ಕೊಪ್ಪಳ ಜಿಲ್ಲೆಯಲ್ಲಿ ಎಸ್ಐಆರ್ ಮ್ಯಾಂಪಿಂಗ್ ನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರಗತಿ ಕಡಿಮೆ ಇದೆ.
ಗಂಗಾವತಿ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಬಿಎಲ್ಓ ಹಾಗೂ ಬಿಎಲ್ಎಗಳು ಸಮನ್ವಯದಿಂದ ಕೆಲಸ ಮಾಡಿದರೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ ಹೇಳಿದರು.
ನಗರದ ಶ್ರೀಇಂಟರ್ ನ್ಯಾಶನಲ್ ಇನ್ಸಕ್ಷನ್ ಹಾಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಬೂತ್ ಲೆವೆಲ್ ಏಜೆಂಟ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೊಪ್ಪಳ ಜಿಲ್ಲೆಯಲ್ಲಿ ಎಸ್ಐಆರ್ ಮ್ಯಾಂಪಿಂಗ್ ನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಪ್ರಗತಿ ಕಡಿಮೆ ಇದೆ.ಗಂಗಾವತಿ ಕ್ಷೇತ್ರದಲ್ಲಿ 94 % ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಬಾಕಿ 10 ಸಾವಿರ ಮತದಾರರ ಮ್ಯಾಪಿಂಗ್ ಮಾಡುವುದು ಬಾಕಿ ಇದೆ ಇದು ಸವಾಲಿನ ಕೆಲಸವಾಗಿದ್ದು, ಬಿಎಲ್ಓ ಹಾಗೂ ಬಿಎಲ್ಎ ಜೊತೆಗೂಡಿ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.
2022 ಮತ್ತು 2025ರ ಮತದಾರರ ಪಟ್ಟಿಯ ಹೆಸರಲ್ಲಿ ವ್ಯತ್ಯಾಸ ಇದ್ದವರು ಹಾಗೂ ಸ್ಥಳಾಂತರವಾದವರು ಗಣತಿ ನೋಂದಣಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆನೀಡಿದರೆ ಮತದಾರ ಪಟ್ಟಿಯಲ್ಲಿ ಸೇರಲು ಅವಕಾಶ ಇರುತ್ತದೆ.ಗಣತಿ ನೋಂದಣಿ ಅರ್ಜಿಗೆ ಮತದಾರ ಕುಟುಂಬದವರು ಯಾರಾದರೂ ಸಹಿ ಮಾಡಬಹುದು. ಮ್ಯಾಪಿಂಗ್ ನಲ್ಲಿ ಏನಾದರೂ ತಕರಾರರು ಇದ್ದರೂ ಸಲ್ಲಿಸಲು ಅವಕಾಶವಿದೆ ಎಂದರು.ಒಬ್ಬ ಮತದಾರ ಎರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರು ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದೆ. ಪಟ್ಟಿಯಲ್ಲಿ ನೈಜ ಮತದಾರರ ಹೆಸರು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಅರ್ಹ ಮತದಾರರು ಬಿಟ್ಟು ಹೋಗದಂತೆ ಅನರ್ಹ ಮತದಾರರು ಸೇರ್ಪಡೆ ಆಗದಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
10 ಬಿಎಲ್ಓಗಳಿಗೆ ಒಬ್ಬರು ಮೇಲುಸ್ತುವಾರಿ ಇರುತ್ತಾರೆ.ಈಗಾಗಲೇ ಗಂಗಾವತಿ ನಗರದಲ್ಲಿ 18 ಮತದಾರರ ನೆರವು ಕೇಂದ್ರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಪಂಗೊಂದು ಮತದಾರರ ನೆರವು ಕೇಂದ್ರ ತೆರೆಯಲಾಗಿದೆ. ಮತದಾರರು ಕೇಂದ್ರದ ಲಾಭ ಪಡೆದು ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಉಪ ವಿಭಾಗಾಧಿಕಾರಿ ಮಹೇಶ ಕ್ಯಾಪ್ಟನ್, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026ರ ಬೂತ್ ಲೆವೆಲ್ ಏಜೆಂಟ್ ಕಾರ್ಯಾಗಾರದಲ್ಲಿ ಎಸ್ ಐಆರ್ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ವಿವಿಧ ಪಕ್ಷದ ಬಿಎಲ್ಎಗಳು ತಮಗೆ ಎಸ್ ಐಆರ್ ಬಗ್ಗೆ ಇರುವ ಅನುಮಾನದ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಂಡರು. ಮತದಾರ ಪಟ್ಟಿಯಲ್ಲಿ ಒಂದು ಕುಟುಂಬದ ಮತದಾರರು ಒಂದೇ ಕ್ರಮಸಂಖ್ಯೆಯಲ್ಲಿ ಇರುವಂತೆ ಪಟ್ಟಿ ತಯಾರಿಸುವಂತೆ ಬಿಎಲ್ಎಗಳು ಕೋರಿದರು.ಜಿಪಂ ಯೋಜನಾ ನಿರ್ದೇಶಕರು ಹಾಗೂ ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಾಧಿಕಾರಿ ಶ್ಯಾಮಸುಂದರ್ ಕಾಂಬ್ಳೆ, ತಹಸೀಲ್ದಾರ್ ವಸಂತ ಕುಮಾರಿ ಯು.,ತಾಪಂ ಇಓ ರಾಮರೆಡ್ಡಿ ಪಾಟೀಲ್,ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಬಿಇಓ ನಟೇಶ, ಸಿಡಿಪಿಓ ಶಿವಶರಣಪ್ಪ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್,ತರಬೇತುದಾರ ಕುಮಾರಸ್ವಾಮಿ, ಸೋಮಶೇಖರಗೌಡ ಸೇರಿ ಬಿಎಲ್ಎಗಳು ಇದ್ದರು.