ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ರೋಗಿಗಳಿಂದ ಭರ್ತಿ ಆಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಘೀ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ರಕ್ತ ಪರೀಕ್ಷೆ ಮಾಡಿಸಿದಾಗ ಬಹುತೇಕ ಎಲ್ಲರಿಗೂ ಬಿಳಿರಕ್ತ ಕಣಗಳು ಕಡಿಮೆ ಆಗಿರುವುದು ತಿಳಿಯುತ್ತಿದೆ. ಡೆಂಘೀಗೆ ತುತ್ತಾಗಿದ್ದರೆ ಪೇಟ್ಲೆಟ್ಸ್ ಕಡಿಮೆ ಆಗುತ್ತದೆ ಎಂದು ಡಾ. ಸೆಲ್ವಕುಮಾರ್ ತಿಳಿಸಿದ್ದಾರೆ.ಇತ್ತೀಚೆಗೆ ಹಳ್ಳಿಮೈಸೂರಿನ ೮ ವರ್ಷದ ಬಾಲಕಿಯೊಬ್ಬಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ಪೇಟ್ಲೆಟ್ಸ್ ಕಡಿಮೆ ಆಗಿ, ರಕ್ತದೊತ್ತಡ ಕಡಿಮೆ ಆಗದೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ನಂತರ ಹಾಸನದ ಹಿಮ್ಸ್‌ಗೆ ತೆರಳಿ ಅಲ್ಲಿಯೂ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಆದರೂ ಆರೋಗ್ಯ ಇಲಾಖೆ ಯಾವುದೇ ಕ್ರಮ ತೆಗದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರು ಮೊದಲು ೧೦ ರು. ನೀಡಿ ರಶೀತಿ ಪಡೆಯಬೇಕು. ಈ ರಶೀತಿ ಪಡೆದುಕೊಳ್ಳಲು ಹೆಚ್ಚು ಸಮಯ ಕ್ಯೂನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದ್ದು ರಶೀತಿ ನೀಡುವ ಹೆಚ್ಚು ಕೌಂಟರ್‌ಗಳನ್ನು ತೆಗೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಧನಶೇಖರ್ ಒಳರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಸಿಗೆಗಳು ಭರ್ತಿ ಆಗಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಸಮಸ್ಯೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲಿನ ಪ್ರಯೋಗಾಲಯದಲ್ಲಿ ಡೆಂಘೀ ಪರೀಕ್ಷೆಗೆ ಕೆಲವು ದಿನಗಳಿಂದ ಕಾರ್ಡಗಳಿಲ್ಲ ಎಂದು ಪ್ರಯೋಗಾಲಯ ಸಿಬ್ಬಂದಿ ತಿಳಿಸಿದ್ದು ಹೊರಗಡೆ ಖಾಸಗಿ ಪ್ರಯೋಗಾಲಯದಲ್ಲಿ ಬಡ ರೋಗಿಗಳೂ ಅನಿವಾರ್ಯವಾಗಿ ೬೦೦ ರಿಂದ ೮೦೦ ರು. ಪಾವತಿಸಿ ಡೆಂಘೀ ರಕ್ತಪರೀಕ್ಷೆ ಮಾಡಿಸಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡು ಪ್ರಯೋಗಾಲಯಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ನೀಡಿ ಬಡರೋಗಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಿಬೇಕೆಂದು ಒತ್ತಾಯಿಸಿದ್ದಾರೆ.