ಪಟ್ಟಣ ಸೇರಿ ತಾಲೂಕಿನ ಏಳೆಂಟು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ತಿಪ್ಪನಾಳ ಬಳಿಯ ರಾಜೀವ್ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ತುಂಬಿದ ಕೆರೆಗೆ ಸೋಮವಾರ ಬೋಂಗಾ ಬಿದ್ದು ನೀರು ಸೋರಿಕೆಯಾಗಿ ಆತಂಕ ಸೃಷ್ಟಿಸಿದೆ.
ಸಚಿವ ತಂಗಡಗಿ, ಅಧಿಕಾರಿಗಳು ದಿಢೀರ್ ಭೇಟಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಕನಕಗಿರಿಪಟ್ಟಣ ಸೇರಿ ತಾಲೂಕಿನ ಏಳೆಂಟು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ತಿಪ್ಪನಾಳ ಬಳಿಯ ರಾಜೀವ್ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ತುಂಬಿದ ಕೆರೆಗೆ ಸೋಮವಾರ ಬೋಂಗಾ ಬಿದ್ದು ನೀರು ಸೋರಿಕೆಯಾಗಿ ಆತಂಕ ಸೃಷ್ಟಿಸಿದೆ.
ಸುಮಾರು ೨೦ಕ್ಕೂ ಹೆಚ್ಚು ಎಕರೆಯಷ್ಟಿರುವ ಕೆರೆಯನ್ನು ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ತುಂಬಿಸಲಾಗಿದೆ. ಆದರೆ, ಗುತ್ತಿಗೆದಾರರ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ ಬೋಂಗಾ ಬಿದ್ದು, ನೀರು ಕೆರೆಯಿಂದ ಹೊರ ಬರಲು ಆರಂಭಿಸಿದೆ.ಇದನ್ನು ಗಮನಿಸಿದ ರೈತರೊಬ್ಬರು ಮಾಹಿತಿ ನೀಡಿದ್ದಾರೆ. ಕೂಡಲೇ ತಹಸೀಲ್ದಾರ್ ಚಂದ್ರಶೇಖರ ಗಾಳಿ ಹಾಗೂ ತಾಪಂ ಇಒ ರಾಜಶೇಖರ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇ ನಾಗರಾಜರು ಕೆರೆಗೆ ಆಗಮಿಸಿ ಪೋಲಾಗುತ್ತಿರುವ ನೀರನ್ನು ತಡೆಯಲು ಮುಂದಾಗಿದ್ದಾರೆ. ಬಿದ್ದಿರುವ ಬೋಂಗಾವನ್ನು ಮುಚ್ಚಲು ಸೂಳೇಕಲ್ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳದಿಂದ ಜೆಸಿಬಿ, ಹಿಟಾಚಿ ಹಾಗೂ ಟ್ರಾಕ್ಟರ್ಗಳಿಂದ ಬೊಂಗಾ ಮುಚ್ಚುವ ಪ್ರಯತ್ನ ನಡೆದಿದೆ.ಸುದ್ದಿ ತಿಳಿಯುತ್ತಿದ್ದಂತೆ ಜಿಪಂ ಸಿಇಒ ವರ್ಣೀತ್ ನೇಗಿಯೂ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಸಚಿವ ಶಿವರಾಜ ತಂಗಡಗಿಯೂ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗೆ ನೀರು ಪೋಲಾಗದಂತೆ ಹಾಗೂ ಕೆರೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು. ಮಣ್ಣು ಹಾಕಿ ಬೋಂಗಾ ಮುಚ್ಚುವ ಕೆಲಸ ಮಾಡಿದರೂ ನೀರು ಹರಿಯುತ್ತಿದ್ದರಿಂದ ಸಂಜೆ ಮರಳಿನ ಚೀಲದ ಮೂಲಕ ಮುಚ್ಚುವ ಪ್ರಯತ್ನದಲ್ಲಿ ಅಧಿಕಾರಿಗಳು ಇದ್ದಾರೆ.ಕಳೆದ ಎರಡು ವರ್ಷಗಳಿಂದಲೂ ಕೆರೆಯ ನಿರ್ವಹಣೆ ಆಗಿಲ್ಲ. ಮುಂಬರುವ ಮಾರ್ಚ್- ಏಪ್ರಿಲ್ ತಿಂಗಳವರೆಗೂ ಆಗುವಷ್ಟು ಕೆರೆಯಲ್ಲಿ ಅವೈಜ್ಞಾನಿಕವಾಗಿ ಕುಡಿಯುವ ನೀರು ಬಾರಿ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ. ಇಷ್ಟು ನೀರು ಕೆರೆ ನೀರು ನಿರ್ಮಿಸಿದ ವರ್ಷ ಮಾತ್ರ ಸಂಗ್ರಹಿಸಲಾಗಿತ್ತು. ಈ ವರ್ಷ ಮಳೆ ಸಮಸ್ಯೆಯಿಂದಾಗಿ ನೀರಿನ ಬವಣೆ ನೀಗಿಸುವ ದಿಶೆಯಲ್ಲಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಕೆರೆ ನಿರ್ವಹಣೆಯ ಬಗ್ಗೆಯೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಇದೀಗ ಕೆರೆಯಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚಾಗಿರುವುದರಿಂದ ಕೆರೆಯ ಹಿಂಭಾಗದಲ್ಲಿ ಬೊಂಗಾ ಬಿದ್ದಿದೆ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲಸಂದೆ ಬೆಳೆ ನಾಶ: ಪರಿಹಾರಕ್ಕೆ ಮನವಿಕೆರೆಗೆ ಬೋಂಗಾ ಬಿದ್ದು ಪೋಲಾದ ನೀರು ಪಕ್ಕದಲ್ಲಿಯೇ ಇದ್ದ ಅಲಸಂದೆ ಜಮೀನಿಗೆ ನುಗ್ಗಿದ್ದು, ಬೆಳೆ ನೀರಿನಲ್ಲಿ ಮುಳುಗಿದೆ. ಇದರಿಂದ ಬೆಳೆ ಹಾಳಾಗಿದ್ದು, ೩೦ ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದೆ. ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಜಮೀನಿನಲ್ಲಿ ನಿಂತಿದ್ದರಿಂದ ಬೆಳೆ ಸಂಪೂರ್ಣ ನಾಶವಾಗಲಿದ್ದು, ಅಧಿಕಾರಿಗಳನ್ನು ಜಮೀನಿಗೆ ಕಳುಹಿಸಿದ ಸರ್ವೆ ನಡೆಸಿ ಪರಿಹಾರ ಕೊಡಿಸಲು ರೈತ ವೀರೇಶಪ್ಪ ಎಮ್ಮಿ ಸಚಿವರಿಗೆ ಮನವಿ ಮಾಡಿದರು.