ಸಾರಾಂಶ
ಕೊಲೆ ಮಾಡಿ ನೇಣು ಬಿಗಿದಿದ್ದಾರೆ: ಮೃತ ವಿದ್ಯಾರ್ಥಿ ಪೋಷಕರ ಆರೋಪ । ಸಮರ್ಥನೆ ನೀಡಲು ಬಂದ ಸಿಬ್ಬಂದಿಗೆ ಜನರಿಂದ ಥಳಿತ
ಕನ್ನಡಪ್ರಭ ವಾರ್ತೆ ಹಾಸನನಗರದ ಪ್ರತಿಷ್ಠಿತ ಮಾಸ್ಟರ್ ಪಿಯು ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ಆತನನ್ನು ಹತ್ಯೆ ಮಾಡಿ ನೇಣು ಬಿಗಿದಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ವಿಕಾಸ್ (18) ಮೃತ ವಿದ್ಯಾರ್ಥಿ. ಚನ್ನರಾಯಪಟ್ಟಣ ತಾಲೂಕಿನ ಕುಂದುರು ಮಠ ಸಮೇಪದ ಬೆಳಗುಲಿ ಗ್ರಾಮದ ಸುರೇಶ್ ಹಾಗೂ ಮಮತಾ ದಂಪತಿಯ ಏಕೈಕ ಪುತ್ರ.ಮಾಸ್ಟರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿಕಾಸ್ ಗುರುವಾರ ಬೆಳಿಗ್ಗೆ 8.30 ರಿಂದ ಕಾಲೇಜಿನ ತರಗತಿಯನ್ನು ಮುಗಿಸಿ ಸುಮಾರು 10 ಗಂಟೆ ವೇಳೆಗೆ ಕಾಲೇಜು ಪಕ್ಕದ ಕನ್ವೆನ್ಷನ್ ಹಾಲ್‌ನಲ್ಲಿರುವ ಹಾಸ್ಟೆಲ್ ಕೊಠಡಿಗೆ ಮರಳಿದ್ದಾನೆ. ಬಳಿಕ ಕೊಠಡಿಯಲ್ಲಿ ಆತನ ಶವ ಪತ್ತೆಯಾಗಿದೆ. ವಿಕಾಸ್ ಸಾವಿಗೆ ವಾರ್ಡನ್ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ .
ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ಕಾಲೇಜಿನ ಮುಖ್ಯಸ್ಥರು ಬರುವವರೆಗೂ ಶವ ಮೇಲೆತ್ತಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದರು.ಕಾಲೇಜಿಗೆ ಸೇರಿಸಿ ಎರಡು ವರ್ಷ ಕಳೆದಿದೆ, ಬೆಳಿಗ್ಗೆ ಪೋಷಕರಿಗೆ ವಿಕಾಸ್ ಕರೆ ಮಾಡಿ ಚನ್ನಾಗಿಯೇ ಮಾತನಾಡಿದ್ದಾನೆ. ನಂತರ ಕರೆ ಮಾಡಿದಾಗ ಹಾಸ್ಟೆಲ್‌ಗೆ ಬರುವಂತೆ ಹೇಳಿದ್ದಾರೆ. ಹಾಸ್ಟೆಲ್‌ಗೆ ಬಂದು ನೋಡಿದಾಗ ವಿಕಾಸ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಿಟಕಿಗೆ ಹಗ್ಗ ಬಿಗಿದಿದ್ದು ವಿಕಾಸ್‌ನ ಕಾಲು ಕೂಡ ನೆಲಕ್ಕೆ ತಾಕಿದ ಸ್ಥಿತಿಯಲ್ಲಿ ಇದೆ. ಕೊಲೆ ಮಾಡಿ ಆತನನ್ನು ನೇಣು ಹಾಕಿದ್ದಾರೆ ಎಂದು ಸಂಬಂಧಿಕ ವಿಶ್ವನಾಥ್ ಆರೋಪಿಸಿದ್ದಾರೆ.
ಕೂಡಲೇ ಉನ್ನತ ಶಿಕ್ಷಣ ಸಚಿವರು ಈ ಪ್ರಕರಣ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಕಾಲೇಜಿನ ಪರವಾನಗಿ ರದ್ದು ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.ವಿಕಾಸ 10ನೇ ತರಗತಿಯಲ್ಲಿ 97% ಅಂಕ ಗಳಿಸಿದ್ದ. ಶಾಲೆ ಹಾಗೂ ತಾಲೂಕಿಗೆ ಉತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದನು, ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿದ್ಯಾರ್ಥಿಯಲ್ಲ. ಕಾಲೇಜು ಆಡಳಿತ ಮಂಡಳಿ ಸರಿಯಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಿಲ್ಲ. ಕನಿಷ್ಠ ಸಿಸಿ ಕ್ಯಾಮರಾ ವ್ಯವಸ್ಥೆ ಒದಗಿಸಿಲ್ಲ. ವಿಕಾಸ್‌ನನ್ನು ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ
ಪ್ರಕರಣ ನಡೆದು ಎರಡು ಮೂರು ಗಂಟೆಯಾದರೂ ಸ್ಥಳಕ್ಕೆ ಕಾಲೇಜು ಆಡಳಿತ ಮಂಡಳಿ ಬಾರದಿದ್ದ ಹಿನ್ನೆಲೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್ ಎದುರು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.ಮೃತ ವಿದ್ಯಾರ್ಥಿಯ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಲೇಜು ಸಿಬ್ಬಂದಿಗೆ ಥಳಿತಹಾಸ್ಟೆಲ್ ಎದುರು ಪ್ರತಿಭಟನೆ ವೇಳೆ ಆಡಳಿತ ಮಂಡಳಿ ಪರವಾಗಿ ಮಾತನಾಡಲು ಬಂದ ಕಾಲೇಜು ಸಿಬ್ಬಂದಿಯನ್ನು ಸ್ಥಳದಲ್ಲಿ ಇದ್ದ ಜನರು ಥಳಿಸಿದ ಘಟನೆಯು ನಡೆಯಿತು. ಮೃತರ ಸಂಬಂಧಿಕರ ಕೈಗೆ ಸಿಕ್ಕು ಹಿಗ್ಗಾಮುಗ್ಗ ಥಳಿತಕ್ಕೊಳಗಾದರು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರ ಜೀಪನ್ನು ಹತ್ತಿ ಸಿಬ್ಬಂದಿ ತಪ್ಪಿಸಿಕೊಂಡರು.
ಘಟನೆ ನಂತರ ಹಾಸ್ಟೆಲ್ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಂಬಂಧಿಕರ ಆಕ್ರೋಶ ರೋಧನೆ ಮುಗಿಲುಮಟ್ಟಿತ್ತು. ಕನ್ವೆನ್ಷನ್ ಹಾಲ್‌ನಲ್ಲಿಯೇ ಹಾಸ್ಟೆಲ್ !ಮಾಸ್ಟರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶಾತಿ ಪಡೆಯುವ ವೇಳೆ ಲಕ್ಷಾಂತರ ರು. ಹಣ ಪಡೆಯುವ ಆಡಳಿತ ಮಂಡಳಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯವನ್ನು ಒದಗಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಸ್ವಂತ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಕೋಣೆಯನ್ನು ನಿರ್ಮಿಸದೆ ಕಾಲೇಜಿನ ಪಕ್ಕದಲ್ಲಿರುವ ರಾಜ್ ಭವನ್ ಪೂರ್ಣಿಮಾ ಕನ್ವೆನ್ಷನ್ ಹಾಲ್‌ನಲ್ಲಿ ಬೇಕಾಬಿಟ್ಟಿಯಾಗಿ ಕೊಠಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳನ್ನು ಇರಿಸಿದೆ. ಹೆಚ್ಚು ಅಂಕಗಳಿಸಿದವರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸುವ ಕೆಲಸವನ್ನು ಕಾಲೇಜು ಆಡಳಿತ ಮಂಡಳಿ ಮಾಡಿದೆ ಎಂದು ಪೋಷಕರು ದೂರಿದ್ದಾರೆ. ಕಾಲೇಜಿನ ಮುಂದೆ ಜಮಾಯಿಸಿರುವ ಪೋಷಕರು ಮತ್ತು ಸಂಬಂಧಿಕರು.