4 ದಿನಗಳಲ್ಲಿ 2ನೇ ಬಾರಿ ಇ-ಮೇಲ್ ರವಾನೆ, ಪೊಲೀಸರ ಕಟ್ಟೆಚ್ಚರಕನ್ನಡಪ್ರಭ ವಾರ್ತೆ ಕಾರವಾರ
ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶುಕ್ರವಾರ ರಾತ್ರಿ ಮತ್ತೊಮ್ಮೆ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ 4 ದಿನಗಳ ಅಂತರದಲ್ಲಿ ನ್ಯಾಯಾಲಯದ ಅಧಿಕೃತ ಇ-ಮೇಲ್‌ಗೆ ಬಂದ 2ನೇ ಬೆದರಿಕೆ ಇದಾಗಿದೆ. ಈ ಆತಂಕಕಾರಿ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ನ್ಯಾಯಾಲಯದ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯು ತಕ್ಷಣವೇ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ತೀವ್ರ ತಪಾಸಣೆ ನಡೆಸಿದೆ.ದುರ್ಗಾ ತೇವಿದಿಯ ಸ್ಟ್ಯಾಲಿನ್ ಎಂಬ ಹೆಸರಿನ ಖಾತೆಯಿಂದ ಈ ಇ-ಮೇಲ್ ಬಂದಿದ್ದು, ನ್ಯಾಯಾಲಯದ ಇ-ಸೇವಾ ಕೇಂದ್ರದಲ್ಲಿ ಒಟ್ಟು 5 ಡೈನಾಮೈಟ್ ಬಾಂಬ್ ಇರಿಸಲಾಗಿದೆ ಎಂದು ಕಿಡಿಗೇಡಿಗಳು ಎಚ್ಚರಿಕೆ ನೀಡಿದ್ದರು. ಮಧ್ಯಾಹ್ನ 2.20ರೊಳಗೆ ನ್ಯಾಯಾಧೀಶರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಈ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಇದರ ಜೊತೆಗೆ ತಮಿಳುನಾಡಿನ ತಿರುಪರಂಕುಂದ್ರಂ ದರ್ಗಾ ವಿವಾದ, ಅಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿಚಾರಗಳನ್ನು ಸಹ ಈ ಇ-ಮೇಲ್ ಸಂದೇಶದಲ್ಲಿ ಪ್ರಸ್ತಾಪಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆದರಿಕೆ ಸಂದೇಶದ ಮಾಹಿತಿ ಲಭ್ಯವಾದ ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ನ್ಯಾಯಾಲಯದ ಕಟ್ಟಡ ಹಾಗೂ ಆವರಣದ ಮೂಲೆಮೂಲೆಗಳಲ್ಲಿ ಸಮಗ್ರ ತಪಾಸಣೆ ನಡೆಸಿದರು. ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ ಇದು ಕೇವಲ ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಗಿದೆ.ಗಮನಾರ್ಹ ಸಂಗತಿಯೆಂದರೆ, ಇದೇ ಕಾರವಾರ ನ್ಯಾಯಾಲಯಕ್ಕೆ ಜೂ. 24ರಂದು ಕೂಡ ಉದಯನಿಧಿ ಹೆಸರನ್ನು ಉಲ್ಲೇಖಿಸಿ ಇದೇ ಮಾದರಿಯ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಹಿಂದಿನ ಘಟನೆಗಳನ್ನು ಪರಿಗಣಿಸಿದರೆ, ಜಿಲ್ಲಾ ನ್ಯಾಯಾಲಯಕ್ಕೆ ಈವರೆಗೆ ಒಟ್ಟು 3ನೇ ಬಾರಿ ಇಂತಹ ಬೆದರಿಕೆ ಬಂದಂತಾಗಿದೆ. ಸದ್ಯ ಈ ಕಿಡಿಗೇಡಿತನದ ಇ-ಮೇಲ್ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ತಜ್ಞರ ನೆರವಿನೊಂದಿಗೆ ತೀವ್ರ ತನಿಖೆ ಮುಂದುವರಿಸಿದ್ದಾರೆ.
