ಹಾಸನ ನಗರ ಭಾಗದಲ್ಲಿ ಪ್ರತಿದಿನ ೧೨ ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಡೆಸುತ್ತಿದ್ದು, ಇದಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿ ನೇಮಕವಾಗಬೇಕಿದೆ. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಮುಂದಿನ ಮೂರು ವರ್ಷಗಳ ಕಾಲ ಅನುದಾನ ನೀಡಲು ಸಾಧ್ಯವಿಲ್ಲ ಎಂಬ ಲಿಖಿತ ಉತ್ತರ ಸರ್ಕಾರದಿಂದ ಬಂದಿದೆ, ಇದು ಬೇಸರ ತಂದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಸ್ಥಳೀಯ ಶಾಸಕರ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಂಘದ ಸಹಯೋಗದಲ್ಲಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆಗೆ ನೂತನ ಬೊಲೇರೋ ವಾಹನವನ್ನು ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ, ಹಾಸನ ಜಿಲ್ಲಾ ಪೊಲೀಸ್ ಇಲಾಖೆ ಶಿಸ್ತಿನಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಈಗಾಗಲೇ ಮಾಡಲಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ವಾಹನಗಳ ಕೊರತೆ ಗಂಭೀರವಾಗಿದೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಂಘದ ಸಹಕಾರದಿಂದ ಒಂದು ಬೊಲೇರೋ ವಾಹನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ವಾಹನಗಳನ್ನು ನೀಡುವ ಯೋಜನೆ ಇದೆ ಎಂದರು.

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಪೊಲೀಸ್ ಠಾಣೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸಾಧ್ಯವಿಲ್ಲ ಎಂಬ ಉತ್ತರ ನೀಡುವ ಮೂಲಕ ಸರ್ಕಾರ ಹಾಸನವನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಶಾಸಕರಿಗೆ ಬರುವ ಅನುದಾನವನ್ನು ಕಡಿತಗೊಳಿಸಿರುವುದು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಹೇಳಿದರು.

ಹಾಸನ ನಗರ ಭಾಗದಲ್ಲಿ ಪ್ರತಿದಿನ ೧೨ ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಡೆಸುತ್ತಿದ್ದು, ಇದಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿ ನೇಮಕವಾಗಬೇಕಿದೆ. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಮುಂದಿನ ಮೂರು ವರ್ಷಗಳ ಕಾಲ ಅನುದಾನ ನೀಡಲು ಸಾಧ್ಯವಿಲ್ಲ ಎಂಬ ಲಿಖಿತ ಉತ್ತರ ಸರ್ಕಾರದಿಂದ ಬಂದಿದೆ, ಇದು ಬೇಸರ ತಂದಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಕಾರಣದಿಂದ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗದೆ ಶಾಸಕರು ಕಂಗಾಲಾಗಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿ ಇತರೆ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಾದರೂ ಹಾಸನಕ್ಕೆ ಹೆಚ್ಚಿನ ಅನುದಾನ ಹಾಗೂ ಪೊಲೀಸ್ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಶಕ್ತಿ ತುಂಬುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಅಬ್ದುಲ್ ಬಶೀರ್, ಭಾರತಿ, ರಾಜಶೇಖರ್, ಯತೀಶ್ವರ್ ಇತರರು ಉಪಸ್ಥಿತರಿದ್ದರು.