ಸಾರಾಂಶ
ಬೆಂಗಳೂರು: ಆತ್ಮಹತ್ಯೆ, ಆಯತಪ್ಪಿ ಬೀಳುವ ಪ್ರಕರಣ ಹೆಚ್ಚಿದ ಬೆನ್ನಲ್ಲೆ ‘ನಮ್ಮ ಮೆಟ್ರೋ’ಗೆ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ಅಳವಡಿಕೆಗೆ ಒತ್ತಾಯ ಹೆಚ್ಚಾಗಿದ್ದು, ಇದರ ಅಳವಡಿಕೆಗೆ ಸುಮಾರು ₹ 450 - ₹ 500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿದೆ.
ಮುಂಬರುವ ಕಾಳೇನ ಅಗ್ರಹಾರ-ನಾಗವಾರ ನಡುವಿನ ಗುಲಾಬಿ ಮಾರ್ಗಕ್ಕೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆ ಆಗಲಿದೆ. ಆದರೆ, ಈಗಿನ ಹಸಿರು, ನೇರಳೆ ಮಾರ್ಗದಲ್ಲಿ ಈ ವ್ಯವಸ್ಥೆ ಇಲ್ಲದಿರುವ ಕಾರಣ ಹಳಿಗೆ ಬೀಳುವ ಪ್ರಕರಣ ಹೆಚ್ಚಾಗಿದೆ. ನಗರದಲ್ಲಿನ ಒಟ್ಟು 65 ಮೆಟ್ರೋ ನಿಲ್ದಾಣಗಳಿದ್ದು, ಪ್ರತಿ ನಿಲ್ದಾಣಕ್ಕೆ ಪಿಎಸ್‌ಡಿ ಅಳವಡಿಸಲು 7 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ. ಕೆಂಪೇಗೌಡ ನಿಲ್ದಾಣದಲ್ಲಿ ಒಟ್ಟು 4 ಪ್ಲಾಟ್ ಫಾರ್ಮ್‌ಗಳಿದ್ದು, ಇಲ್ಲಿ ಹೆಚ್ಚು ವೆಚ್ಚವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳ ಕಾರ್ಯಾಚರಣೆ ವೇಳೆ ಪಿಎಸ್‌ಡಿ ಅಳವಡಿಕೆ ಕಷ್ಟವಾಗಲಿದೆ. ಜೊತೆಗೆ ಈ ವೆಚ್ಚವನ್ನು ಬಿಎಂಆರ್‌ಸಿಎಲ್ ಭರಿಸುವುದು ಕಷ್ಟ. ಹೀಗಾಗಿ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಕೈಗೊಳ್ಳುವ ಬಗ್ಗೆ ಸರ್ಕಾರ ಯೋಚಿಸಬೇಕಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.