ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಿಂದೆ ಭಗ್ನಪ್ರೇಮಿ ಕೈವಾಡ

| Published : Nov 07 2025, 02:00 AM IST

ಸಾರಾಂಶ

ಕೆಲ ತಿಂಗಳಿಂದ ನಗರದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿ ಭೀತಿ ಸೃಷ್ಟಿಸಿದ್ದ ಮಹಿಳಾ ‘ಆತಂಕವಾದಿ’ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾಳೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲ ತಿಂಗಳಿಂದ ನಗರದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿ ಭೀತಿ ಸೃಷ್ಟಿಸಿದ್ದ ಮಹಿಳಾ ‘ಆತಂಕವಾದಿ’ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾಳೆ.

ತಮಿಳುನಾಡು ಮೂಲದ ಸಾಫ್ಟ್‌ವೇರ್‌ ಕಂಪನಿಯ ಮಹಿಳಾ ಉದ್ಯೋಗಿ ರೆನೆ ಜೋಶಿಲ್ದಾ ಬಂಧಿತ ಆರೋಪಿ. ಬೇರೆ ಯುವತಿಯನ್ನು ವರಿಸಿರುವ ಪ್ರಿಯಕರನ ಚಾರಿತ್ರ್ಯಹರಣದ ಉದ್ದೇಶದಿಂದ ಆತನ ಹೆಸರಿಲ್ಲಿ ಬೆಂಗಳೂರು ಸೇರಿ ದೇಶದ ಹಲವೆಡೆ ಬಾಂಬ್ ಬೆದರಿಕೆ ಸಂದೇಶ ರವಾನಿಸುತ್ತಿದ್ದ ವಿಚಾರ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಇತ್ತೀಚೆಗೆ ಅಹಮದಾಬಾದ್‌ ವಿಮಾನ ನಿಲ್ದಾಣ ಹುಸಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಯುವತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಬಳಿಕ ಅಹಮದಾಬಾದ್‌ ನಗರದ ಕಾರಾಗೃಹದಲ್ಲಿದ್ದ ಆಕೆಯನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದಾಗ ನಗರದಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಏಳು ಪ್ರಕರಣಗಳು ಪತ್ತೆಯಾಗಿವೆ.

ಪ್ರಿಯಕರನ ಸೆಳೆಯಲೆತ್ನ:

2022ರಲ್ಲಿ ಚೆನ್ನೈ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ರೆನಿ ಹಾಗೂ ದಿವೀಜ್‌ ಪ್ರಭಾಕರನ್‌ ಉದ್ಯೋಗದಲ್ಲಿದ್ದರು. ಇದಕ್ಕೂ ಮುನ್ನ ಅದೇ ಕಂಪನಿಯ ಬೆಂಗಳೂರು ಶಾಖೆಯಲ್ಲೂ ಕೆಲದಿನಗಳ ಮಟ್ಟಿಗೆ ಆಕೆ ಕೆಲಸ ಮಾಡಿದ್ದಳು. ಬಳಿಕ ಕಾಲ ಕ್ರಮೇಣ ಇಬ್ಬರೂ ಆತ್ಮೀಯ ಒಡನಾಡಿಗಳಾಗಿದ್ದರು. ಆದರೆ, 2023ರಲ್ಲಿ ಬೇರೆ ಯುವತಿ ಜತೆ ದಿವೀಜ್‌ ಸಪ್ತಪದಿ ತುಳಿದಿದ್ದ. ತನ್ನ ಪ್ರೀತಿ ತಿರಸ್ಕರಿಸಿ ಬೇರೆ ಯುವತಿ ಜತೆ ಮದುವೆಯಾದ ಪ್ರಿಯಕರನ ಮೇಲೆ ರೆನೆ ಸಿಟ್ಟಿಗೆದ್ದಿದ್ದಳು.

