ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪನವರಿಗೆ ಟಿಕೆಟ್ ನೀಡಿದ್ದು, ಕ್ಷೇತ್ರದ ಜನತೆಯ ಪರವಾಗಿ ಮತ್ತೊಮ್ಮೆ ಈ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಪುನರಾಯ್ಕೆಯಾಗುವಂತೆ ಚಂದ್ರಪ್ಪನವರಿಗೆ ಶುಭಹಾರೈಸುವುದಲ್ಲದೆ, ಪಕ್ಷದ ವರಿಷ್ಠರನ್ನು ಸಹ ಅಭಿನಂದಿಸುವುದಾಗಿ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಸೋಮವಾರ ನಗರದ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮತಗಟ್ಟೆ ಏಜೆಂಟರುಗಳ ಒಂದು ದಿನದ ಕಾರ್ಯಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸುಮಾರು ೧೦ ತಿಂಗಳಿನಿಂದ ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನೇತೃತ್ವದ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ಧಾರೆ. ರಾಜ್ಯದ ಕಡುಬಡವರು ಹಾಗೂ ನಿರ್ಗತಿಕರಿಗೆ ಉತ್ತಮ ಬದುಕು ರೂಪಿಸಿಕೊಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪ್ರತಿ ಚುನಾವಣೆಯಲ್ಲೂ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಕಳೆದ ಸುಮಾರು ೧೦ ವರ್ಷಗಳಿಂದ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಮತ್ತೊಮ್ಮೆ ಅವರು, ಈ ಕ್ಷೇತ್ರದ ಲೋಕಸಭೆಗೆ ಆಯ್ಕೆಯಾಗಲು ಎಲ್ಲಾ ಕಾರ್ಯಕರ್ತರು ಹಗಲು, ರಾತ್ರಿ ಎನ್ನದೆ ಶ್ರಮವಹಿಸಿ ಬಿ.ಎನ್.ಚಂದ್ರಪ್ಪನವರ ವಿಜಯಕ್ಕೆ ದಿಟ್ಟ ಹೋರಾಟ ನಡೆಸಬೇಕು. ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂಬ ಮನೋಭಾವನೆ ಈ ಭಾಗದ ಜನರಲ್ಲಿದೆ ಎಂದರು.
ಮತಗಟ್ಟೆ ಏಜೆಂಟರ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ಮಾತನಾಡಿದ ಡಾ.ದೀಪಾ, ಸ್ವಾತಂತ್ರ್ಯ ಪೂರ್ವದಿಂದಲೇ ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಾ ಬಂದಿದೆ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ, ರಾಜೀವಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್‌ಸಿಂಗ್ ಮುಂತಾದ ಮಹಾನ್ ನಾಯಕರು ಈ ಪಕ್ಷವನ್ನು ಮುನ್ನಡೆಸಿದ್ದಾರೆ. ಆದರೆ, ಕಳೆದ ೪೦ ವರ್ಷಗಳಿಂದ ರಾಷ್ಟ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಬಿಜೆಪಿ ಕಾಂಗ್ರೆಸ್ ಪಕ್ಷದ ಸಾಧನೆ ಏನು ಇಲ್ಲವೆಂದು ಮತದಾರರಿಗೆ ಸುಳ್ಳು ಹೇಳುತ್ತಿದೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಬಿ.ಎನ್.ಚಂದ್ರಪ್ಪನವರ ಗೆಲುವಿಗೆ ಕೈಜೋಡಿಸಿ ಎಂದರು.ಪ್ರಾಸ್ತಾವಿಕವಾಗಿ ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಟಿ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಎಂದರು. ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಅಮೃತೇಶ್ವರಪ್ಪ, ಮಾಜಿ ಜಿಪಂ ಸದಸ್ಯ ಟಿ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಶಶಿಧರ, ಹಿರಿಯ ಮುಖಂಡರ ಟಿ.ಪ್ರಭುದೇವ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಸುಜಾತ, ಸುಮಕ್ಕ, ಕವಿತಾ, ಎಂ.ಜೆ.ರಾಘವೇಂದ್ರ, ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ನಟರಾಜ್, ಟಿ.ವೀರಭದ್ರಿ, ನೇತಾಜಿಪ್ರಸನ್ನ, ಮುಖಂಡರಾದ ಬಿ.ಮೈಲಾರಪ್ಪ, ಗೀತಾಬಾಯಿ, ಗದ್ದಿಗೆ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.