ಮೃತಪಟ್ಟವರನ್ನು ಎಸ್.ರಾಗುಟ್ಟಹಳ್ಳಿಯ ಬ್ರಾಹ್ಮಣಹಳ್ಳಿಯ ವಾಸಿಗಳಾದ ಶ್ರೀನಿವಾಸರೆಡ್ಡಿ (55) ವರ್ಷ, ಅವರ ಪತ್ನಿ ನರಸಮ್ಮ (45) ವರ್ಷ ಎಂದು ಗುರುತಿಸಲಾಗಿದೆ.
ಚೊಕ್ಕರೆಡ್ಡಿಹಳ್ಳಿ ಸಮೀಪದ ಎಂಆರ್ಪಿಎಲ್ ಪೆಟ್ರೋಲ್ ಬಂಕ್ ಬಳಿ ಸರಣಿ ಅಪಘಾತ । 6 ಮಂದಿಗೆ ಗಂಭೀರ ಗಾಯ
ಕನ್ನಡಪ್ರಭ ವಾರ್ತೆ ಚಿಂತಾಮಣಿಚೇಳೂರಿನಿಂದ ಬೆಂಗಳೂರಿಗೆ ಪರಂಗಿ ಹಣ್ಣನ್ನು ತುಂಬಿಕೊಂಡು ಸಾಗುತ್ತಿದ್ದ ಬೋಲೆರೋ ವಾಹನ ಚೊಕ್ಕರೆಡ್ಡಿಹಳ್ಳಿ ಸಮೀಪದಲ್ಲಿರುವ ಎಂಆರ್ಪಿಎಲ್ ಪೆಟ್ರೋಲ್ ಬಂಕ್ ಬಳಿ ವಾಹನದ ಹಿಂಬದಿಯ ಚಕ್ರ ಸಿಡಿದಿದ್ದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ವಾಹನ ಸಾಲು ಸಾಲು ವಾಹನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಮಂದಿಗೆ ಗಂಭೀರ ಗಾಯಗಳಾಗಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಎಸ್.ರಾಗುಟ್ಟಹಳ್ಳಿಯ ಬ್ರಾಹ್ಮಣಹಳ್ಳಿಯ ವಾಸಿಗಳಾದ ಶ್ರೀನಿವಾಸರೆಡ್ಡಿ (55) ವರ್ಷ, ಅವರ ಪತ್ನಿ ನರಸಮ್ಮ (45) ವರ್ಷ ಎಂದು ಗುರುತಿಸಲಾಗಿದ್ದು, ದಂಪತಿಯೆಂದು ತಿಳಿದುಬಂದಿದೆ. ನಗರದ ಜೆಜೆ ಕಾಲೋನಿಯ ರಾಮಾಂಜಮ್ಮ (55) ವರ್ಷ ಮೃತಪಟ್ಟವರಾಗಿದ್ದಾರೆ. ದಂಪತಿ ಎಚ್. ಕ್ರಾಸ್ನಲ್ಲಿದ್ದ ಮಗಳ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಮುಗಿಸಿಕೊಂಡು ವಾಪಸ್ಸು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟರೆ, ಕುಟುಂಬದೊಂದಿಗೆ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರಾಮಾಂಜಮ್ಮ ಮೃತಪಟ್ಟಿದ್ದಾರೆ.ಗಾಯಾಳುಗಳನ್ನು ಇದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದು ವೆಂಕಟೇಶ್ (60) ಮಗಳಾದ ಪ್ರಿಯಾಂಕ (30) ಮೊಮ್ಮಕ್ಕಗಳಾದ ಅಕ್ಷಯ್ (12) ವರ್ಷ, ಸ್ವೀಟಿ (6) ವರ್ಷ ಆಟೋ ಚಾಲಕ ಮತ್ತು ಆತನ ಪತ್ನಿ ಕೈಲಾಸಗಿರಿಯಲ್ಲಿ ಕೆಲಸ ಮಾಡುವವರಾಗಿದ್ದವರೆಂದು ಅವರು ಕೃಷ್ಣರಾಜಪುರ ಗ್ರಾಮದವರೆಂದು ತಿಳಿದುಬಂದಿದ್ದು, ಮಂಜುನಾಥ್, ಲಾವಣ್ಯ ಗಾಯಾಗೊಂಡಿದ್ದಾರೆ.
ಚಿಂತಾಮಣಿಯಿಂದ ದೊಡ್ಡಹಳ್ಳಿ ಗ್ರಾಮದ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಹಿಂಬದಿಯಿಂದ ಡಿಕ್ಕಿಹೊಡೆದಿದ್ದು, ನಂತರ ಚೇಳೂರು ಕಡೆಗೆ ಹೊರಟಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಗ್ರಾಮವೊಂದಕ್ಕೆ ಆಟೋ ಮತ್ತು ಅಪ್ಪೆ ಆಟೋದಲ್ಲಿ ಪ್ರಯಾಣಿಸುತ್ತಿದ್ದವರಿಗೂ ಡಿಕ್ಕಿ ಹೊಡೆದಿದ್ದು, ದಂಪತಿ ಸೇರಿ ಮೂವರು ಮರಣ ಹೊಂದಿದ್ದು, ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವಲ್ಲಿ ಸ್ಥಳೀಯರು ಮತ್ತು ಪೊಲೀಸರು ನೆರವಾಗಿದ್ದು, ಅಪಘಾತ ನಡೆದ ಸ್ಥಳಕ್ಕೆ ಡಿವೈಎಸ್ಪಿ ರಘು, ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಶಿವರಾಜ್, ಪೊಲೀಸ್ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.