`ಮೂಗಿಯ ಮನದೊಳು’ ಚೊಚ್ಚಲ ಕನ್ನಡ ಕಾದಂಬರಿಯನ್ನು ಲೋಕಾರ್ಪಣೆ

ಪುತ್ತೂರು: ‘ಮೂಗಿಯ ಮನದೊಳು’ ಕಾದಂಬರಿಯ ಬೆಳವಣಿಗೆಯಲ್ಲಿ ಅತಿಮಾನುಷ ಅಂಶದ ಸ್ವರೂಪ ಮತ್ತು ಆಕೃತಿಯಲ್ಲಿ ತಾಂತ್ರಿಕ ವಿಷಯಗಳ ಪಾತ್ರಗಳನ್ನು ಅದ್ಭುತವಾಗಿ ಲೇಖಕಿ ಚಿತ್ರೀಕರಿಸಿದ್ದಾರೆ. ಸಾಂಸ್ಕೃತಿಕ ತಾತ್ತ್ವಿಕ ನೆಲೆಯನ್ನು ಹಿಡಿದಿಡುವಲ್ಲೂ ಈ ಕಾದಂಬರಿ ಮುಖ್ಯವಾಗಿದೆ ಎಂದು ಮುಂಬೈ ವಿಶ್ವವಿದ್ಯಾಯಲದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.ಅವರು ಪುತ್ತೂರಿನ ದರ್ಬೆ ಬೈಪಾಸ್‌ನಲ್ಲಿರುವ ಡಾ. ಎನ್. ಸುಕುಮಾರ ಗೌಡ ಅವರ ಮಕ್ಕಳ ಮಂಟಪದಲ್ಲಿ ಪುತ್ತೂರು ತಾಲೂಕು ಕಚೇರಿಯ ಉಪತಹಸೀಲ್ದಾರ್ ಸುಲೋಚನಾ ಪಿ.ಕೆ. ಅವರ `ಮೂಗಿಯ ಮನದೊಳು’ ಚೊಚ್ಚಲ ಕನ್ನಡ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಾದಂಬರಿಗೆ ಮುನ್ನುಡಿ ಬರೆದ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ, ಕಾದಂಬರಿಗಾರ್ತಿಯ ಕೈಯ ಗೊಂಬೆಗಳಾಗದೇ ಪಾತ್ರಗಳು ಸ್ವಯಂ ಚಾಲನೆಯ ಶಕ್ತಿಯನ್ನು ಹೊಂದಿರುವುದು ಕಾದಂಬರಿಯ ಯಶಸ್ಸಿನ ನಿರ್ಣಾಯಕ ಅಂಶವಾಗಿದೆ ಎಂದರು.ಕರ್ನಾಟಕ ನಾಟಕ ಅಕಾಡೆಮಿ ರವೀಂದ್ರನಾಥ ಸಿರಿವರ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಪತ್ರಕರ್ತ ಪಾರ್ವತೀಶ ಬಿಳಿದಾಳೆ ಇದ್ದರು. ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹಾಗೂ ಪ್ರದೀಪ್ ಕೃಷ್ಣ ಬಂಗಾರಡ್ಕ ಸ್ಮರಣಿಕೆ ನೀಡಿ ಗೌರವಿಸಿದರು. ಲೇಖಕಿ ಸುಲೋಚನಾ ಪಿ.ಕೆ. ಅವರು ತನ್ನ ಪ್ರೌಢಶಾಲೆಯ ಗಣಿತ ಅಧ್ಯಾಪಕ ಆನಂದ ಏನೆಕಲ್ಲು ಮತ್ತು ಕವನ ಸಂಕಲನ ತಿದ್ದುಪಡಿ ಮಾಡಿದ ಬಾಲಕೃಷ್ಣ ಬೇರಿಕೆ ಅವರನ್ನು ಗೌರವಿಸಿದರು. ರಂಗಕರ್ಮಿಗಳಾದ ಕೃಷ್ಣಪ್ಪ ಬಾಂಬಿಲ ಮತ್ತು ಭವಾನಿ ಕಾಂಚನ ಕಾದಂಬರಿಯ ಬಗ್ಗೆ ಲೇಖಕಿ ರಚಿಸಿದ ಗೀತೆಗೆ ಸ್ವರ ಸಂಯೋಜಿಸಿ ಹಾಡಿದರು. ಉಪನ್ಯಾಸಕಿ ಡಾ. ಶೃತಿ ಸ್ವಾಗತಿಸಿದರು. ಲೇಖಕಿ ಸುಲೋಚನಾ. ಪಿ.ಕೆ. ವಂದಿಸಿದರು. ಶ್ರೀಕಲಾ ಕಾರಂತ ಎರುಂಬು ನಿರೂಪಿಸಿದರು.