ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ದಾಮೋದರ ಆರ್. ಸುವರ್ಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ದಾಮೋದರ್ ಆರ್. ಸುವರ್ಣ ಜನ್ಮಶತಾಬ್ದಿ ಸಂಭ್ರಮ ಪ್ರಯುಕ್ತ ಸಾಹಿತಿ ಮುದ್ದು ಮೂಡುಬೆಳ್ಳೆ ರಚಿತ ‘ಶಕಪುರುಷನಿಗೆ ಶತನಮನ’ ಕೃತಿ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ದಾಮೋದರ ಸುವರ್ಣ ಅವರು ಯುವ ಪೀಳಿಗೆಗೆ ಆದರ್ಶ ಹಾಗೂ ಪ್ರೇರಣೆ. ಪ್ರೀತಿ, ವಿಶ್ವಾಸ, ಮಾನವತೆಯ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ದೊಡ್ಡದು. ಸುವರ್ಣರ ಕಠಿಣ ಶ್ರಮ, ಸಾಧನೆಯನ್ನು ಯುವಜನತೆಗೆ ಪರಿಚಯಿಸುವ ಅರ್ಥಪೂರ್ಣ ಕಾರ್ಯಕ್ರಮ ಇದು ಎಂದು ಹೇಳಿದರು.ಶಾಸಕ ಸುನಿಲ್ ಕುಮಾರ್ ಮಾತನಾಡಿ, ದಾಮೋದರ ಸುವರ್ಣರಿಂದ ಹುಟ್ಟಿಕೊಂಡ ಸಮಾಜಮುಖಿ ಕಾರ್ಯ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ವೃತ್ತಿಪರ ಶಿಕ್ಷಣ ಪಡೆಯುವ ಆರ್ಥಿಕ ದುರ್ಬಲ ಕುಟುಂಬದ ಹಿಂದುಳಿದ ಸಮಾಜದ 600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 50 ಲಕ್ಷ ರು.ಗೂ ಅಧಿಕ ಮೊತ್ತದ ವಿದ್ಯಾರ್ಥಿವೇತನ ನೀಡಲಾಯಿತು. ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು.ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕರಾದ ಉಮಾನಾಥ ಎ.ಕೋಟ್ಯಾನ್, ವೇದವ್ಯಾಸ ಕಾಮತ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕುದ್ರೋಳಿ ದೇವಸ್ಥಾನ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ದಾಮೋದರ್ ಆರ್. ಸುವರ್ಣ ಎಜ್ಯುಕೇಶನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಆಶಾ ಸುವರ್ಣ, ದಾಮೋದರ್ ಆರ್. ಸುವರ್ಣ ಜನ್ಮಶತಾಬ್ದಿ ಸಂಭ್ರಮ ಸ್ವಾಗತ ಸಮಿತಿ ಸಂಘಟಕ ವಿನಯಚಂದ್ರ ಸುವರ್ಣ, ಜಗದೀಪ್ ಡಿ. ಸುವರ್ಣ, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಹಿಳಾ ಘಟಕಾಧ್ಯಕ್ಷೆ ಸುಮಲತಾ ಎನ್. ಸುವರ್ಣ ಇದ್ದರು.
ದಾಮೋದರ್ ಆರ್. ಸುವರ್ಣ ಎಜುಕೇಶನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಉದಯಚಂದ್ರ ಡಿ. ಸುವರ್ಣ ಸ್ವಾಗತಿಸಿದರು. ಸೀತಪ್ಪ ಕೂಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು.