ಪ್ರತಿ ಮತದಾರರಿಂದ ಎರಡು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತಿದ್ದು, ಒಂದು ಪ್ರತಿಯನ್ನು ಬಿಎಲ್‌ಒಗಳು ಇಲಾಖೆಯ ದಾಖಲೆಯಾಗಿ ಇಟ್ಟುಕೊಳ್ಳುತ್ತಿದ್ದಾರೆ.

ಬಳ್ಳಾರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ಗಣಿಜಿಲ್ಲೆ ಬಳ್ಳಾರಿಯಲ್ಲಿ ಮಂಗಳವಾರ ಅಧಿಕೃತ ಚಾಲನೆ ದೊರೆತಿದ್ದು, ಜಿಲ್ಲೆಯಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ವೇಗ ನೀಡಿದ್ದಾರೆ.

ಬೆಳಗ್ಗೆಯಿಂದಲೇ ವಿವಿಧ ಬೂತ್‌ಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿದ ಬಿಎಲ್‌ಒಗಳು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮತದಾರರ ವಿವರಗಳನ್ನು ಪರಿಶೀಲಿಸಿದರು. ನಿಗದಿತ ಅರ್ಜಿ ನಮೂನೆಗಳಲ್ಲಿ ಮತದಾರರ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಿಕೊಂಡರು. ಬಳಿಕ ಭರ್ತಿಯಾದ ಅರ್ಜಿಗಳನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಚುನಾವಣಾ ಆಯೋಗದ ಡಿಜಿಟಲ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಕಾರ್ಯವನ್ನೂ ಸ್ಥಳದಲ್ಲಿಯೇ ನಡೆಸಿದರು.

ಪ್ರತಿ ಮತದಾರರಿಂದ ಎರಡು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತಿದ್ದು, ಒಂದು ಪ್ರತಿಯನ್ನು ಬಿಎಲ್‌ಒಗಳು ಇಲಾಖೆಯ ದಾಖಲೆಯಾಗಿ ಇಟ್ಟುಕೊಳ್ಳುತ್ತಿದ್ದಾರೆ. ಮತ್ತೊಂದು ಪ್ರತಿಯನ್ನು ಮತದಾರರಿಗೆ ದಾಖಲೆಯಾಗಿ ನೀಡಲಾಗುತ್ತಿದೆ. ಇದರಿಂದ ಅರ್ಜಿ ಸಲ್ಲಿಸಿರುವ ಬಗ್ಗೆ ಮತದಾರರ ಬಳಿಯೂ ಅಧಿಕೃತ ದಾಖಲೆ ಉಳಿಯಲಿದೆ.

ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ಬಿಎಲ್‌ಒಗಳು, ಮನೆ ಮನೆಗೆ ತೆರಳಿ ಪ್ರತಿ ಅರ್ಹ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಾಗುತ್ತಿದೆ. ಯಾರೊಬ್ಬ ಮತದಾರರೂ ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಮನೆಗೆ ಭೇಟಿ ನೀಡಿದ ವೇಳೆ ಮತದಾರರು ಇಲ್ಲದಿದ್ದರೆ ತಿಂಗಳ ಅವಧಿಯಲ್ಲಿ ಮೂರು ಬಾರಿ ಪುನಃ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಹಿತಿ ಸಂಗ್ರಹ ಹಾಗೂ ಅರ್ಜಿ ಅಪ್‌ಲೋಡ್ ಪ್ರಕ್ರಿಯೆ ಪೂರ್ಣಗೊಂಡ ಮನೆಗಳಿಗೆ ಬಿಳಿ-ನೇರಳೆ ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಇದು ಪರಿಶೀಲನೆ ಪೂರ್ಣಗೊಂಡಿರುವುದರ ಸಂಕೇತವಾಗಿದೆ. ಒಂದು ವೇಳೆ ಮನೆಗೆ ಭೇಟಿ ನೀಡಿದಾಗ ಯಾರೂ ಇಲ್ಲದಿದ್ದರೆ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಆ ಮನೆಗಳನ್ನು ಗುರುತಿಸಲಾಗುತ್ತದೆ. ನಂತರ ಅಂತಹ ಮನೆಗಳಿಗೆ ಮತ್ತೆ ಭೇಟಿ ನೀಡಿ ಮತದಾರರ ವಿವರಗಳನ್ನು ಸಂಗ್ರಹಿಸಿ ನೋಂದಣಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಐಆರ್‌ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಚುನಾವಣಾ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬಿಎಲ್‌ಒಗಳಿಗೆ ಮೊಬೈಲ್ ಆಧರಿತ ಡಿಜಿಟಲ್ ವ್ಯವಸ್ಥೆಯ ಮೂಲಕ ಮಾಹಿತಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಮಾಹಿತಿ ತ್ವರಿತವಾಗಿ ಚುನಾವಣಾ ಆಯೋಗದ ಕೇಂದ್ರ ಸರ್ವರ್‌ಗೆ ತಲುಪುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿಡುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರು ಅಗತ್ಯ ದಾಖಲೆ, ಮಾಹಿತಿ ಒದಗಿಸಿ ಸಹಕರಿಸುವಂತೆ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆಯಡಿ ಜಿಲ್ಲೆಯ 2025ರ ಪಟ್ಟಿಯ ಅನ್ವಯ ಇರುವ ಒಟ್ಟು 12,28,958 ಮತದಾರರ ಪೈಕಿ ಬರೋಬ್ಬರಿ 12,00,463 (ಶೇ 97.68 ರಷ್ಟು) ಜನರನ್ನು ಪತ್ತೆ ಹಚ್ಚಲಾಗಿದೆ.

ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ, ದೋಷರಹಿತಗೊಳಿಸುವ ಉದ್ದೇಶದಿಂದ ಚುನಾವಣೆ ಆಯೋಗ ಎಸ್‌ಐಆರ್‌ ಗೆ ಚಾಲನೆ ನೀಡಿದೆ. ಪ್ರತಿ ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎನ್ನುತ್ತಾರೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.