ವನ್ಯಜೀವಿ ಕೇಸಲ್ಲಿದ್ದವರ ರಕ್ಷಿಸಿದ್ದೇ ಬೊಮ್ಮಾಯಿ: ಹರೀಶ್‌ ಕಿಡಿ

| Published : Oct 19 2025, 01:00 AM IST

ವನ್ಯಜೀವಿ ಕೇಸಲ್ಲಿದ್ದವರ ರಕ್ಷಿಸಿದ್ದೇ ಬೊಮ್ಮಾಯಿ: ಹರೀಶ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಪ್ರಾಣಿಗಳ ಕೇಸ್‌ನಲ್ಲಿ ಜೈಲಿನಲ್ಲಿ ಇರಬೇಕಾದವರು ಇಂದು ಹೊರಗಿರಲು ನಮ್ಮದೇ ಸರ್ಕಾರದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ಅರಣ್ಯ ಸಚಿವರಾಗಿದ್ದವರು ಕಾರಣ‍ವಾಗಿದ್ದಾರೆ. ಇಂತಹವರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಸ್ವಪಕ್ಷದ ಬಸವರಾಜ ಬೊಮ್ಮಾಯಿ ಇತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಜೈಲ್‌ನಲ್ಲಿ ಇರಬೇಕಾದೋರು ಹೊರಗಿರಲು ನಮ್ಮದೇ ಸರ್ಕಾರದಲ್ಲಿದ್ದ ಸಿಎಂ, ಗೃಹಮಂತ್ರಿ, ಅರಣ್ಯ ಸಚಿವ ಕಾರಣ‍: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವನ್ಯಪ್ರಾಣಿಗಳ ಕೇಸ್‌ನಲ್ಲಿ ಜೈಲಿನಲ್ಲಿ ಇರಬೇಕಾದವರು ಇಂದು ಹೊರಗಿರಲು ನಮ್ಮದೇ ಸರ್ಕಾರದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ಅರಣ್ಯ ಸಚಿವರಾಗಿದ್ದವರು ಕಾರಣ‍ವಾಗಿದ್ದಾರೆ. ಇಂತಹವರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಸ್ವಪಕ್ಷದ ಬಸವರಾಜ ಬೊಮ್ಮಾಯಿ ಇತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಪ್ರಾಣಿಗಳನ್ನು ಅಕ್ರಮವಾಗಿಟ್ಟುಕೊಂಡವರು, ಕೃಷ್ಣಮೃಗವನ್ನು ತಿಂದವರು ಈಗ ಹೊರಗಿದ್ದಾರೆ. ನಮ್ಮ ಪಕ್ಷದವರು ಮಾಡಿದ್ದು ಸರಿ ಅಂತಾ ನಾನು ಹೇಳಿಲ್ಲ. ಈ ಹಿಂದೆಯೇ ಇಂತಹದ್ದನ್ನು ಪ್ರಶ್ನಿಸಿದ್ದೆ, ವಿರೋಧಿಸಿದ್ದೆ. ಈ ಮೊದಲೂ ಈ ಮಾತು ಹೇಳಿದ್ದೆ, ಇಂದೂ ಹೇಳಿದ್ದೇನೆ, ಮುಂದೆಯೂ ಇದೇ ಮಾತನ್ನೇ ಹೇಳುವೆ ಎಂದರು.

ಜೈಲು ಪಾಲಾಗಬೇಕಾದವರನ್ನು ಕಾಪಾಡಿ, ಹೊರಗಿರುವಂತೆ ಮಾಡಿದರು. ಅದಾದ ನಂತರವೇ ನಾವು ಅಧಿಕಾರ ಕಳೆದುಕೊಂಡು, 68 ಜನ ಸೋಲುವಂತಾಯಿತು. ಈಗ ಅದೇ ಬೊಮ್ಮಾಯಿ ಸಂಸದರಾಗಿದ್ದು, ನಮ್ಮ ಪಕ್ಷ ವಿಪಕ್ಷದಲ್ಲಿ ಕೂಡುವಂತಾಗಿದೆ ಎಂದು ಹರೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಶಿವಸ್ವಾಮಿಗೆ ತಾಕತ್ತು ಇಲ್ಲ:

ಮಾಜಿ ಎಂಎಲ್‌ಸಿ ಡಾ. ಎ.ಎಚ್. ಶಿವಯೋಗಿಸ್ವಾಮಿ ಅವರಿಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ, ತಾಕತ್ತು ಇಲ್ಲ. ತಮ್ಮ ಮನೆಯವರಿಗೆ ವೈದ್ಯಕೀಯ ಸೀಟು ಮಾಡಿಸಿಕೊಳ್ಳಲು ಕಾಂಗ್ರೆಸ್‌ನವರ ಪರ ಇರಬೇಕಾಗುತ್ತದೆ. ಬಿಜೆಪಿಯ ನಿಜವಾದ ಮಾಜಿ ಎಂಎಲ್‌ಸಿ ಆಗಿದ್ದರೆ ಜಿಲ್ಲಾಡಳಿತದ ವಿರುದ್ಧ ಧ್ವನಿಯೆತ್ತಿ ಮಾತನಾಡಲಿ. ತಮ್ಮ ಮಕ್ಕಳು, ಮರಿಗಾಗಿ ಕಾಂಗ್ರೆಸ್‌ನವರ ಸೇವೆ ಮಾಡುವುದನ್ನು ಇನ್ನಾದರೂ ನಿಲ್ಲಿಸಲಿ. ಡಾ.ಶಿವಯೋಗಿಸ್ವಾಮಿ ಸಭ್ಯತೆ ಬಗ್ಗೆ ಮಾತನಾಡಿದ್ದಾರೆ. ಇವರು ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಎಲ್.ಬಸವರಾಜ ಅವರ ಮನೆಗೆ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿದ್ದು ಸಭ್ಯತೆಯೇ ಎಂದು ಹರೀಶ ಪ್ರಶ್ನಿಸಿದರು.

