ಸಾರಾಂಶ
ಮಿಲ್ಕ್ ಡೈರಿಯ ಬಾಯ್ಲರ್ ಸ್ಟೋಟಗೊಂಡ ಪರಿಣಾಮ ಬಡ ಕಾರ್ಮಿಕನೊಬ್ಬ ಮಾರಣಾಂತಿಕ ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅವೈಜ್ಞಾನಿಕವಾಗಿದ್ದ ಮಿಲ್ಕ್ ಡೈರಿಯ ಬಾಯ್ಲರ್ ಸ್ಟೋಟಗೊಂಡ ಪರಿಣಾಮ ಬಡ ಕಾರ್ಮಿಕನೊಬ್ಬ ಮಾರಣಾಂತಿಕ ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಮುಖ್ಯ ರಸ್ತೆಯ ಶನಿದೇವರ ದೇವಾಲಯದ ಹಿಂಭಾಗದಲ್ಲಿ ವಾಸದ ಮನೆಯಲ್ಲಿ ಶ್ರೀ ಕಂಠೇಶ್ವರ ಮಿಲ್ಕ್ ಡೈರಿ ಹೆಸರಿನ ಪುಣ್ಯಕೋಟಿ ಮಜ್ಜಿಗೆಯ ಅತಿ ಸಣ್ಣ ಕೈಗಾರಿಕೆ ಸದಾಶಿವಯ್ಯ ಎಂಬುವರ ಮಾಲಿಕತ್ವದಲ್ಲಿ ನಡೆಯುತ್ತಿದೆ. ಹಾಲು ಉತ್ಪನ್ನ ತಯಾರಿಕೆಗೆ ಬಾಯ್ಲರ್ ಉಪಯೋಗಿಸಲಾಗುತ್ತಿತ್ತು. ಎಂದಿನಂತೆ ಬಾಯ್ಲರ್‌ನಲ್ಲಿ ಹಾಲು ಕುದಿಸುವಾಗ ಬಾಯ್ಲರ್ ಸ್ಟೋಟಗೊಂಡಿದೆ. ಕೊರಟಗೆರೆ ತಾಲೂಕಿನ ಮಲ್ಲೇಶಪುರ ಗ್ರಾಮದ ಯೋಗೀಶ್ (25) ಸ್ಪೋಟದಿಂದ ಸಂಪೂರ್ಣ ಬೆಂದಿದ್ದಾನೆ. ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಡೈರಿ ಚಿಕ್ಕ ಸ್ಥಳದಲ್ಲಿರುವುದೇ ಸ್ಪೋಟಕ್ಕೆ ಕಾರಣ: ಶ್ರೀ ಕಂಠೇಶ್ವರ ಮಿಲ್ಕ್ ಡೈರಿ ಕಾರ್ಖಾನೆಯನ್ನು ಮನೆಯಲ್ಲೇ ನಡೆಸುತ್ತಿದ್ದು, ಬಾಯ್ಲರ್ ಇದ್ದ ಜಾಗ ಅತ್ಯಂತ ಕಿರಿದಾದ ಕೋಣೆಯಲ್ಲಿ ಇದ್ದುದರಿಂದ ಸ್ಟೋಟ ಸಂಭವಿಸಿದೆ. ಕಾರ್ಖಾನೆಯಲ್ಲಿ ಬಾಯ್ಲರ್ ಸ್ಟೋಟ ಎರಡನೇ ಬಾರಿಯಾಗಿದ್ದು ಸಾರ್ವಜನಿಕರು ಹಲವು ಬಾರಿ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಸಣ್ಣ ಕೈಗಾರಿಕಾ ಇಲಾಖಾ ಆಧಿಕಾರಿಗಳ ನಿರ್ಲಕ್ಷ: ಬಾಯ್ಲರ್ ಸ್ಟೋಟಕ್ಕೆ ಸಣ್ಣ ಕೈಗಾರಿಕಾ ಅಧಿಕಾರಿಗಳ ಲಂಚಗುಳಿತನ ಮತ್ತು ಕರ್ತವ್ಯ ಲೋಪವೇ ಕಾರಣವಾಗಿದೆ. ಯಾವುದೇ ಮುಂಜಾಗ್ರತೆ ಕ್ರಮ, ಅಪಾಯದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ವಸ್ತು, ಸರಿಯಾದ ಸ್ಥಳ ಇಲ್ಲ. ಸ್ಟೋಟಕದಿಂದ ಬಾಯ್ಲರ್ ತುಂಡುಗಳು ಒಂದು ಕಿ.ಮೀ ದೂರದವರೆಗೂ ಬಿದ್ದಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆಯಾಗಿರೆ ಎಂದು ಸಾರ್ವಜನಿಕರು ದೂರಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಕೊರಟಗೆರೆ ಪಿಎಸ್‌ಐ ಅನಿಲ್, ಚೇತನ್ ಕುಮಾರ್ ಹಾಜರಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.