ಸಾರಾಂಶ
ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಪದ್ಮವಿಭೂಷಣ ಪುರಸ್ಕೃತ ದಿ. ಗಂಗೂಬಾಯಿ ಹಾನಗಲ್ ಅವರನ್ನು ಸ್ಮರಣೀಯಗೊಳಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಧಾರವಾಡ: ಗಾನವಿದೂಷಿ ಗಂಗೂಬಾಯಿ ಹಾನಗಲ್ ಅವರ ಜನ್ಮಸ್ಥಳವಾದ ನಗರದ ಹೊಸಯಲ್ಲಾಪೂರದ ಗಂಗೋತ್ರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಬುಧವಾರ ಭೇಟಿ ನೀಡಿ, ಆ ಮನೆ ಅಭಿವೃದ್ಧಿಪಡಿಸುವ ಕುರಿತು ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಸಂಗೀತ ಕಲಾವಿದರೊಂದಿಗೆ ಚರ್ಚಿಸಿದರು.
ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಪದ್ಮವಿಭೂಷಣ ಪುರಸ್ಕೃತ ದಿ. ಗಂಗೂಬಾಯಿ ಹಾನಗಲ್ ಅವರನ್ನು ಸ್ಮರಣೀಯಗೊಳಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ವೃತ್ತಿ ರಂಗಭೂಮಿಯಲ್ಲಿ ಧಾರವಾಡದ ಪ್ರಸಿದ್ಧಿಯನ್ನು ಅನೇಕ ಕಲಾವಿದರು ದಾಖಲಿಸಿದ್ದಾರೆ. ಅವರ ಕೊಡುಗೆ ಮತ್ತು ಸಾಧನೆಯನ್ನು ಸ್ಮರಿಸುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಮುಂದುವರೆಸಲು ಅಗತ್ಯ ಸೌಲಭ್ಯ, ಅವಕಾಶಗಳನ್ನು ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದೆ.ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಇತರ ಉದ್ಯಮಗಳ ಆರ್ಥಿಕ ನೆರವಿನಲ್ಲಿ ಗಂಗೋತ್ರಿಯನ್ನು ಅಭಿವೃದ್ಧಿಪಡಿಸಿ, ಸಂಗೀತ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಲು ಜಿಲ್ಲಾಡಳಿತದಿಂದ ಮುನ್ನೋಟದ ರೂಪರೇಷಗಳನ್ನು ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಮಯದಲ್ಲಿ ಹೇಳಿದರು.
ಈಗಿರುವ ಗಂಗೋತ್ರಿಯ ಜಾಗ ಚಿಕ್ಕದಾಗಿರುವುದರಿಂದ ಅಕ್ಕಪಕ್ಕದ ಖಾಲಿ ಜಾಗೆಗಳನ್ನು ಪಡೆಯುವ ಕುರಿತು ಅವುಗಳ ಮಾಲೀಕರೊಂದಿಗೆ ಸಂಪರ್ಕಿಸಲಾಗುವುದು. ಒಪ್ಪಿದಲ್ಲಿ ಆ ಜಾಗೆಗಳನ್ನು ಬಳಸಿಕೊಂಡು ಉತ್ತಮವಾದ ಸಂಗೀತ- ಸಾಂಸ್ಕೃತಿಕ ಭವನ ಹಾಗೂ ನಿರಂತರವಾಗಿ ಸಂಗೀತ ಪಾಠಶಾಲೆಗಳು ನಡೆಯುವಂತೆ ಮಾಡಲಾಗುವುದು. ಸ್ಥಳೀಯ ಕಲಾವಿದರ, ಸಂಗೀತಗಾರರ ಸಹಕಾರದಿಂದ ನಿರಂತರವಾಗಿ ಸಂಗೀತ ಸಭೆಗಳು ಜರಗುವಂತೆ ಯೋಜಿಸಲಾಗುವುದು. ಅವರ ಕಿರಾಣಾ ಘರಣಾ ಸಂಗೀತವನ್ನು ಮುಂದುವರೆಸುವ ಆಸಕ್ತರಿಗೆ ಪ್ರೋತ್ಸಾಹಿಸಲಾಗುವುದು ಎಂದರು.ಗಂಗೋತ್ರಿ ಸ್ಮಾರಕವಾಗಿಸಲು ಅಗತ್ಯ ನೀಲನಕ್ಷೆಯನ್ನು ಅಂದಾಜು ವೆಚ್ಚದ ಪಟ್ಟಿಯೊಂದಿಗೆ ಸರ್ಕಾರಕ್ಕೆ ಹಾಗೂ ಸಿಎಸ್‌ಆರ್ ನೆರವಿಗಾಗಿ ಸಲ್ಲಿಸಲು ಅಗತ್ಯ ಪ್ರಸ್ತಾವನೆ ತಯಾರಿಸಿ, ಒಂದು ವಾರದಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಅವರು ಸೂಚಿಸಿದರು.
ಪಾಲಿಕೆಯ ಸದಸ್ಯ ಶಂಕರ ಶಳಕೆ, ಹಿರಿಯ ನ್ಯಾಯವಾದಿ ಅರುಣ ಚರಂತಿಮಠ, ಕಲಾವಿದ ಪ್ರಸನ್ನ ಗುಡಿ, ಡಾ. ಶಶಿಧರ ನರೇಂದ್ರ, ರಾಘವೇಂದ್ರ ಗುಡಿ, ಸಂಗೀತ ಕಲಾವಿದೆ ಭಾರ್ಗವಿ ಗುಡಿ, ವೀರಣ್ಣ ಪತ್ತಾರ, ಉದಯ ಯಂಡಿಗೇರಿ, ಅಣ್ಣಪ್ಪ ಪಾಲನಕರ, ಸಮೀರ ಜೋಶಿ, ಸಂಜೀವ ದುಮುಕನಾಳ ಸೇರಿದಂತೆ ಗಂಗೂಬಾಯಿ ಹಾನಗಲ್ ಅನುಯಾಯಿಗಳು, ಅಭಿಮಾನಿಗಳಿದ್ದರು.