ಸಾರಾಂಶ
ನಮ್ಮ ದೇಹಕ್ಕೆ ವ್ಯಾಯಾಮ ನೀಡುವ ಜಿಮ್ ಗಳು ಎಷ್ಟು ಅಗತ್ಯವೋ ಮೆದುಳನ್ನು ಚುರುಕುಗೊಳಿಸಲು ಪುಸ್ತಕಗಳು ಅಷ್ಟೇ ಅಗತ್ಯ
ಕನ್ನಡಪ್ರಭ ವಾರ್ತೆ ಮೈಸೂರು
ನಾಗರೀಕ ಜಗತ್ತಿನಲ್ಲಿ ಮನುಷ್ಯನಿಗೆ ಪುಸ್ತಕಗಿಂತ ಮಿಗಿಲಾದ ಒಡನಾಡಿ ಮತ್ತೊಂದು ಇರಲು ಸಾಧ್ಯವಿಲ್ಲ. ಏಕೆಂದರೆ ಪುಸ್ತಕಗಳು ನಮ್ಮನ್ನು ಹೆಚ್ಚೆಚ್ಚು ಮನುಷ್ಯನಾಗಿ ಮಾಡುತ್ತವೆ ಎಂದು ಪ್ರಗತಿಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ತಿಳಿಸಿದರು.ನಗರದ ಹೂಟಗಳ್ಳಿಯಲ್ಲಿರುವ ವಿ-ಕೇರ್ ಸಂಸ್ಥೆಯು ಏರ್ಪಡಿಸಿದ್ದ ತಿಂಗಳ ಪುಸ್ತಕ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಹಕ್ಕೆ ವ್ಯಾಯಾಮ ನೀಡುವ ಜಿಮ್ ಗಳು ಎಷ್ಟು ಅಗತ್ಯವೋ ಮೆದುಳನ್ನು ಚುರುಕುಗೊಳಿಸಲು ಪುಸ್ತಕಗಳು ಅಷ್ಟೇ ಅಗತ್ಯವಿದೆ ಎಂದರು.
ತಂತ್ರಜ್ಞಾನ ಮುಂದುವರೆದಿರುವ ಈ ಕಾಲಘಟ್ಟದಲ್ಲಿ ಮೊಬೈಲ್ ಫೋನ್ ಗಳ ಗೀಳು ಹಾಗೂ ಅದರ ಕದಂಬ ಬಾಹುವಿನಿಂದ ಬಿಡಿಸಿಕೊಳ್ಳಲಂತೂ ಪುಸ್ತಕಗಳ ಓದು ಅತ್ಯಗತ್ಯವಾಗಿದೆ. ಪ್ರತಿನಿತ್ಯ ಪುಸ್ತಕಗನ್ನು ಓದುವುದರಿಂದ ಮನುಷ್ಯನ ಸಂವಹನ ಹಾಗೂ ಪರಸ್ಪರ ಅರ್ಥ ಮಾಡಿಕೊಳ್ಳಲು ಶಕ್ತಿ ವೃದ್ಧಿಸುತ್ತದೆ. ತಾನು ವಾಸಿಸುವ ಪರಿಸರ, ಸಂಗೀತ, ಭಾಷೆ ಇತ್ಯಾದಿಗಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪುಸ್ತಕಗಳು ನಮಗೆ ಬಹಳಷ್ಟು ಸಹಕಾರಿಯಾಗಿವೆ ಎಂದು ಅವರು ಹೇಳಿದರು.ಓದಿನ ಮೂಲಕ ನಾವು ಪ್ರಪಂಚದಲ್ಲಿ ಸಾಗಿ ಹೋಗಿರುವ ಹಾಗೂ ಇಂದಿಗೂ ಜೀವಿಸುತ್ತಿರುವ ವ್ಯಕ್ತಿಗಳ ಹಾಗೂ ಕಾಲ್ಪನಿಕ ಪಾತ್ರಗಳ ಮೂಲಕ ಪ್ರೇರಣೆ ಹಾಗೂ ಸ್ಫೂರ್ತಿಯನ್ನು ಪಡೆಯಬಹುದಾಗಿದೆ. ಬಹಳಷ್ಟು ಶ್ರಮವಹಿಸಿ ಇತರರ ಅನುಭವಗಳನ್ನು ಓದಿನ ಮೂಲಕ ನಮ್ಮದಾಗಿಸಿಕೊಳ್ಳಬಹುದಾಗಿದೆ ಎಂದರು.
ವಕೀಲರಾದ ಶೋಭಗೌಡ ಮಾತನಾಡಿ, ಪುಸ್ತಕ ಓದುವುದು ನಮ್ಮನ್ನು ಧ್ಯಾನವಸ್ಥೆ ಹಾಗೂ ಏಕಾಗ್ರತೆಯ ಕಡೆಗೆ ಕೊಂಡೊಯ್ಯುವುದಲ್ಲದೇ ಒಂದು ವಿಷಯವನ್ನು ವಿವಿಧ ಆಯಾಮಗಳಲ್ಲಿ ನೋಡುವ ದೃಷ್ಟಿಯನ್ನು ನಮಗೆ ನೀಡುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕ ಓದುವುದು ಒಂದು ಉತ್ತಮ ಹವ್ಯಾಸವಷ್ಟೇ ಅಲ್ಲದೇ ಬದುಕು ಕಟ್ಟಿಕೊಡುವ ಚಟುವಟಿಕೆಯಾಗಿದೆ ಎಂದು ಹೇಳಿದರು.ಪತ್ರಕರ್ತ ಅಯ್ಯಪ್ಪ ಹೂಗಾರ್, ವಿದ್ಯಾರ್ಥಿನಿ ನಿಮಿಲಿತ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಡಾ. ರಮ್ಯಾ ಪ್ರದೀಪ್, ವಿ-ಕೇರ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕುಮುದಿನಿ ಅಚ್ಚಿ, ಡಾ. ಸಾರಿಕಾ ಪ್ರಸಾದ್, ಬೆಳ್ಳೆಲೆ ಬೆಟ್ಟೇಗೌಡ ದಂಪತಿ, ಮೂಡಿಗೆರೆ ಗೋಪಾಲ್, ಶಶಾಂಕ್ ಮೊದಲಾದವರು ಇದ್ದರು.