ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಬಿಮ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಂಬ್ ದಾಳಿಯ ಅಣಕು ಪ್ರದರ್ಶನ (ಮಾಕ್ ಡ್ರಿಲ್) ನಡೆಸಲಾಯಿತು. ಕ್ಷಣಾರ್ಧದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಆಸ್ಪತ್ರೆ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಾಗ ತುರ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಅಭ್ಯಾಸವನ್ನು ಕೈಗೊಳ್ಳಲಾಯಿತು. ಸ್ಫೋಟದ ಶಬ್ದ, ಹೊಗೆ ಹಾಗೂ ತುರ್ತು ಪರಿಸ್ಥಿತಿಯ ಸನ್ನಿವೇಶವನ್ನು ನೈಜವಾಗಿ ಸೃಷ್ಟಿಸಿದ್ದರಿಂದ ಕೆಲಕಾಲ ರೋಗಿಗಳು ಕಿರುಚಾಡಿ ಗಾಬರಿಗೊಂಡ ದೃಶ್ಯ ಕಂಡುಬಂದಿತು.

ಘಟನೆಯ ತಕ್ಷಣವೇ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡ ಹಾಗೂ ಇತರೆ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣೆ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತುರ್ತಾಗಿ ಹೊರತೆಗೆದು ಸುರಕ್ಷಿತ ಸ್ಥಳಗಳಿಗೆ ಸಾಗಿಸುವುದು, ಬೆಂಕಿ ನಿಯಂತ್ರಣಕ್ಕೆ ತರಲು ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ಸಮರ್ಪಕವಾಗಿ ಪ್ರದರ್ಶಿಸಲಾಯಿತು.

ಈ ಅಣಕು ಪ್ರದರ್ಶನದ ಮುಖ್ಯ ಉದ್ದೇಶ ಸಾರ್ವಜನಿಕರ ಜೀವ ರಕ್ಷಣೆಗಾಗಿ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು. ಆಸ್ಪತ್ರೆ ಸಿಬ್ಬಂದಿ ಹಾಗೂ ರಕ್ಷಣಾ ದಳಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವುದಕ್ಕೂ ಈ ಅಭ್ಯಾಸ ನೆರವಾಗಿದೆ.


ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇಂತಹ ಅಣಕು ಪ್ರದರ್ಶನಗಳು ವಿಪತ್ತು ಸಂದರ್ಭಗಳಲ್ಲಿ ತ್ವರಿತ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ನೆರವಾಗುತ್ತವೆ ಎಂದು ತಿಳಿಸಿದರು.