ದೇಸಿ ಹಬ್ಬಗಳಿಂದ ಬಾಂಧವ್ಯ ವೃದ್ಧಿ: ಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ

| Published : Jan 15 2024, 01:46 AM IST

ದೇಸಿ ಹಬ್ಬಗಳಿಂದ ಬಾಂಧವ್ಯ ವೃದ್ಧಿ: ಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಜಾನಪದ ಮತ್ತು ಸಂಸ್ಕೃತಿಗಳು ನಮ್ಮ ದೇಶದ ಪ್ರತೀಕವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆ ಯುವಕರ ಮೇಲಿದೆ ಎಂದು ಬೆನಕಟ್ಟಿಯ ಪ್ರಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷಣ, ರಂಗೋಲಿ, ಪ್ರಬಂಧ, ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಜಾನಪದ ನೃತ್ಯ, ಜಾನಪದ ಗೀತೆಗಳು ಸೇರಿದಂತೆ ಹಲವಾರು ಸ್ಪರ್ಧೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತಿ ಬಾಗಲಕೋಟೆ

ಜಾನಪದ ಮತ್ತು ಸಂಸ್ಕೃತಿಗಳು ನಮ್ಮ ದೇಶದ ಪ್ರತೀಕವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹೊಣೆ ಯುವಕರ ಮೇಲಿದೆ ಎಂದು ಬೆನಕಟ್ಟಿಯ ಪ್ರಗತಿಪರ ರೈತ ಪಾಂಡುರಂಗ ಸಣ್ಣಪ್ಪನವರ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಬ್ಬಗಳು ಮನುಷ್ಯನಲ್ಲಿ ಉತ್ಸಾಹ ಮತ್ತು ಬಾಂಧವ್ಯ ರೂಪಿಸುತ್ತವೆ. ಪರಂಪರೆಯ ನೆಲಗಟ್ಟಿನ ಮೇಲೆ ಆಚರಣೆಗಳು ಜಾರಿಯಲ್ಲಿದ್ದು, ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.

ಜೀವನ ರೂಪಿಸಿಕೊಳ್ಳಲು ಸಹಾಯಕವಾಗುವ ಜ್ಞಾನವೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣವನ್ನು ಹಳ್ಳಿಯ ಪರಂಪರೆ ಕಲಿಸುತ್ತದೆ. ಹಳ್ಳಿಯ ಸಂಸ್ಕೃತಿ ಮರೆಯಾಗುತ್ತಿದ್ದು, ಕಾಲೇಜು ಮಟ್ಟದಲ್ಲಿ ಇಂತಹ ಹಬ್ಬದ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಇದನ್ನು ಬಸವೇಶ್ವರ ಕಲಾ ಮಹಾವಿದ್ಯಾಲಯ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಮಾತನಾಡಿ, ಮಕರ ಸಂಕ್ರಾಂತಿಗೆ ಸೂರ್ಯ ಪಥ ಬದಲಿಸಿದಂತೆ ಮನಸ್ಸುಗಳು ಕೂಡ ಉತ್ತರದತ್ತ ಪಥ ಬದಲಾಯಿಸಿ ಧನಾತ್ಮಕ ಆಲೋಚನೆಗಳು ಬೆಳೆಯುತ್ತವೆ. ಸಂಕ್ರಾಂತಿ ಕೇವಲ ಹಬ್ಬವಾಗಿರದೆ ರೈತರು ಬೇಸಾಯದಲ್ಲಿ ತೊಡಗುವ ಸಂತೋಷದ ಸಂದರ್ಭವಾಗಿದ್ದು, ಎಲ್ಲರ ಬದುಕಿನಲ್ಲಿ ಹರ್ಷವನ್ನು ಇಮ್ಮಡಿ ಗೊಳಿಸುತ್ತದೆ. ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಸಂಕ್ರಾಂತಿ ಸಿರಿ ಕಾರ್ಯಕ್ರಮವನ್ನು ಒಟ್ಟಿಗೆ ಮಾಡಿರುವುದು ಎಳ್ಳು, ಬೆಲ್ಲದ ಸಮ್ಮಿಶ್ರ ಮಾಡಿ ಸೇವಿಸಿದಷ್ಟೆ ಕುಷಿ ತಂದಿದೆ ಎಂದರು.

ಪ್ರಾಧ್ಯಾಪಕರಾದ ಎಂ.ಎಚ್. ವಡ್ಡರ, ಡಾ.ಲಲಿತಾ ಚವಡಿ, ವಿದ್ಯಾರ್ಥಿ ಪ್ರತಿನಿಧಿ ಸಚಿನ ಪೂಜಾರಿ, ವಿದ್ಯಾರ್ಥಿನಿ ಪ್ರತಿನಿಧಿ ನೇತ್ರಾ ರಾಮಪುರ ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ವಿವಿಧ ಸ್ಪರ್ಧೆ: ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಸಂಕ್ರಾಂತಿ ಸಿರಿ ಕಾರ್ಯಕ್ರಮದ ಅಂಗವಾಗಿ ಮಹಾವಿದ್ಯಾಲಯದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಷಣ, ರಂಗೋಲಿ, ಪ್ರಬಂಧ, ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಜಾನಪದ ನೃತ್ಯ, ಜಾನಪದ ಗೀತೆಗಳು ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ರಂಜಿಸಿದರು.

ಡೊಳ್ಳಿನ ಮೂಲಕ ಮೆರವಣಿಗೆ: ಎತ್ತಿನ ಚಕ್ಕಡಿಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನಿರಿಸಿ ವಿದ್ಯಾರ್ಥಿಗಳೇ ಡೊಳ್ಳು ಬಾರಿಸುವುದರ ಮೂಲಕ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಮೆರವಣಿಗೆಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಚಾಲನೆ ನೀಡಿದರು. ಬೀಳೂರು ಗುರುಬಸವ ದೇವಸ್ಥಾನದಿಂದ ನೂತನ ಸಭಾಭವನದವರೆಗೆ ಮೆರವಣಿಗೆ ಸಾಗಿತು.

ಕಣ್ಣು ಕುಕ್ಕುವ ದೇಸಿ ಉಡುಗೆ ತೊಡುಗೆ: ಸಂಕ್ರಾಂತಿ ಸಿರಿ ಕಾರ್ಯಕ್ರಮಕ್ಕೆ ತಕ್ಕಂತೆ ಪ್ರಾಧ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ದೇಶಿಯ ಉಡುಪು ಧರಿಸಿದ್ದರು. ವಿದ್ಯಾರ್ಥಿನಿಯರು ಇಳಕಲ್ಲ ಸೀರೆಯಲ್ಲಿ ಕಂಗೊಳಿಸಿದರೆ, ಪಂಚೆ, ಶರ್ಟ್‌, ದೋತಿಯಲ್ಲಿ ವಿದ್ಯಾರ್ಥಿಗಳು ಮಿಂಚಿದರು.