ಕಲಘಟಗಿ:

ದೇಹದಾನವು ಮಾನವೀಯತೆಯ ಮಹಾದಾನವಾಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಬೇಕಿದೆ. ಸತ್ತ ಮೇಲೆ ಮಣ್ಣಾಗಿ ಹೋಗಲಿರುವ ಈ ದೇಹವನ್ನು ವೈದ್ಯಕೀಯ ಕಾಲೇಜುಗಳ ಮಕ್ಕಳ ಸಂಶೋಧನೆಗೆ ಸಹಕಾರಿಯಾಗಲು ದೇಹದಾನ ಮಾಡಲು ಮುಂದಾಗುವಂತೆ ಪ್ರಾಧ್ಯಾಪಕ ಡಾ. ಬಿ.ಬಿ. ಹುನಗುಂದ ಕರೆ ನೀಡಿದರು.

ಅವರು ತಾಲೂಕಿನ ಕಾಡನಕೊಪ್ಪದ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಚನಾ ಶರೀರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇಹದಾನ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇಹದಾನದ ಮಹತ್ವ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ದೇಹದಾನದ ಅವಶ್ಯಕತೆ, ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಮತ್ತು ದೇಹದಾನಕ್ಕೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಅರಿವು ಮೂಡಿಸಲಾಯಿತು. ವೃದ್ಧಾಶ್ರಮದ ನಿವಾಸಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ತಜ್ಞರಿಂದ ಮಾಹಿತಿ ಪಡೆದರು. ರಚನಾ ಶರೀರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ರಾಥೋಡ, ಸಹ ಪ್ರಾಧ್ಯಾಪಕಿ ಡಾ. ಟಿ. ನಂದಿತಾ ಸೇರಿ ಹಲವರಿದ್ದರು.

ಇದೇ ವೇಳೆ ಸಂಹಿತಾ ಸಿದ್ಧಾಂತ ವಿಭಾಗದ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಯಿತು. ಪ್ರಾಧ್ಯಾಪಕರಾದ ಡಾ. ಸಂದೀಪ್ ದೇಸಾಯಿ, ಡಾ. ವಿನಯ್ ಹಿರೇಮಠ, ಡಾ. ವಿದ್ಯಾ ಬೆಳವಾಡಿ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಲಿಕಾ ವೈದ್ಯರು ಭಾಗವಹಿಸಿ ವೃದ್ಧಾಶ್ರಮದ ನಿವಾಸಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಹಾಗೂ ಔಷಧೋಪಚಾರವನ್ನು ಉಚಿತವಾಗಿ ನೀಡಿದರು.