ನಿಗಮ-ಮಂಡಳಿ ಪಟ್ಟಿಗೆ 26ವರೆಗೆ ಕಾಂಗ್ರೆಸ್‌ ಬ್ರೇಕ್‌!

| Published : Jan 20 2024, 02:01 AM IST / Updated: Jan 20 2024, 12:10 PM IST

ನಿಗಮ-ಮಂಡಳಿ ಪಟ್ಟಿಗೆ 26ವರೆಗೆ ಕಾಂಗ್ರೆಸ್‌ ಬ್ರೇಕ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತರಿಗೆ ನಿಗಮ ಮಂಡಳಿ ಹುದ್ದೆ ಹಂಚುವ ಕುರಿತು ಗೊಂದಲ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿದ್ದು, ಡಿಕೆಶಿ ಜತೆ ಮತ್ತೆ ಚರ್ಚಿಸಲಿರುವ ಸುರ್ಜೇವಾಲ 26ರ ಬಳಿಕ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರ್ಯಕರ್ತರಿಗೆ ಯಾವ ನಿರ್ದಿಷ್ಟ ನಿಗಮ ಮಂಡಳಿ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನೇಮಕಾತಿ ಪಟ್ಟಿ ಬಿಡುಗಡೆಗೆ ಜ.26ರವರೆಗೆ ತಡೆ ಬಿದ್ದಿದೆ.ಈಗಾಗಲೇ 37 ಮಂದಿ ಶಾಸಕರು ಹಾಗೂ 39 ಮಂದಿ ಕಾರ್ಯಕರ್ತರು ಸೇರಿ 76 ನಿಗಮ-ಮಂಡಳಿ ನೇಮಕಕ್ಕೆ ನಿರ್ಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. 

ಈ ಪೈಕಿ 37 ಮಂದಿ ಶಾಸಕರಿಗೆ ಯಾವ್ಯಾವ ನಿಗಮ-ಮಂಡಳಿ ಅಧಿಕಾರ ನೀಡಬೇಕು ಎಂಬುದು ಅಖೈರುಗೊಂಡಿದೆ. ಆದರೆ ಕಾರ್ಯಕರ್ತರಿಗೆ ಯಾವ್ಯಾವ ನಿಗಮ-ಮಂಡಳಿ ಅಧಿಕಾರ ಹಂಚಿಕೆಯಾಗಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

ಹೀಗಾಗಿ ಕಾರ್ಯಕರ್ತರಿಗೆ ನಿರ್ದಿಷ್ಟ ನಿಗಮ ಮಂಡಳಿ ನೀಡುವ ಪ್ರಕ್ರಿಯೆ ನಡೆಯಬೇಕಿದೆ. ಮೂಲಗಳ ಪ್ರಕಾರ ಈ ಪ್ರಕ್ರಿಯೆ ನಡೆಸಲು ಜ.26ಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. 

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ಯಾವ್ಯಾವ ಕಾರ್ಯಕರ್ತರಿಗೆ ಯಾವ್ಯಾವ ನಿಗಮ-ಮಂಡಳಿ ನೀಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಈ ಚರ್ಚೆಯ ನಂತರವೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಯಾವಾಗ ಹೊರ ಬೀಳಲಿದೆ ಎಂಬುದು ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.