ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಹತ್ಯೆಗೈದು ಮನೆ ಪಕ್ಕದ ಜಮೀನಿನಲ್ಲಿ ಹೂತಿಟ್ಟ ಘಟನೆ ತುಮಕೂರು ತಾಲೂಕು ಮುದ್ದರಾಮಯ್ಯನಪಾಳ್ಯದಲ್ಲಿ ನಡೆದಿದೆ. ಈ ಸಂಬಂಧ ಸೋಮವಾರ ಮೃತದೇಹ ಹೊರ ತೆಗೆದು ತುಮಕೂರು ತಹಸೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊರಟಗೆರೆ ತಾಲೂಕು ನಾಗೇನಹಳ್ಳಿ ಗ್ರಾಮದ ಸಿದ್ಧಗಂಗಮ್ಮ(44) ಎಂಬಾಕೆಯನ್ನು ಕಳೆದ ಐದು ದಿವಸದ ಹಿಂದೆ ಆರೋಪಿ ಮುದ್ದರಾಮಯ್ಯನಪಾಳ್ಯದ ನಂಜುಂಡಪ್ಪ (62) ಎಂಬಾತ ಕೊಲೆ ಮಾಡಿ ಮನೆ ಪಕ್ಕದ ಜಮೀನಿನಲ್ಲಿ ಹೂತಿಟ್ಟಿದ್ದ. ಜುಲೈ 22 ರಂದು ಸಿದ್ಧಗಂಗಮ್ಮ ಮುದ್ದರಾಮಯ್ಯಪಾಳ್ಯಕ್ಕೆ ಬಂದಿದ್ದರು. ಇವರಿಬ್ಬರ ನಡುವೆ ಹಣಕಾಸು ವಿಚಾರಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನಿನಲ್ಲಿ ಅಡಿಕೆ ಗಿಡಗಳಿಗೆ ನೀರು ಬಿಡಲು ತೆಗೆದಿದ್ದ ಕಾಲುವೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೆಣ ಹೂತಿಟ್ಟಿದ್ದಾನೆ. ಘಟನೆ ನಡೆದ ಐದು ದಿನಗಳ ನಂತರ ಕೊಲೆಯ ರಹಸ್ಯ ಬಹಿರಂಗಗೊಂಡಿದೆ. ಕಳೆದ ಮಂಗಳವಾರ ಸಿದ್ಧಗಂಗಮ್ಮ, ನಂಜುಂಡಪ್ಪನಿಗೆ ನೀಡಿದ 10 ಸಾವಿರ ರು. ಹಣವನ್ನು ತೆಗೆದುಕೊಂಡು ಹೋಗಲು ಮುದ್ದರಾಮಯ್ಯನ ಪಾಳ್ಯದ ನಂಜುಡಪ್ಪನ ಜಮೀನಿ ನ ಬಳಿ ಬಂದಿದ್ದಾಳೆ. ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ನಂಜುಡಪ್ಪ ಆಕೆಗೆ ದೊಣ್ಣೆಯಿಂದ ತಲೆ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾನೆ. ಅಲ್ಲೇ ಸಿದ್ದಗಂಗಮ್ಮ ಪ್ರಾಣ ಬಿಟ್ಟಿದ್ದಾಳೆ. ಕೂಡಲೇ ಹೆಣವನ್ನು ಮನೆಯ ಪಕ್ಕದ ಜಮೀನಿನ ಗುಂಡಿಯಲ್ಲಿ ಮುಚ್ಚಿ ಹಾಕಿ ನಂಜುಡಪ್ಪ ಮಧುಗಿರಿಯ ನೆಂಟರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ. ಇತ್ತ ಸಿದ್ದಗಂಗಮ್ಮ ಕಾಣದಿದ್ದಕ್ಕೆ ಪತಿ ಸಿದ್ದಲಿಂಗಯ್ಯ ಕೊರಟಗೆರೆ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ನಂಜುಂಡಪ್ಪ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊರೆ ರಹಸ್ಯ ಹೊರಬಿದ್ದಿದೆ.ನಂಜುಂಡಪ್ಪ ಬೆಳಧರ ಸಮೀಪದ ಕ್ರಶರ್ ಬಳಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವಾಗ ಸಿದ್ದಗಂಗಮ್ಮ ಪರಿಚಯವಾಗಿತ್ತು. ಸುಮಾರು ಹಲವು ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಗಲಾಟೆಯಾಗಿತ್ತು. ನಂತರ ಇಬ್ಬರು ದೂರವಾಗಿದ್ದು, ಈಚೆಗೆ ಮತ್ತೆ ಮೊಬೈಲ್‌ನಲ್ಲಿ ಮಾತನಾಡಲು ಶುರು ಮಾಡಿದ್ದರು ಎಂಬುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.