ಸಾರಾಂಶ
ಮುಖ್ಯಮಂತ್ರಿಗಳು ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ? ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಸಂಪನ್ಮೂಲ ಕ್ರೋಢೀಕರಿಸಲು ಸಿಎಂ ವಿಫಲವಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.
ಹಾವೇರಿ: ಮುಖ್ಯಮಂತ್ರಿಗಳು ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ? ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಸಂಪನ್ಮೂಲ ಕ್ರೋಢೀಕರಿಸಲು ಸಿಎಂ ವಿಫಲವಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿಯಲ್ಲಿ ಸೋರಿಕೆಯಾಗುತ್ತಿದೆ. ಅದನ್ನು ತಡೆಯುವಲ್ಲಿಯೂ ಸಿಎಂ ವಿಫಲರಾಗಿದ್ದು, ಸುಮ್ಮನೆ ಕುಳಿತಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡಿದರೆ ಇಲ್ಲೇ ಸಾಕಷ್ಟು ಆದಾಯ ಬರುತ್ತದೆ. ಪ್ಲಾಸ್ಟಿಕ್, ಅಡಕೆ, ಸ್ಕ್ರ್ಯಾಪ್ ವ್ಯಾಪಾರದಲ್ಲಿ ಸೋರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುವುದಲ್ಲ. ನಿಮ್ಮ ಆಡಳಿತ ಬಿಗಿ ಮಾಡಿ, ಸಂಪನ್ಮೂಲ ಕ್ರೋಢೀಕರಿಸಿ. ಯಾವ ಯೋಜನೆಗೆ ಆದ್ಯತೆ ನೀಡಿ ಸಮಯ ಮತ್ತು ಹಣ ಸರಿಯಾಗಿ ನಿರ್ವಹಣೆ ಮಾಡಿದರೆ ಪರಿಹಾರ ಸಾಧ್ಯ. ಅದನ್ನು ಬಿಟ್ಟು ಸರಳ ಮಾರ್ಗ ಅನುಸರಿಸಿ ಜನರಿಂದ ತೆರಿಗೆ ಸಂಗ್ರಹಿಸಿ ಹಂಚಿಕೆ ಮಾಡುತ್ತಿದ್ದಾರೆ. ದುಡಿಯುವ, ದುಡಿಸುವ ಆದಾಯ ಹೆಚ್ಚಿಸುವ, ದಕ್ಷ ಆಡಳಿತದ ಕಡೆಗೆ ಗಮನ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಬಂದ್ ಮಾಡುವಂತೆ ನಾನ್ಯಾಕೆ ಹೇಳಲಿ. ಗ್ಯಾರಂಟಿ ಯೋಜನೆ ಕೊಡಿ ಎಂದು ನಾವು ಹೇಳುತ್ತೇವೆ. ಗ್ಯಾರಂಟಿ ಕೊಡುತ್ತೇವೆಂದು ಜನರಿಗೆ ಹೇಳಿ ಅಧಿಕಾರಕ್ಕೆ ಬಂದಿದ್ದೀರಿ, ಗ್ಯಾರಂಟಿ ಕೊಡಿ. ಗ್ಯಾರಂಟಿಯೂ ಕೊಡಬೇಕು ಅಭಿವೃದ್ಧಿಯೂ ಮಾಡಬೇಕು. ಗ್ಯಾರಂಟಿಗಾಗಿ ವಿಶೇಷ ಸಂಪನ್ಮೂಲ ಕ್ರೋಢೀಕರಿಸಿ ಕೊಡಿ. ಆವಾಗ ಸಿದ್ದರಾಮಯ್ಯನವರಿಗೆ ನಾವು ಶಹಬ್ಬಾಸ್ ಎನ್ನುತ್ತೇವೆ. ಅಭಿವೃದ್ಧಿ ಶೂನ್ಯ ಮಾಡಿ ಜನರ ಮೇಲೆ ತೆರಿಗೆ ಹಾಕಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.