ಆತನ ಮನವೊಲಿಕೆಗೆ ಯತ್ನಿಸಿ ವಿಫಲವಾದಳು. ಕೊನೆಗೆ ಆತನ ಚಾರಿತ್ರ್ಯಹರಣ ಮಾಡಿದರೆ ಪತ್ನಿ ದೂರವಾಗುತ್ತಾಳೆ. ಆಗ ಮತ್ತೆ ಪ್ರಿಯಕರ ತನ್ನೊಂದಿಗೆ ಬರುತ್ತಾನೆ ಎಂದು ರೆನೆ ಭಾವಿಸಿದ್ದಳು. ಅಂತೆಯೇ ತನ್ನ ಪ್ರಿಯಕರನ ಹೆಸರಿನ ಇ-ಮೇಲ್ ಬಳಸಿಕೊಂಡು ಖಾಸಗಿ ಶಾಲೆಗಳು, ವಿಮಾನ ನಿಲ್ದಾಣಗಳು ಹಾಗೂ ಕೆಲ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲು ರೆನಿ ಸಂಚು ರೂಪಿಸಿದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೇಗೆ ಸಂದೇಶ?:

ತನ್ನ ಮೊಬೈಲ್‌ಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಗೇಟ್ ಕೋಡ್‌ ಎಂಬ ಆ್ಯಪ್‌ ಅನ್ನು ಆಕೆ ಡೌನ್‌ಲೋಡ್ ಮಾಡಿಕೊಂಡಿದ್ದಳು. ಬಳಿಕ ವಿಪಿಎನ್‌ ಇಂಟರ್‌ನೆಟ್‌ ಬಳಸಿ ಗೇಟ್ ಕೋಡ್‌ ಆ್ಯಪ್ ಮೂಲಕ ವರ್ಚುವಲ್‌ ಮೊಬೈಲ್ ನಂಬರ್‌ಗಳನ್ನು ಪಡೆದು 6-7 ವಾಟ್ಸ್‌ಆ್ಯಪ್ ಖಾತೆಗಳನ್ನು ತೆರೆದಿದ್ದಳು. ನಂತರ ಗೂಗಲ್‌ನಲ್ಲಿ ಖಾಸಗಿ ಶಾಲೆಗಳು, ವಿಮಾನ ನಿಲ್ದಾಣಗಳು ಹಾಗೂ ಸರ್ಕಾರಿ ಕಚೇರಿಗಳ ಇ-ಮೇಲ್ ವಿಳಾಸ ಪಡೆದು ತಾನು ಪ್ರೀತಿಸುತ್ತಿದ್ದ ದಿವೀಜ್ (divijipprabhakarlakshmi@gmail.com) ಹೆಸರಿನಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು.

ಈ ಬಗ್ಗೆ 2024ರಿಂದ ಈವರೆಗೆ ನಗರದಲ್ಲಿ 29 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಸುಬ್ರಹ್ಮಣ್ಯ ನಗರ, ಕಬ್ಬನ್‌ ಪಾರ್ಕ್‌, ಕುಂಬಳಗೋಡು, ಅಶೋಕನಗರ, ಗೋವಿಂದಪುರ ಹಾಗೂ ಪುಲಿಕೇಶಿ ನಗರ ಠಾಣೆಗಳಲ್ಲಿ ದಾಖಲಾಗಿದ್ದ 7 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದ ಪ್ರಕರಣಗಳ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆರೆಯಾಗಿದ್ದು ಹೇಗೆ?:

ನಗರದಲ್ಲಿ ದಾಖಲಾಗಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳ ತನಿಖೆಗೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್‌.ನೇಮಗೌಡ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಠಾಣೆ ಎಸಿಪಿ ಎನ್‌.ಪವನ್ ಸಾರಥ್ಯದಲ್ಲಿ ವಿಶೇಷ ತಂಡವನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್ ರಚಿಸಿದ್ದರು.

