ಗ್ರಂಥಾಲಯಗಳ ಸದ್ಭಳಕೆಯಾಗಬೇಕು. ಮಕ್ಕಳಿಗೆ ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು. ಪಟ್ಟಣದ ಅಣಲೆಕೊಪ್ಪದಲ್ಲಿ ೪೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು
ಸಾಗರ: ಗ್ರಂಥಾಲಯಗಳ ಸದ್ಭಳಕೆಯಾಗಬೇಕು. ಮಕ್ಕಳಿಗೆ ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.
ಪಟ್ಟಣದ ಅಣಲೆಕೊಪ್ಪದಲ್ಲಿ ೪೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು.ಮೊಬೈಲ್ ಗೀಳಿನಿಂದ ಮಕ್ಕಳು ಹೊರ ಬರಬೇಕಾದರೆ ಅವರಿಗೆ ಪುಸ್ತಕಪ್ರೀತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಸಾಗರದಲ್ಲಿ ಗ್ರಂಥಾಲಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಗರದ ಪ್ರಧಾನ ಗ್ರಂಥಾಲಯ ೫೦ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಯೋಚಿಸಲಾಗಿದೆ ಎಂದು ಹೇಳಿದರು.ನಾನು ಸಹ ಪ್ರೌಢಶಾಲಾ ಹಂತದಲ್ಲಿ ಸಾಗರ ಕೇಂದ್ರ ಗ್ರಂಥಾಲಯದಿಂದ ಹೆಚ್ಚಿನ ಅನುಕೂಲ ಪಡೆದಿದ್ದೇನೆ. ಹಿಂದೆ ಟಿವಿ ಇರಲಿಲ್ಲ. ಆಗ ಹೆಚ್ಚಿನ ಜನರು ಲೈಬ್ರರಿಯಿಂದ ಪುಸ್ತಕ ತೆಗೆದುಕೊಂಡು ಓದುತ್ತಿದ್ದರು. ಈಗ ಮನೆಮನೆಯಲ್ಲಿ ಟಿವಿ ಬಂದು ಜನರು ಓದುವ ಅಭ್ಯಾಸ ಬಿಟ್ಟಿದ್ದಾರೆ. ಅಣಲೆಕೊಪ್ಪ ಸೇರಿ ಪಟ್ಟಣದ ಹೊರ ಬಡಾವಣೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಉದ್ದೇಶವಿದೆ ಎಂದರು.ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ನಳಿನಿ ಜಿ.ಐ. ಮಾತನಾಡಿ, ಸಾಗರದಲ್ಲಿ ಗ್ರಂಥಾಲಯದ ಅಭಿವೃದ್ಧಿಗೆ ಶಾಸಕರು ವಿಶೇಷ ಒತ್ತು ನೀಡುತ್ತಿದ್ದು, ಇಲಾಖೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಸುಮಾರು ೪೫ ಲಕ್ಷ ರು. ವೆಚ್ಚದಲ್ಲಿ ಗ್ರಂಥಾಲಯದ ನೂತನ ಕಟ್ಟಡ ಶಾಸಕರು ಮಾಡಿಕೊಟ್ಟಿದ್ದಾರೆ. ಸ್ಥಳೀಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಆರ್. ಶ್ರೀನಿವಾಸ್, ಲಲಿತಮ್ಮ ಎನ್., ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿಕುಮಾರ್ ಲಿಂಗನಮಕ್ಕಿ, ಡಾ. ಕೆಳದಿ ವೆಂಕಟೇಶ್ ಜೋಯಿಸ್, ಮಹಾಬಲಗಿರಿ, ಸುರೇಶಬಾಬು ಇನ್ನಿತರರು ಉಪಸ್ಥಿತರಿದ್ದರು. ನಿರ್ಮಲಾ ಟಿ. ಸ್ವಾಗತಿಸಿದರು. ಹರೀಶ್ ವಂದಿಸಿದರು. ಮಾರುತಿ ಎಂ.ಎನ್. ನಿರೂಪಿಸಿದರು. ೫ಕೆ.ಎಸ್.ಎ.ಜಿ.೨ನೂತನ ಗ್ರಂಥಾಲಯ ಕಟ್ಟಡವನ್ನು ಶಾಸಕರು ಲೋಕಾರ್ಪಣೆ ಮಾಡಿದರು.