ಬಿಎಂಎಂ ಕಾರ್ಖಾನೆ ₹16 ಕೋಟಿ ತೆರಿಗೆ ಬಾಕಿ ವಸೂಲಿ ಮಾಡಿ: ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕಡಕ್‌ ಸೂಚನೆ

| Published : Jan 28 2025, 12:48 AM IST

ಬಿಎಂಎಂ ಕಾರ್ಖಾನೆ ₹16 ಕೋಟಿ ತೆರಿಗೆ ಬಾಕಿ ವಸೂಲಿ ಮಾಡಿ: ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕಡಕ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಂಎಂ ಕಾರ್ಖಾನೆಯ ₹16 ಕೋಟಿ ತೆರಿಗೆ ಬಾಕಿ ವಸೂಲಿ ಮಾಡಬೇಕು.

ಹೊಸಪೇಟೆ: ಬಿಎಂಎಂ ಕಾರ್ಖಾನೆ ಸೇರಿ ಜಿಲ್ಲೆಯ ಯಾವುದೇ ಕಾರ್ಖಾನೆಗಳು ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಸಂಬಂಧಿಸಿದ ಗ್ರಾಪಂಗಳು ವಸೂಲಾತಿ ಮಾಡಬೇಕು. ಕಾರ್ಖಾನೆಗಳ ಮುಲಾಜಿಗೆ ಯಾರೂ ಒಳಗಾಗಬಾರದು. ಬಿಎಂಎಂ ಕಾರ್ಖಾನೆಯ ₹16 ಕೋಟಿ ತೆರಿಗೆ ಬಾಕಿ ವಸೂಲಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಜಿಪಂ ಸಿಇಒಗೆ ಕಡಕ್ಕಾಗಿ ಸೂಚಿಸಿದರು.

ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಜಯನಗರ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಎಂಎಂ ಕಾರ್ಖಾನೆ ಕಳೆದ ಎರಡು ವರ್ಷಗಳಿಂದ ₹16 ಕೋಟಿ ಬಾಕಿ ಉಳಿಸಿಕೊಂಡಿದೆ. ಡಣಾಪುರ ಗ್ರಾಪಂ ವಸೂಲಿ ಮಾಡಬೇಕು. ಈ ಬಗ್ಗೆ ಜಿಪಂ ಸಿಇಒ ಅಕ್ರಂ ಶಾ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ಡಣಾಪುರ ಬಳಿಯ ಬಿಎಂಎಂ ಕಾರ್ಖಾನೆ ಕಳೆದ ಎರಡು ವರ್ಷಗಳಿಂದ ₹16 ಕೋಟಿ ಗ್ರಾಪಂಗೆ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಡವರು ಉಳಿಸಿಕೊಂಡಿದ್ದರೆ, ನೀರಿನ ನಲ್ಲಿ ಬಂದ್‌ ಮಾಡಲಾಗುತ್ತದೆ. ಆದರೆ, ಕಾರ್ಖಾನೆ ಬಾಕಿ ಉಳಿಸಿಕೊಂಡಿದ್ದರೂ ಸುಮ್ಮನಿದ್ದಾರೆ? ಈ ಬಗ್ಗೆ ಕ್ರಮ ಏಕಿಲ್ಲ? ಎಂದು ಪ್ರಶ್ನಿಸಿದರು.

