ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ, ಅತ್ಯುತ್ತಮ ಓದುಗ ಪುರಸ್ಕಾರ, ಇತಿಹಾಸ ದರ್ಪಣ ಡಿಜಿಟಲ್ ವೇದಿಕೆ ಲೋಕಾರ್ಪಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಳಿಯಾಳಡಿಜಿಟಲ್ ಯುಗದಲ್ಲೂ ಪುಸ್ತಕ ಹಾಗೂ ಗ್ರಂಥಾಲಯಗಳು ಜ್ಞಾನ, ಸಂಶೋಧನೆ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಯ ಪೋಷಕ, ಪ್ರೇರಕವಾಗಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹಿರಿಯ ಪತ್ರಕರ್ತ ರಾಹುಲ್ ಬೆಳಗಲಿ ಹೇಳಿದರು.
ತಾಲೂಕಿನ ಹವಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಭಾರತೀಯ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗಾನಾಥನ್ ಅವರ 134ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ಅತ್ಯುತ್ತಮ ಓದುಗ ಪುರಸ್ಕಾರ ಹಾಗೂ ಇತಿಹಾಸ ದರ್ಪಣ ಡಿಜಿಟಲ್ ವೇದಿಕೆ ಲೋಕಾರ್ಪಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಮಾನವನ ಜೀವನಕ್ಕೆ ಮಹತ್ವಪೂರ್ಣವಾದ ಮನುಷ್ಯತ್ವ, ನೈತಿಕ ಮೌಲ್ಯ, ವ್ಯಕ್ತಿತ್ವ ವಿಕಾಸ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಪುಸ್ತಕಗಳು ಮತ್ತು ಅವುಗಳನ್ನು ಸಂರಕ್ಷಿಸುವ ಗ್ರಂಥಾಲಯಗಳು ಅವಶ್ಯಕ ಎಂದು ತಿಳಿಸಿದರು.
ಧಾರವಾಡದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಇಬ್ರಾಹಿಂ ಸೌದಾಗರ ಮಾತನಾಡಿ, ಇತಿಹಾಸವು ಭವಿಷ್ಯಕ್ಕೆ ದಾರಿ ತೋರಿಸುವ ದಾರಿದೀಪವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಜೀವಿಸಲು ಸಾಮರ್ಥ್ಯ ಬೇಕು. ಅದು ಇತಿಹಾಸದ ಅಧ್ಯಯನ ಮತ್ತು ಜ್ಞಾನ ಸಂಗ್ರಹದಿಂದ ಹಾಗೂ ನಮ್ಮ ಪರಂಪರೆಯನ್ನು ಉಳಿಸಿ. ಬೆಳೆಸಿಕೊಂಡಾಗ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮ ಆಯೋಜಿಸಿದ ಪ್ರಾಧ್ಯಾಪಕ ಪ್ರೊ. ಮಂಜುನಾಥ ಜಿ.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ ಗ್ರಂಥಾಲಯಕ್ಕೊಂದು ಚೌಕಟ್ಟು ನೀಡಿದವರು ಡಾ. ಎಸ್.ಆರ್. ರಂಗನಾಥನ್ ಅದಕ್ಕಾಗಿ ಅವರಿಗೆ ಗ್ರಂಥಾಲಯದ ಪಿತಾಮಹ ಎಂದು ಸ್ಮರಿಸಲಾಗುತ್ತಿದೆ ಎಂದರು. ಗ್ರಂಥಾಲಯಗಳು ಎಂದರೇ ಜ್ಞಾನದ ಸಾಗರವಿದ್ದಂತೆ ಎಂದು ತಿಳಿಸಿ, ಆಯೋಜಿಸಿದ ಕಾರ್ಯಕ್ರಮದ ಸಮಗ್ರ ಮಾಹಿತಿ ನೀಡಿದರು.
ಅತ್ಯುತ್ತಮ ಓದುಗ ಪ್ರಶಸ್ತಿ:ಕಾಲೇಜಿನ ಪ್ರತಿಭಾವಂತ ಸಾಧಕರಾದ ರೂಪಾ ಖುರಜೀಕರ, ಪ್ರಜ್ವಲ ದೇಮಣ್ಣ ಬಾರ್ಕಿ, ಸಂಜನಾ ಮಡಿವಾಳ, ಮಹಮದ್ ಬಸರಿಕಟ್ಟಿ, ದೇವಕಿ ಭಟ್, ಪ್ರಜ್ವಲ ಪ್ರಕಾಶ ಬಾರ್ಕಿ, ಸರಿತಾ ಪಾಟೀಲ, ಮಹಮದ್ ಬಂಕಾಪುರ, ಕಿರಣ ದುಮಾಳೆಯವರ ಮಾತೋಶ್ರೀ ಜಯಶ್ರೀ, ಮೋಹನ ಅಣ್ಣಪ್ಪಾ ಠೋಸುರ ಅವರನ್ನು ಅತ್ಯುತ್ತಮ ಓದುಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸಂಗೀತಾ ರಾ ಕಟ್ಟಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರ ಹಾಗೂ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ವಿಭಾಗದವರು ಕಾರ್ಯಕ್ರಮ ಆಯೋಜಿಸಿದ್ದರು.ಇತಿಹಾಸ ವಿಭಾಗದ ಮುಖ್ಯಸ್ಥ ವಿಠ್ಠಲ ಕಿತ್ತೂರ, ಐಕ್ಯೂಎಸಿ ವಿಭಾಗದ ಡಾ. ರಂಜನಾ ಬಂಡಾರಿ ಹಾಗೂ ಸಂಚಾಲಕ ಡಾ. ಧನರಾಜ ಕೆಂದೂರ ಉಪಸ್ಥಿತರಿದ್ದರು. ಅಪ್ಪು ಭಜಂತ್ರಿ ಸಂಗಡಿಗರು ಭಕ್ತಿಗೀತೆ ಸಾದರಪಡಿಸಿದರು. ಫರೀದಾ ಕಿವ್ಡೆಬೈಲ್ ಹಾಗೂ ಪ್ರಜ್ವಲ ಸಾಧಕ ವಿದ್ಯಾರ್ಥಿಗಳ ಪರಿಚಯ ಮಾಡಿಸಿದರು. ರುಷ್ದಾಐಮನ್ ಎಮ್.ಟಿ. ಕಾರ್ಯಕ್ರಮ ನಿರ್ವಹಿಸಿದರು.