ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಕ್ಫ್‌ನಿಂದ ಮಾತೃಭೂಮಿ ಮೇಲೆ ಆಕ್ರಮಣ ಮುಂದುವರಿದರೆ, ರಾಜ್ಯದಲ್ಲಿ ರಕ್ತಕ್ರಾಂತಿ ಆಗುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಭೂಮಿ, ದೇವಸ್ಥಾನ, ಸಾಧು ಸಂತರ ಆಸ್ತಿ ಮೇಲೆ ಆಕ್ರಮಣವನ್ನು ಹಿಂದು ಸಮಾಜ ಸಹಿಸಲ್ಲ. ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದೇವರ ಮೇಲೆ ನಂಬಿಕೆ ಬಂದಿದೆ. ಆದರೆ, ಅವೆಲ್ಲವೂ ನಾಟಕ ಆಗಬಾರದು. ಪ್ರಾಮಾಣಿಕವಾಗಿ ಹಿಂದು ಧರ್ಮದ ಎಲ್ಲ ದೇವತೆಗಳ ಆಶೀರ್ವಾದ ಬರಬೇಕಿದ್ದರೆ, ಹಿಂದು ಧರ್ಮದ ಮೇಲೆ ಆಗುತ್ತಿರುವ ಆಘಾತ ನಿಲ್ಲಿಸಬೇಕು. ಇಲ್ಲವಾದರೆ ನೀವು ಸಿಎಂ ಸ್ಥಾನ ಕಳೆದುಕೊಂಡು ಜೈಲಿಗೆ ಹೋಗುತ್ತೀರಿ ಎಂದು ಹೇಳಿದರು.
ದೇವರ ಹಾಗೂ ಸಾಧು ಸಂತರ ಶಾಪದಿಂದ ಮುಖ್ಯಮಂತ್ರಿಗಳು ಜೈಲಿಗೆ ಹೋಗಬೇಕಾಗುತ್ತೆ. ನೀವು ಹಿಂದು ಧರ್ಮದ ಮೇಲೆ ಮಾಡುತ್ತಿರುವ ದ್ರೋಹ ಇದಾಗಿದೆ. ಮುಸ್ಲಿಮರ ಓಟಿಗಾಗಿ ಏನಿದು ಆಟ...? ನಿಮ್ಮ ಆಟಕ್ಕೆ ಜಮೀರ ಅಹ್ಮದ್‌ನವರನ್ನ ಕೈಗೊಂಬೆ ರೀತಿಯಲ್ಲಿ ಕುಣಿಸುತ್ತಿದ್ದಿರಿ. ರಕ್ತಕ್ರಾಂತಿ ಆಗುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಬೇಕು. ವಕ್ಫ್ ತಿದ್ದುಪಡಿ ವಿಚಾರದಲ್ಲಿ ರಚನೆ ಆಗಿರುವ ಜಂಟಿ ಸಮಿತಿಗೆ ವಿಪಕ್ಷಗಳ ಬಹಿಷ್ಕಾರ ಸರಿಯಲ್ಲ. ಸತ್ಯ ಇಲ್ಲವಾದರೆ ವಾದ ಮಾಡಿ ಜನರಿಗೆ ಹೇಳಲಿ. ಇದು ಹಿಂದು ಧರ್ಮಕ್ಕೆ ಮಾಡುತ್ತಿರುವ ದ್ರೋಹ. ಪ್ರಧಾನಮಂತ್ರಿಗಳು ವಕ್ಫ್ ಬೋರ್ಡ್ ರದ್ದು ಮಾಡಿ ಕಾಯ್ದೆ ಜಾರಿಗೆ ತರಲಿ ಎಂದು ಈಶ್ವರಪ್ಪ ಒತ್ತಾಯಿಸಿದರು.
