ಸಾರಾಂಶ
ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಸವಾರನ ಮೃತದೇಹ ಭಾನುವಾರ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಮಾರ್ಕಂಡೇಯ ನದಿ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಸವಾರನ ಮೃತದೇಹ ಭಾನುವಾರ ಪತ್ತೆಯಾಗಿದೆ.ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಓಂಕಾರ ಪಾಟೀಲ ( 24) ಮೃತ ಯುವಕ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಇಬ್ಬರು ಯುವಕರು ಅಲತಗಾ ಗ್ರಾಮದಿಂದ ಕಟಿಂಗ್ ಮಾಡಿಸಿಕೊಳ್ಳಲು ಕಂಗ್ರಾಳಿ ಗ್ರಾಮಕ್ಕೆ ಶನಿವಾರ ಸಂಜೆ ತೆರಳುತ್ತಿದ್ದರು. ಈ ವೇಳೆ ಮಾರ್ಕಂಡೇಯ ನದಿ ಬಳಿ ನಿಯಂತ್ರಣ ತಪ್ಪಿದ ಬೈಕ್ ಉರುಳಿ ನದಿಗೆ ಬಿದ್ದಿದ್ದು, ಇಬ್ಬರು ಸವಾರರು ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಇಬ್ಬರಲ್ಲಿ ಓರ್ವ ಯುವಕ ದಡ ಸೇರಿ ಬದುಕುಳಿದಿದ್ದ. ಆದರೆ, ಓಂಕಾರ ನಾಪತ್ತೆಯಾಗಿದ್ದ. ಎನ್‌ಡಿಆರ್‌ಎಫ್ ತಂಡ ಮತ್ತು ಕಾಕತಿ ಪೊಲೀಸರು ಯುವಕನಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದರು. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಯುವಕ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟಿನ್, ಡಿಸಿಪಿ ಪಿ.ವಿ. ಸ್ನೇಹಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.