ಬಿಎಂಟಿಸಿ ಸಹಾಯವಾಣಿಕೇಂದ್ರ ಶೀಘ್ರ ಮೇಲ್ದರ್ಜೆಗೆ

| Published : Feb 02 2024, 01:01 AM IST

ಸಾರಾಂಶ

ಬಿಎಂಟಿಸಿಯು ತನ್ನ ಸಹಾಯವಾಣಿ ಕೇಂದ್ರವನ್ನು ಉನ್ನತೀಕರಿಸಲು ನಿರ್ಧರಿಸಿದೆ, ಟೋಲ್‌ ನಂ ಅನ್ನು 4 ಅಂಕೆಗೆ ಇಳಿಸಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಬಸ್‌ ಸೇವೆ ಉತ್ತಮಗೊಳಿಸಲು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರುವ ದೂರು ಸೇರಿದಂತೆ ದೂರವಾಣಿ ಮೂಲಕ ಬರುವ ಪ್ರಯಾಣಿಕರ ದೂರುಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲು ಹೊಸದಾಗಿ ಸಹಾಯವಾಣಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.

ಪ್ರತಿನಿತ್ಯ ಬಿಎಂಟಿಸಿ 5,500ಕ್ಕೂ ಹೆಚ್ಚಿನ ಬಸ್‌ಗಳ ಮೂಲಕ 30 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುತ್ತಿದೆ. ಸದ್ಯ ಇರುವ ಸಹಾಯವಾಣಿ ಕೇಂದ್ರವು ದೂರುಗಳನ್ನು ಸ್ವೀಕರಿಸಿ, ಇತ್ಯರ್ಥಗೊಳಿಸುವ ಕೆಲಸ ಮಾಡುತ್ತಿದೆ. ಆದರೆ, ಅದನ್ನು ಇನ್ನಷ್ಟು ಉತ್ತಮಗೊಳಿಸಲು ಹೊಸದಾಗಿ ಸಹಾಯವಾಣಿ ಕೇಂದ್ರ ತೆರೆಯಲು ನಿರ್ಧರಿಸಿದೆ. ಪ್ರಯಾಣಿಕರಿಂದ ದೂರವಾಣಿ ಮೂಲಕ ಬರುವ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತಿದೆ. ಅಲ್ಲದೆ, ಸಹಾಯವಾಣಿ ಸಂಖ್ಯೆಯನ್ನು ನಾಲ್ಕು ಅಂಕೆಗೆ ಇಳಿಸುವುದು ಸೇರಿ ಇನ್ನಿತರ ಬದಲಾವಣೆ ತರಲು ಉದ್ದೇಶಿಸಲಾಗಿದೆ.

ನೂತನವಾಗಿ ಸ್ಥಾಪಿಸಲಾಗುವ ಸಹಾಯವಾಣಿ ಕೇಂದ್ರದಲ್ಲಿ ಪ್ರತಿದಿನ ಮೂರು ಸಾವಿರ ದೂರವಾಣಿ ಕರೆಗಳನ್ನು ಸ್ವೀಕರಿಸುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಫೇಸ್‌ಬುಕ್‌, ಟ್ವಿಟ್ಟರ್‌ (ಎಕ್ಸ್‌), ವಾಟ್ಸ್‌ಆ್ಯಪ್‌ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳಿಂದ ಬಿಎಂಟಿಸಿ ಸೇವೆ ಬಗ್ಗೆ ಬರುವ ದೂರುಗಳನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.