ಮುಸ್ಲಿಂ ರಾಜರು ಹಿಂದುಗಳ ಮಠ ಮಾನ್ಯಗಳಿಗೆ ಜಮೀನು ದಾನ ಮಾಡಿದ್ದರು ಎನ್ನುವ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಮುಸಲ್ಮಾನರನ್ನು ಸಂತೃಪ್ತಿಪಡಿಸುವ ವಿಚಾರದಲ್ಲಿ ಜಮೀರ್ ಅಹ್ಮದ್ ಮೊದಲನೇ ಸ್ಥಾನದಲ್ಲಿದ್ರೆ, ಸಚಿವ ಶಿವಾನಂದ ಪಾಟೀಲ ಎರಡನೇ ಸ್ಥಾನದಲ್ಲಿ ಬರ್ತಾರೆ ಎಂದು ಈಶ್ವರಪ್ಪ ಗರಂ ಆದರು.ದೇಶಕ್ಕೆ ಮುಸ್ಲಿಮರು ಯಾವಾಗ ಬಂದಿದ್ದು? ಮಂತ್ರಿಯಾಗಿ ಇವರಿಗೆ ಚರಿತ್ರೆಯೇ ಗೊತ್ತಿಲ್ಲ. ಇದು ಸಾಧು ಸಂತರ ನಾಡು. ಮುಸ್ಲಿಮರು ಆಕ್ರಮಣಕಾರಿಗಳು. ಇಲ್ಲಿಯ ಆಸ್ತಿ ಪಾಸ್ತಿ ಲೂಟಿ ಮಾಡಿ ಮಹಿಳೆಯರನ್ನು ಮತಾಂತರ ಮಾಡಿ, ಗೋವುಗಳನ್ನು ಕಡಿದು ರಾಜ್ಯಭಾರ ಮಾಡಿದ್ರು. ಅವರೇನು ನಮಗೆ ಕೊಡುವಂತದ್ದು ಇಲ್ಲ. ನಮ್ಮ ಭೂಮಿಯನ್ನ ಯಾವನೂ ಕೊಡೋದಿಲ್ಲ. ನಮ್ಮ ಭೂಮಿಯನ್ನು ವಕ್ಫ್ ಆಸ್ತಿ ಎಂದು ಮಾಡುತ್ತಿರುವುದನ್ನು ವಾಪಸ್ ತೆಗೆದುಕೊಳ್ಳುವವರೆಗೆ ಹಿಂದೂ ಸಮಾಜ ಬಿಡಲ್ಲ. ಅದಕ್ಕೆ ಈ ರಾಜ್ಯದಲ್ಲಿ ರಕ್ತಕ್ರಾಂತಿ ಆಗುತ್ತೆ ಅಂತ ಹೇಳಿದ್ದು. ಸಾಧು ಸಂತರು ಸಹ ಸುಮ್ಮನೆ ಕುಳಿತಿಲ್ಲ. ಎಲ್ಲೆಲ್ಲಿ ದೇವಸ್ಥಾನ, ಮಠ ಮಾನ್ಯಗಳನ್ನು ಆಕ್ರಮಣ ಮಾಡಿ ವಕ್ಫ್ ಆಸ್ತಿ ಎಂದು ಮಾಡಿದ್ದಾರೆಯೋ ಅದು ವಾಪಸ್ ಬರುವವರೆಗೂ ಹೋರಾಟ ಮಾಡಬೇಕು ಅಂತ ಸಾಧು ಸಂತರೆ ನನಗೆ ಫೋನ್ ಮಾಡಿ ಹೇಳಿದ್ದಾರೆ ಎಂದು ತಿಳಿಸಿದರು.