ಈ ವೇಳೆ ಶಾಸಕ ಕೆ.ನೇಮರಾಜ್‌ ನಾಯ್ಕ ಮಧ್ಯಪ್ರವೇಶಿಸಿ, ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಕಾರ್ಖಾನೆಗಳವರು ನಮಗೇ ಆಯ್ಕೆ ಮಾಡುವುದಿಲ್ಲ. ಯಾವುದೇ ಮುಲಾಜಿಗೊಳಗಾಗದೇ ತೆರಿಗೆ ಬಾಕಿ ವಸೂಲಿ ಮಾಡಬೇಕು. ಸ್ಮಯೋರ್‌, ಎಸ್‌ಎಲ್‌ಆರ್‌ ಸೇರಿದಂತೆ ಇತರೆ ಕಾರ್ಖಾನೆಗಳ ತೆರಿಗೆ ಬಾಕಿ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಆಸ್ತಿ ಇಲ್ಲವೇ ಆದಾಯದ ಘೋಷಣೆ ಮೇಲೆ ಗ್ರಾಪಂ ತೆರಿಗೆ ವಸೂಲಿ ಮಾಡಬೇಕು. ಈವೆರಡರ ಪೈಕಿ ಯಾವುದರಲ್ಲಿ ಹೆಚ್ಚಿಗೆ ಬರುತ್ತದೆ ಅದರ ಮೇಲೆ ತೆರಿಗೆ ವಸೂಲಾತಿ ಮಾಡಬೇಕು ಎಂದರು.

ಜಿಪಂ ಸಿಇಒ ಅಕ್ರಂ ಶಾ ಪ್ರತಿಕ್ರಿಯಿಸಿ, ಮೂರು ಬಾರಿ ನೋಟಿಸ್‌ ನೀಡಿದ್ದೇವೆ. ₹1.25 ಕೋಟಿ ತೆರಿಗೆ ಬಾಕಿ ಪಾವತಿಸಿದ್ದಾರೆ. ಅವರು ಒಂದು ವೇಳೆ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರೂ ಶೇ.50ರಷ್ಟು ತೆರಿಗೆ ಪಾವತಿ ಮಾಡಿಯೇ ಸಲ್ಲಿಸಬೇಕು. ಕಾರ್ಖಾನೆಗಳ ತೆರಿಗೆ ಬಾಕಿ ವಸೂಲಾತಿಗೆ ಮತ್ತೊಮ್ಮೆ ಸಂಬಂಧಿಸಿದ ಗ್ರಾಪಂಗಳ ಪಿಡಿಒಗಳಿಗೆ ಸೂಚಿಸಲಾಗುವುದು ಎಂದರು.

ಶಾಲಾ, ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ಗಳ ಸಮಸ್ಯೆ ಉಂಟಾಗಿದೆ. ನಗರ ಸಾರಿಗೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆ ನೀಗಿಸಬೇಕು ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಅವರಿಗೆ ಸಚಿವರು ತಾಕೀತು ಮಾಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಅನುದಾನ ತರೋಣ. ₹2000 ಕೋಟಿ ಅನುದಾನಕ್ಕೆ ಇನ್ನು ಕ್ರಿಯಾ ಯೋಜನೆ ರೂಪಿಸಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ, ಕೆಕೆಆರ್‌ಡಿಬಿ ಅಧ್ಯಕ್ಷರ ಜೊತೆಗೆ ವಿಶೇಷ ಸಭೆ ಕರೆದು, ಅನುದಾನ ತರಬಹುದು ಎಂದು ಸಚಿವರು ಸಭೆಯಲ್ಲಿ ಹೇಳಿದರು. ಇದಕ್ಕೆ ಎಲ್ಲಾ ಶಾಸಕರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು.

ಏತ ನೀರಾವರಿ ಸಮಸ್ಯೆ ಬಗೆಹರಿಸಿ: ಪಾಪಿನಾಯಕನಹಳ್ಳಿ ಏತ ನೀರಾವರಿಗೆ 243 ಕೋಟಿ ರು. ಮಂಜೂರಾಗಿದ್ದು, ಈ ಪೈಕಿ 170 ಕೋಟಿ ರು. ಈಗಾಗಲೇ ಗುತ್ತಿಗೆದಾರರಿಗೆ ಪಾವತಿ ಆಗಿದೆ. ಆದರೆ, ಕಾಮಗಾರಿ ಸಮರ್ಪಕವಾಗಿಲ್ಲ. ಶಾಸಕ ಎಚ್‌.ಆರ್‌. ಗವಿಯಪ್ಪ ನೇತೃತ್ವದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ನಡೆಸಬೇಕು. ಜಾಕ್‌ ವೆಲ್‌ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದು ಸಚಿವರು ಹೇಳಿದರು. ಆರೋಗ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಶಾಸಕರಾದ ಎಚ್‌.ಆರ್‌. ಗವಿಯಪ್ಪ, ಕೆ. ನೇಮರಾಜ್‌ ನಾಯ್ಕ, ಎಂ.ಪಿ. ಲತಾ, ಡಾ. ಎನ್‌.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ, ದೇವೆಂದ್ರಪ್ಪ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಮೆಹರೋಜ್‌ ಖಾನ್‌, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಜಿಪಂ ಸಿಇಒ ಅಕ್ರಂ ಶಾ ಮತ್ತಿತರರಿದ್ದರು.

