ಮನುಷ್ಯನಿಗೂ ಪುಸ್ತಕಕ್ಕೂ ಅವಿನಾಭಾವ ಸಂಬಂಧವಿದೆ. ಪುಸ್ತಕ ಮನುಷ್ಯನ ಸಂಸ್ಕಾರವನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿದೆ. ಪುಸ್ತಕ ಓದುವ ಗುಣ ಇದ್ದರೆ ಮಸ್ತಕ ಸರಿ ಇರುತ್ತದೆ ಎಂದು ಜಡೆ ಸಂಸ್ಥಾನ ಮಠ, ಸೊರಬ ಮುರುಘಾಮಠದ ಮ.ನಿ.ಪ್ರ. ಮಹಾಂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮನುಷ್ಯನಿಗೂ ಪುಸ್ತಕಕ್ಕೂ ಅವಿನಾಭಾವ ಸಂಬಂಧವಿದೆ. ಪುಸ್ತಕ ಮನುಷ್ಯನ ಸಂಸ್ಕಾರವನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿದೆ. ಪುಸ್ತಕ ಓದುವ ಗುಣ ಇದ್ದರೆ ಮಸ್ತಕ ಸರಿ ಇರುತ್ತದೆ ಎಂದು ಜಡೆ ಸಂಸ್ಥಾನ ಮಠ, ಸೊರಬ ಮುರುಘಾಮಠದ ಮ.ನಿ.ಪ್ರ. ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆ ಬಸವೇಶ್ವರ ನಗರದ ಉಪನ್ಯಾಸಕ ಉಮೇಶ್ ಭದ್ರಾಪುರ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಪುಸ್ತಕ ಓದುವ ಗುಣ ಬೆಳೆಸುವಲ್ಲಿ ಪೋಷಕರ ಪಾತ್ರ ಮುಖ್ಯ. ಮೊಬೈಲ್ ಬಳಕೆ ಅಪಾಯಕಾರಿಯಾಗಿದ್ದು, ಮೊಬೈಲ್‌ನಿಂದ ದೂರವಿದ್ದು, ಸಾಹಿತ್ಯಾಭಿರುಚಿ ಹಾಗೂ ಪುಸ್ತಕ ಓದುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿತ್ವ ರೂಪಿಸುವ ಶಕ್ತಿ ಸಾಹಿತ್ಯ ಹಾಗೂ ಪುಸ್ತಕಕ್ಕಿದ್ದು, ಪ್ರತಿ ಮನೆಯಲ್ಲಿ ಮಕ್ಕಳು ಸೇರಿದಂತೆ ಪೋಷಕರು ಪುಸ್ತಕ ಓದುವ ಗುಣ ಬೆಳೆಸಿಕೊಳ್ಳಬೇಕಿದೆ. ಪುಸ್ತಕ ವರ್ತಮಾನದ ತಲ್ಲಣ, ಬೇಗುದಿಯನ್ನು ಸಮ ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಪ್ರತಿ ಮನೆಯಲ್ಲೂ ಗ್ರಂಥಾಲಯ ನಿರ್ಮಿಸುವ ಕೆಲಸವಾಗಬೇಕಿದೆ. ಕೇವಲ ಗ್ರಂಥಾಲಯ ತೆರೆದರೆ ಸಾಲದು, ಸಂಭ್ರಮಿಸಿ ಓದುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಮನೆಯಲ್ಲಿ ಗ್ರಂಥಾಲಯ ತೆರೆಯುವಲ್ಲಿ ಸಂಕಲ್ಪ ತೊಡಬೇಕಿದೆ ಎಂದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, ಪ್ರಸ್ತುತ ಯುವ ಸಮೂಹದಲ್ಲಿ ಓದುವ ಹವ್ಯಾಸ ದೂರವಾಗುತ್ತಿದ್ದು, ಪುಸ್ತಕ ಹಾಗೂ ಸಾಹಿತ್ಯಾಭಿರುಚಿ ಮೂಡಿಸಬೇಕಿದೆ. ಒಂದು ಪುಸ್ತಕ ಸಾವಿರ ಸ್ನೇಹಿತರಿದ್ದಂತೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪ್ರತಿ ಮನೆಗಳಲ್ಲಿ ಗ್ರಂಥಾಲಯ ತೆರೆಯುವ ಅನುಷ್ಠಾನ ಆರಂಭಿಸಲಾಗಿದೆ ಎಂದರು.

ಉಪನ್ಯಾಸಕ ಡಾ.ಉಮೇಶ್ ಭದ್ರಾಪುರ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಕೆ. ಮಹೇಶ್, ತಾಲೂಕು ಕಸಾಪ ಅಧ್ಯಕ್ಷ ಎನ್. ಷಣ್ಮುಖಾಚಾರ್, ಸಾಹಿತಿ ಬಿ. ಚಂದ್ರೇಗೌಡ, ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಎಚ್. ಸುರೇಶಪ್ಪ, ಗ್ರಂಥಪಾಲಕ ಟಿ.ಜಿ. ಕೃಷ್ಣಮೂರ್ತಿ, ಹಸೆ ಕಲಾವಿದ ವಿಶ್ವನಾಥ್ ಹೆಜ್ಜೆ, ರುದ್ರಪ್ಪ ಜೋಗಿ, ಕೆ. ಅಕ್ಷತಾ, ಮಹೇಶ್ ಖಾರ್ವಿ, ಜಯಮಾಲ ಅಣ್ಣಾಜಿಗೌಡ ಮೊದಲಾದವರಿದ್ದರು.