ನಾಳೆ ಕಲಬುರಗಿಗೆ ತಿಂಥಣಿ ಸ್ವಾಮೀಜಿ ಬರುತ್ತಿದ್ದಾರೆ. ವಕ್ಫ್ ನೋಟಿಸ್ ಹಿಂದೆ ಪಡೆದಿದ್ದು ದೊಡ್ಡದಲ್ಲ. ಅದು ಸರ್ಕಾರದ ತಪ್ಪು ಅಂತ ಒಪ್ಪಿದಂತಾಗಿದೆ. ಕೆ.ಎನ್.ರಾಜಣ್ಣ, ಜಮೀರ್ ಅಹ್ಮದ್ ಮಾಡಿದ್ದು ತಪ್ಪು. ಯಾವುದೇ ಕಾರಣಕ್ಕೆ ಒಪ್ಪಲ್ಲ ಅಂದಿದ್ದಾರೆ. ಕ್ಯಾಬಿನೆಟ್‌ನಲ್ಲಿ ಒಬ್ಬರಾದರೂ ಗಂಡಸು ಇದ್ದಾರಲ್ಲ ಅಂತ ಅವರಿಗೆ ಅಭಿನಂದಿಸುವೆ. ಶತಶತಮಾನದಿಂದಲೂ ಈ ನಾಡು ಭಾರತೀಯ, ಹಿಂದು ಸಂಸ್ಕೃತಿಯಾಗಿದೆ. ಮಣ್ಣಿಗೆ ತಾಯಿ ಅಂತ ಗೌರವ ಕೊಡ್ತೇವೆ. ರೈತರಿಗೆ, ಬಡವರಿಗೆ, ದೇವಸ್ಥಾನ, ಶಾಲೆ ಕಾಲೇಜಿಗಳಿಗೆ ಆರ್ಥಿಕವಾಗಿ ಹೊಂದಿರುವ ವ್ಯವಸ್ಥೆ, ಇದು ನನ್ನ ಮಾತೃಭೂಮಿ, ಮಾತೃಭೂಮಿ ಮೇಲೆ ಆಕ್ರಮಣ ಮಾಡಲು ಯಾವುದೇ ಕಾರಣಕ್ಕೂ ಮುಸ್ಲಿಮರಿಗಾಗಲಿ, ಜಮೀರ್‌ಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ಹಿಂದು ಸಮಾಜ ಅವಕಾಶ ಕೊಡಲ್ಲ ಎಂದು ಎಚ್ಚರಿಸಿದರು.ಹಾವೇರಿ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಮುಸ್ಲಿಮರ ಮನೆ ಮೇಲೆ ಕಲ್ಲು ಹೊಡೆದಿದ್ದು ಕಂಡಿದ್ದೀರಿ. ರಾಜ್ಯದಲ್ಲಿ ಮುಸ್ಲಿಮರ ಮೇಲೆ ಆಕ್ರಮಣ ಮಾಡಬೇಕಾಗುತ್ತೆ. ರಕ್ತಕ್ರಾಂತಿ ಆಗುತ್ತೆ ಎಂದು ಈ ಎಚ್ಚರಿಕೆಯನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತೇನೆ ಎಂದರು.
ಲೋಕಾಯುಕ್ತಕ್ಕೆ ಹೋಗುತ್ತಿರುವುದು ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ. ಇದು ತೀರಾ ಅನ್ಯಾಯ. ಲೋಕಾಯುಕ್ತಕ್ಕೆ ಹೋದ ತಕ್ಷಣ ತಪ್ಪಿತಸ್ಥರು ಅಂತ ನಾ ಹೇಳೋದಿಲ್ಲ. ಕ್ಲೀನ್ ಚಿಟ್ ಪಡೆದು ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆದರೆ ಬೇರೆಯವರ ರಾಜೀನಾಮೆ ಪಡೆಯಲು ಮೆರವಣಿಗೆ ಮಾಡಿದವರು ಈಗ ನಿಮ್ಮ ಮೇಲೆ ಆಪಾದನೆ ಬಂದು ಲೋಕಾಯುಕ್ತಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ನೀವು