- - -

(ಬಾಕ್ಸ್‌)

* ರಸ್ತೇಲೆ ಪ್ರಾರ್ಥಿಸುವ ನೌಕರರ ವಿರುದ್ಧ ಏನು ಕ್ರಮ?

- ಸಂಘದ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನೌಕರರಿಗೆ ಎಚ್ಚರಿಕೆಗೆ ಬಿ.ಪಿ.ಹರೀಶ ಕಿಡಿ ದಾವಣಗೆರೆ: ಆರ್‌ಎಸ್‌ಎಸ್‌ ಶತಮಾನದ ಸಂಭ್ರಮಾರಣೆ ವೇಳೆ ಸರ್ಕಾರಿ ನೌಕರರಿಗೆ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಭಯ ಹುಟ್ಟು ಹಾಕುತ್ತಿದೆ. ಅಲ್ಪಸಂಖ್ಯಾತ ನೌಕರರು ರಸ್ತೆಯಲ್ಲೇ ಪ್ರಾರ್ಥನೆ ಮಾಡುತ್ತಾ, ಸಂಚಾರಕ್ಕೆ ಅಡ್ಡಿಪಡಿಸುತ್ತಾರಲ್ಲ ಅದರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತದೆ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ ಪ್ರಶ್ನಿಸಿದರು.

ಸಂಘದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದೆಂದು ಯಾವ ಕಾನೂನಿನಲ್ಲಿ ಹೇಳಿದೆ? ಸೇವಾ ಮನೋಭಾವದ ಆರ್‌ಎಸ್‌ಎಸ್‌ ಬಗ್ಗೆ ಕಾಂಗ್ರೆಸ್ಸಿಗರು ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ಸಂಘ ಪರಿವಾರದ ದಾವಣಗೆರೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದಾರೆ. ಯಾರು ಬಂದು ಮುತ್ತಿಗೆ ಹಾಕುತ್ತಾರೋ ನೋಡೋಣ. ಸಂಘವೇನು ದೇಶ ವಿರೋಧಿ ಚಟುವಟಿಕೆ ಕೈಗೊಂಡಿದೆಯಾ? ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಕೂಗಿದೆಯಾ ಎಂದು ಕಿಡಿಕಾರಿದರು.

ದೇಶಭಕ್ತ ಸಂಘಟನೆ ಸಂಘ ಪರಿವಾರದ ವಿರುದ್ಧ ಇಂತಹ ಚಟುವಟಿಕೆ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಎಂಬಂತೆ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟು ಕೊಡಲ್ಲ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ ನಾನೇ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಇದೆಲ್ಲದರಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಘ ಪರಿವಾರದ ಮೇಲೆ ಆಕ್ರಮಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ ಕಾರ್ಯಕರ್ತರು ರಾಷ್ಟ್ರಭಕ್ತರು, ಧರ್ಮರಕ್ಷಕರು. ಕಾಂಗ್ರೆಸ್ಸಿನ ಗೊಡ್ಡು ಬೆದರಿಕೆಗೆ ಹೆದರುವವರಲ್ಲ. ಕಾಂಗ್ರೆಸ್ ಸರ್ಕಾರದ ಎಲ್ಲ ನಡೆಗಳನ್ನೂ ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಗಮನಿಸುತ್ತಿವೆ. ಮುಂದಿನ ದಿನಗಳಲ್ಲಿ ಏನೇ ಅನಾಹುತವಾದರೂ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

- - -

(ಕೋಟ್‌) ಹರಿಹರದಲ್ಲಿ ಭಾನುವಾರ ಸಂಘ ಪರಿವಾರದ ಪಥ ಸಂಚಲನವಿದ್ದು, ನಾನೂ ಸೇರಿದಂತೆ ಎಲ್ಲರೂ ಗಣವೇಷಧಾರಿಗಳಾಗಿ ಭಾಗವಹಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತದೆ ನೋಡೋಣ? ಗಾಂಧಿ ಕುಟುಂಬವೆಂದು ಬೀಗುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಕುಟುಂಬದವರಿಗೆ ತಾವು ಯಾವ ಧರ್ಮವೆಂದು ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ತಾವು ಹಿಂದೂವೋ, ಬೌದ್ಧರೋ ಅಥವಾ ಯಾವುದೆಂಬುದನ್ನೇ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಇನ್ನು ಬಿಜೆಪಿಗೆ ಆಹ್ವಾನಿಸಿದ್ದರು ಅಂತಾ ಡಿ.ಕೆ.ಶಿವಕುಮಾರ ಹೇಳಿಕೆ ಮಾರನೇ ದಿನವೇ ಬದಲಾಗಿದೆ. ಡಿಕೆಶಿ ಧೈರ್ಯ ಒಂದೇ ಒಂದು ದಿನಕ್ಕೂ ಉಳಿಯಲಿಲ್ಲ.

- ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ.

- - -

-18ಕೆಡಿವಿಜಿ2: ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ.