ಸಾರಾಂಶ
ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿ ಮೂಲಕ ಹೆಚ್ಚು ನೀರು ಹರಿಬಿಟ್ಟ ಹಿನ್ನೆಲೆ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರ ಬೋಟಿಂಗ್ ಸ್ಥಗಿತಗೊಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶ, ಕೊಡಗು ಸೇರಿದಂತೆ ವಿವಿಧೆಡೆ ವ್ಯಾಪಕವಾಗಿ ಮಳೆಯಾಗಿ, ಅಧಿಕ ಪ್ರಮಾಣದಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿರುವ ಹಿನ್ನೆಲೆ ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಕಾವೇರಿ ನದಿ ಮೂಲಕ ನೀರು ಹೊರಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದ ಪ್ರವಾಹದ ಆತಂಕದಲ್ಲಿದೆ. ಪ್ರವಾಹದಿಂದ ಪಕ್ಷಿ ಸಂಕುಲಗಳು ರಕ್ಷಣೆಗಾಗಿ ಮರದ ತುತ್ತ ತುದಿಗೆ ಏರಿ ಕುಳಿತುಕೊಂಡಿವೆ. ಬುಧವಾರ ಸಂಜೆ ವೇಳೆಗೆ ಅಣೆಕಟ್ಟೆಯಿಂದ ನದಿಗೆ 35 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದಲ್ಲಿ, ಪಕ್ಷಿಗಳ ಗೂಡು ಸೇರಿದಂತೆ ಮರಿಗಳಿಗೆ ಹಾನಿ ಸಾಧ್ಯತೆ ಹೆಚ್ಚಾಗಿವೆ. ಪ್ರವಾಹದ ಆತಂಕದಿಂದ ಪಕ್ಷಿಧಾಮದಲ್ಲಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ತಾಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ಪಾತ್ರದ ಸ್ಥಳಗಳಿಗೆ ತೆರಳದಂತೆ ನಿಷೇಧಾಜ್ಞೆ ಹೊರಡಿಸಿ ಆದೇಶ ಹೊರಡಿಸಿದೆ.