ರಾಜೀನಾಮೆ ಕೊಡದೆ ಹೇಗೆ ಹೋಗ್ತಿರಿ ಎಂದು ತೀಕ್ಷ್ಣವಾಗಿ ಕುಟುಕಿದ ಅವರು, ರಾಜೀನಾಮೆ ಕೊಡದೆ ಇರೋದು ಸಿಎಂ ಭಂಡತನ. ಈ ಭಂಡತನ ಬಹಳ ದಿನ ನಡೆಯೋದಿಲ್ಲ. ಇವರಿಗೆ ಭಗವಂತ ಶಾಪ ಕೊಡೋದಕ್ಕೆ ಒಂದೊಂದೆ ಮಾಡ್ತಾ ಇದ್ದಾರೆ. ಮುಡಾ ಹಗರಣ ಅಯ್ತು ಎಷ್ಟು ಲೆಕ್ಕವುಂಟಾ ಅದಕ್ಕೆ ಈಗ ವಕ್ಫ್ ಎಷ್ಟು ಜನ ಸಾಧು ಸಂತರು ಶಾಪ ಹಾಕ್ತಿದ್ದಾರೆ. ಸಿದ್ದರಾಮಯ್ಯನವರೆ ಸಾಧು ಸಂತರ ಶಾಪ, ದೇವರ ಶಾಪ ಹೊತ್ಕೊಬೇಡಿ ಎಂದು ಸಲಹೆ ನೀಡಿದರು.ಎಫ್ಐಆರ್ ಆದರೆ ಅಧಿಕಾರದಲ್ಲಿ ಮುಂದುವರೆಯಬಾರದುಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವರ್ಗಾವಣೆಗೆ ವರ್ಷಕ್ಕೆ ಎರಡುನೂರು ಕೋಟಿ ರು., ಬಾರ್ ಆ್ಯಂಡ್ ಪಬ್‌ನಿಂದ ₹180 ಕೋಟಿ ಪಡೆಯುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ ಅವರು, ದೂರು ಕೊಟ್ಟ ತಕ್ಷಣ ರಾಜೀನಾಮೆ ಕೊಡಬೇಕು ಅಂತ ನಾನು ಹೇಳಲ್ಲ. ಅದರ ಬಗ್ಗೆ ಗಮನಿಸಿ ಎಫ್ಐಆರ್ ಆದ ತಕ್ಷಣ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ಮುಂದುವರೆಯಬಾರದು. ಎಫ್ಐಆರ್ ಹಾಕಬೇಕು ಸರ್ಕಾರ ಗಮನಿಸಬೇಕು ಎಂದರು. ನನ್ನ ಮೇಲೆ ಎಫ್ಐಆರ್ ಬಿದ್ದ ತಕ್ಷಣ ಡಿಕೆಶಿ, ಸಿಎಂ ಸಿದ್ದರಾಮಯ್ಯ ದೊಡ್ಡ ಮೆರವಣಿಗೆ ಮಾಡಿದರು. ರಾಜೀನಾಮೆ ಕೊಡಬೇಕು ಅಂತ ತನಿಖೆ ನಂತರ ತಪ್ಪಿತಸ್ಥರಲ್ಲ ಅಂತ ಸಾಬೀತಾದರೆ ಮತ್ತೆ ಮಂತ್ರಿಯಾಗಲಿ ಅಂದರು. ನಾನು ಮೆರವಣಿಗೆಗೆ ಗಮನ ಕೂಡ ಕೊಡದೆ. ಕೇಂದ್ರ ನಾಯಕರ ಅನುಮತಿ ಪಡೆದು ರಾಜೀನಾಮೆ ಕೊಟ್ಟೆ. ತನಿಖೆ ಆಯ್ತು ಕ್ಲೀನ್ ಚಿಟ್ ಸಿಕ್ತು ನನಗೆ. ತಿಮ್ಮಾಪುರಗೆ, ಡಿಕೆ ಶಿವಕುಮಾರಗೆ, ಸಿದ್ದರಾಮಯ್ಯಗೆ ಒಂದೊಂದು ಕಾನೂನು ಇದೆಯಾ? ರಾಜ್ಯದಲ್ಲಿ ಆಪಾದನೆ ಬಂದ ತಕ್ಷಣ ನೈತಿಕವಾಗಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.