ಸಾರಾಂಶ
ಕನ್ನಡಪ್ರಭ ವಾರ್ತೆ, ವಿಧಾನಸಭೆ
‘ಬಜೆಟ್‌ನಲ್ಲಿ ಘೋಷಿಸಿದ್ದ ಭದ್ರಾ ಮೇಲ್ದಂಡೆಯ 5,300 ಕೋಟಿ ರು. ಹಾಗೂ 15ನೇ ಹಣಕಾಸು ಆಯೋಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಮೀಸಲಿಟ್ಟಿದ್ದ 6,000 ಕೋಟಿ ರು. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ ಪತ್ರ ಬರೆದು ಹಲವು ಬಾರಿ ಭೇಟಿ ಮಾಡಿ ಗೋಗರೆದರೂ ಕೇಂದ್ರ ಸರ್ಕಾರ ನೀಡಿಲ್ಲ.
ಬಸವರಾಜ ಬೊಮ್ಮಾಯಿ ಅವರು ಮಾರ್ಚ್ ಒಳಗಡೆ ಅನುದಾನ ಬಿಡುಗಡೆ ಮಾಡಿಸಲಿ. ಇಲ್ಲದಿದ್ದರೆ ಇನ್ನೆಂದೂ ಕೇಂದ್ರವನ್ನು ವಹಿಸಿಕೊಂಡು ಮಾತನಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ್ದ ಹಣವನ್ನೂ ನೀಡದೆ ಪಂಗನಾಮ ಹಾಕಿದೆ.
ಇನ್ನೊಂದು ತಿಂಗಳಲ್ಲಿ ಅನುದಾನ ಘೋಷಿಸಿದ್ದ ಬಜೆಟ್‌ನ ಅವಧಿಯೇ ಮುಗಿಯಲಿದೆ. ಇದು ರಾಜ್ಯಕ್ಕೆ ಮಾಡಿದ ಅನ್ಯಾಯವಲ್ಲವೇ ಎಂದು ಕಿಡಿಕಾರಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಭದ್ರಾ ಮೇಲ್ದಂಡೆ ಯೋಜನೆಗೆ ಬರುವ ಅನುದಾನ ಪಡೆಯಲು ರಾಜ್ಯ ಸರ್ಕಾರ ನಿರ್ದಿಷ್ಟ ನಮೂನೆಯಲ್ಲಿ (ಎನ್-ಫಾರಂ) ಪ್ರಸ್ತಾವನೆ ಸಲ್ಲಿಸಬೇಕು.
ವ್ಯವಸ್ಥಿತವಾಗಿ ಮನವಿ ಮಾಡಿದರೆ ರಾಷ್ಟ್ರೀಯ ಮಾನ್ಯತೆಯೂ ಸಿಗುತ್ತದೆ. ಸರ್ಕಾರ ವ್ಯವಸ್ಥಿತವಾಗಿ ಪ್ರಸ್ತಾವನೆ ಸಲ್ಲಿಸದೆ ರಾಜಕೀಯಕ್ಕೆ ಆರೋಪ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳುವುದು ಬೇಡ. ನಾವು ಎಲ್ಲ ರೀತಿಯಲ್ಲೂ ಪ್ರಸ್ತಾವನೆ ಸಲ್ಲಿಸಿದ್ದೇವೆ.
ನಿಮ್ಮ ಅವಧಿಯಲ್ಲಿದ್ದ ಅಧಿಕಾರಿಗಳೇ ಪ್ರಸ್ತಾವನೆ ಕಳುಹಿಸಿದ್ದಾರೆ. ನೀವು ಹೇಳಿದಂತೆಯೇ ನಿಮ್ಮ ಜತೆಯೇ ಹೋಗಿ ಪ್ರಸ್ತಾವನೆ ಸಲ್ಲಿಸೋಣ, ಮಾರ್ಚ್ ಒಳಗಡೆ ಅನುದಾನ ಕೊಡಿಸದಿದ್ದರೆ ಇನ್ನೊಮ್ಮೆ ಕೇಂದ್ರವನ್ನು ಸಮರ್ಥಿಸಬಾರದು ಎಂದು ಸವಾಲು ಹಾಕಿದರು.
ಅದಕ್ಕೆ ಬಸವರಾಜ ಬೊಮ್ಮಾಯಿ, ನೀವು ಇಲ್ಲಿಯವರೆಗೆ ಪ್ರಸ್ತಾವನೆ ಸಲ್ಲಿಸದೆ ಈಗ ಹೇಳಿದರೆ ಹೇಗೆ ಎಂದು ಹೇಳಿ ಸುಮ್ಮನಾದರು.
ನೀವೇ ತರಬೇತಿ ಕೊಡಿ: ಡಿಕೆಶಿಕೇಂದ್ರ ಸರ್ಕಾರವು ಸಚಿವ ಸಂಪುಟದ ಹಂತದಲ್ಲಿ ಯೋಜನೆಯನ್ನು ತಡೆ ಹಿಡಿದಿದೆ. ನಾವು ಎಲ್ಲಾ ರೀತಿಯಲ್ಲೂ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಬೇರೆ ರೀತಿ ಪ್ರಸ್ತಾವನೆ ಸಲ್ಲಿಸಬೇಕಾದರೆ ನೀವೇ ತರಬೇತಿ ಕೊಡಿ. ರಾಜ್ಯದ ಹಿತದೃಷ್ಟಿಯಿಂದ ನಿಮ್ಮ ಜತೆ ಬರುತ್ತೇವೆ. ಆದರೆ ಅನುದಾನ ನೀಡದಿದ್ದರೆ ರಾಜ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.