ ಅಕಾಡೆಮಿ ಮತ್ತು ಐಎಪಿ ಆಶ್ರಯದಲ್ಲಿ ಮಕ್ಕಳ ಅಕಾಡೆಮಿ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದತ ಉಚಿತ ರಕ್ತದ ಗುಂಪು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮುಂಚಿತವಾಗಿಯೇ ನಮ್ಮ ರಕ್ತದ ಗುಂಪಿನ ಬಗ್ಗೆ ತಿಳಿದಿದ್ದರೆ ಮುಂದಾಗುವ ಅನಾಹುತ ತಪ್ಪಿಸಬಹುದೆಂದು ಎಂದರು.

ಜೆಎಸ್‌ಎಸ್‌ನಲ್ಲಿ ಡಾ. ರಾಜನ್ ದೇಶಪಾಂಡೆ ಅವರ ನೇತೃತ್ವದಲ್ಲಿ ಮಕ್ಕಳ ಅಕಾಡೆಮಿ ತನ್ನ ರಜತ ಮಹೋತ್ಸವ ಆಚರಣೆ ನಿಮಿತ್ತ ೨೫ ಸಾವಿರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವ ಮೂಲಕ ತನ್ನ ಸಾಮಾಜಿಕ ಕಳಕಳಿ ಮೆರೆದಿದೆ. ಇದೀಗ ವಿದ್ಯಾರ್ಥಿಗಳ ರಕ್ತದ ಗುಂಪು ಗುರುತಿಸುವಿಕೆ ಸಹ ನಮ್ಮ ಸಂಸ್ಥೆಯಿಂದಲೇ ಪ್ರಾರಂಭವಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಮಕ್ಕಳ ಅಕಾಡೆಮಿ ಮಕ್ಕಳ ಆರೋಗ್ಯ ಪೋಷಣೆ, ಆರೈಕೆ ಮುಂತಾದ ವಿಷಯಗಳಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ಇಂತಹ ಸಾಮಾಜಿಕ ಕಾರ್ಯಕಗಳಿಗೆ ಜೆಎಸ್‌ಎಸ್ ಸದಾ ನಮ್ಮೊಂದಿಗೆ ಕೈ ಜೋಡಿಸಿದೆ. ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಮುಂಚೆಯೆ ಅವರ ರಕ್ತದ ಗುಂಪು ಹಾಗೂ ಇತರೇ ಆರೋಗ್ಯದ ಮಾಹಿತಿ ಹೊಂದಿದ್ದರೆ, ಬೇಗನೆ ಚಿಕಿತ್ಸೆ ನೀಡಲು ಅನೂಕೂಲವಾಗುತ್ತದೆ ಎಂದರು.

ರಕ್ತದ ಗುಂಪಿನಲ್ಲಿ ಕೆಲವೊಂದು ಅತಿ ವಿರಳ ರಕ್ತದ ಗುಂಪುಗಳು ಇರುತ್ತವೆ. ಆ ಗುಂಪಿನ ಜನ ಅತಿ ಜಾಗರೂಕತೆಯಿಂದ ರಕ್ತಸ್ರಾವ ಆಗದಂತೆ ಇರಬೇಕು. ರಕ್ತದ ಗುಂಪುಗಳು ಮುಖ್ಯವಾಗಿ ಎ-ಬಿ ಮತ್ತು ಒ ವ್ಯವಸ್ಥೆ ಹೊಂದಿದೆ. ರಕ್ತದ ಗುಂಪಿನಲ್ಲಿ ಧನ ಮತ್ತು ಋಣ ಎಂಬ ಎರಡು ತರಹದ ಗುಂಪುಗಳಿದ್ದು, ಆಯಾ ರಕ್ತದ ಗುಂಪು ತನ್ನದೇ ಆದ ವೈಶಿಷ್ಠ್ಯತೆ ಹೊಂದಿರುತ್ತದೆ ಎಂದು ತಿಳಿಸಿದರು.

ರಕ್ತದ ಗುಂಪಿನ ಪರೀಕ್ಷೆ ಪ್ರಾರಂಭವಾಗಿದ್ದು, ಒಟ್ಟು ೮೫೦೦ ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷಿಸಿ ಅವರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಇದೇ ವೇಳೆ ಸಿನಿಯರ್ ಪಾಥೋಲಾಜಿಸ್ಟ್ ಡಾ. ಅರವಿಂದ ಏರಿ, ರಕ್ತದ ಗುಂಪುಗಳ ಕುರಿತು ಉಪನ್ಯಾಸ ನೀಡಿದರು. ಡಾ. ಕವನ ದೇಶಪಾಂಡೆ, ಡಾ. ದತ್ತು ವೈಗುದ್ಧಿ, ಭಾರತೀಯ ರೆಡ್‌ಕ್ರಾಸ್ ಅಧ್ಯಕ್ಷ ಡಾ. ಮಹಾಂತೇಶ ವೀರಾಪುರ, ಐಟಿಐ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಸಿ.ಯು ಬೆಳ್ಳಕ್ಕಿ, ಸಾಧನಾ. ಎಸ್, ಉಪಸ್ಥಿತರಿದ್ದರು.