ಈ ಬಗ್ಗೆ ತನಿಖೆಗಿಳಿದ ಎಸಿಪಿ ಪವನ್ ತಂಡ, ಬೆದರಿಕೆ ಸಂದೇಶಕ್ಕೆ ಬಳಕೆಯಾಗಿದ್ದ ಇ-ಮೇಲ್ ಬೆನ್ನತ್ತಿದಾಗ ಎಲ್ಲ ಶಾಲೆಗಳು ಹಾಗೂ ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕೃತ್ಯಕ್ಕೆ ಸಾಮ್ಯತೆ ಕಂಡು ಬಂದಿದೆ. ಅಷ್ಟರಲ್ಲಿ ಐಪಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆಕೆಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಬಳಿಕ ಆಕೆಯನ್ನು ವಶಕ್ಕೆ ಪಡೆದು ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ಪ್ರಕರಣಗಳು ಪತ್ತೆಯಾಗಿವೆ.

-ಬಾಕ್ಸ್‌-

ಜ್ಯೋತಿಷಿ ಹೇಳಿದ ಶಾಸ್ತ್ರ

ದಿವೀಜ್ ಜತೆ ರೆನಿಯದ್ದು ಒನ್ ಸೈಡ್ ಲವ್ ಸ್ಟೋರಿ. ತನ್ನ ಪ್ರಿಯಕರನ ಮದುವೆ ವಿಚಾರ ತಿಳಿದು ಕನಲಿದ ಆಕೆ, ಮದುವೆ ತಪ್ಪಿಸಲು ಜ್ಯೋತಿಷಿಗಳ ಮೊರೆ ಹೋಗಿದ್ದಳು. ಆ ಜ್ಯೋತಿಷಿ ಮಾತು ಕೇಳಿ ಈಗ ರೆನಿ ಜೈಲು ಸೇರಿದ್ದಾಳೆ.

‘ನಿನಗೆ ನೀನು ಇಷ್ಟಪಡುವ ಹುಡುಗ ಸಿಗುತ್ತಾನೆ. ವಿವಾಹಿತನಾಗಿರುವ ಆತನ ಮರ್ಯಾದೆ ಕಳೆಯಬೇಕು. ಆತನ ಚಾರಿತ್ರ್ಯ ಸರಿಯಿಲ್ಲ ಎಂದು ಪ್ರಚಾರ ಮಾಡಿ ನಂಬಿಸಬೇಕು. ಆಗ ಆತನಿಂದ ಪತ್ನಿ ದೂರವಾಗುತ್ತಾಳೆ. ಈ ಬೆಳವಣೆಗೆಯಿಂದ ನೊಂದು ಪ್ರೀತಿ ಅರಸಿ ನಿನ್ನ ಬಳಿಗೆ ಆತ ಬರುತ್ತಾನೆ’ ಎಂದು ರೆನಿಗೆ ಚೆನ್ನೈ ಜ್ಯೋತಿಷಿ ಸಲಹೆ ಕೊಟ್ಟಿದ್ದ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಈಕೆ ಮೇಲೆ ದಿವೀಜ್‌ಗೆ ಪ್ರೀತಿ ಇರಲಿಲ್ಲ. ಈ ವಿಚಾರವನ್ನು ಆಕೆಗೆ ದಿವೀಜ್ ಸ್ಪಷ್ಟಪಡಿಸಿದ್ದ. ಹೀಗಿದ್ದರೂ ರೆನಿ ಆತನ ಬೆನ್ನುಬಿದ್ದಿದ್ದಳು.

ಈ ಶಾಸ್ತ್ರ ನಂಬಿದ ಆಕೆ, ದಿವೀಜ್‌ ಗೌರವ ಹಾಳು ಮಾಡಲು ಮುಂದಾದಳು. ಆತನೊಬ್ಬ ಅತ್ಯಾಚಾರಿ, ಹೆಣ್ಣು ಬಾಕ ಎಂದೆಲ್ಲ ಪ್ರಚಾರ ಮಾಡಿದ್ದಳು. ಕೊನೆಗೆ ಆತನ ಹೆಸರಿನಲ್ಲಿ ಹುಸಿ ಬಾಂಬ್ ಬೆದರಿಕೆ ಕಳುಹಿಸಿ ಸಿಕ್ಕಿಬಿದ್ದಾಳೆ