ಮೊರಾರ್ಜಿ ಶಾಲೆ ಸಮಸ್ಯೆ: ಕನ್ನಡಪ್ರಭ ವರದಿ ಚರ್ಚೆ: ಹರಪನಹಳ್ಳಿಯ ಮೊರಾರ್ಜಿ ವಸತಿ ಶಾಲೆ ಮಕ್ಕಳು ಊಟದ ಕೊಠಡಿಯಲ್ಲಿ ಮಲಗುವ ಸ್ಥಿತಿ ಇದೆ. ಮಕ್ಕಳ ಸಮಸ್ಯೆಗೆ ಅಲ್ಪಸಂಖ್ಯಾತ ಇಲಾಖೆ ಕ್ರಮವಹಿಸುತ್ತಿಲ್ಲ. ಕನ್ನಡಪ್ರಭ ಪತ್ರಿಕೆ ಈ ಬಗ್ಗೆ ವರದಿ ಕೂಡ ಪ್ರಕಟಿಸಿದೆ ಎಂದು ಶಾಸಕಿ ಎಂ.ಪಿ. ಲತಾ ಸಭೆ ಗಮನ ಸೆಳೆದರು. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು. ಅಪೂರ್ಣ ಕಟ್ಟಡ ಬೇಗನೆ ಪೂರ್ಣಗೊಳಿಸಬೇಕು. ಅನುದಾನದ ಕೊರತೆ ಉಂಟಾದರೆ ಗಮನಕ್ಕೆ ತನ್ನಿ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅಧಿಕಾರಿಗೆ ಸೂಚಿಸಿದರು.

ಕನ್ನಡಪ್ರಭ ವರದಿ: ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಸೂಚನೆ

ಹೂವಿನಹಡಗಲಿ ಭಾಗದಲ್ಲಿ ತೆಪ್ಪದಲ್ಲಿ ಆಗಮಿಸಿ ಅಕ್ರಮವಾಗಿ ಮರಳು ತೆಗೆದುಕೊಂಡು ಹೋಗುತ್ತಿರುವ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ "ತುಂಗಭದ್ರೆಯ ಮರಳು ಲೂಟಿ " ಎಂಬ ಶೀರ್ಷಿಕೆಯ ವರದಿ ಸಭೆಯಲ್ಲಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಪ್ರಸ್ತಾಪಿಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೂಡಲೇ ಕ್ರಮ ವಹಿಸಬೇಕು. ಪೊಲೀಸರು ಕೂಡಲೇ ಹಾವೇರಿ, ಗದಗ ಗಡಿ ಭಾಗದಿಂದ ಆಗಮಿಸಿ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿರುವವರ ಮೇಲೆ ಹದ್ದಿನ ಕಣ್ಣಿಟ್ಟು ಕ್ರಮವಹಿಸಬೇಕು. ಪೊಲೀಸರು ಈ ಕೆಲಸ ಈಗಿನಿಂದಲೇ ಮಾಡಬೇಕು ಎಂದು ಸಭೆಯಲ್ಲಿ ಎಎಸ್ಪಿ ಸಲೀಂ ಪಾಷಾ ಅವರಿಗೆ ಸೂಚಿಸಿದರು.