ಪುಸ್ತಕಗಳೇ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು

| Published : Jul 03 2025, 11:48 PM IST

ಸಾರಾಂಶ

ವರ್ಷಕ್ಕೆ ಸುಮಾರು 1200 ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಒಂದಷ್ಟು ಪುಸ್ತಕಗಳ ವಿಮರ್ಶೆ ನಡೆದು ಮಾರುಕಟ್ಟೆಯಲ್ಲಿ ಸದ್ದು ಮಾಡಿದರೆ ಬಹುತೇಕ ಪುಸ್ತಕಗಳ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯುವುದೇ ಇಲ್ಲ

ಹಾವೇರಿ: ಒತ್ತಡದ ಬದುಕಿನಲ್ಲಿ ಪುಸ್ತಕ ಓದು ನೆಮ್ಮದಿ ನೀಡುತ್ತದೆ.ಆಂತರಿಕ ವಿಕಸನದಿಂದ ಮೌಲ್ಯಗಳ ತುಂಬಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ನಾವೆಲ್ಲ ಪುಸ್ತಕಗಳನ್ನು ಪ್ರೀತಿಸುವುದನ್ನು ಕಲಿಯಬೇಕು. ಪುಸ್ತಕಗಳೇ ನಮ್ಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಾಹಿತಿ ಕಲಾವಿದರ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರೀತಿ 5 ಆಯ್ದ ಮೂವರು ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ-ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವರ್ಷಕ್ಕೆ ಸುಮಾರು 1200 ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಒಂದಷ್ಟು ಪುಸ್ತಕಗಳ ವಿಮರ್ಶೆ ನಡೆದು ಮಾರುಕಟ್ಟೆಯಲ್ಲಿ ಸದ್ದು ಮಾಡಿದರೆ ಬಹುತೇಕ ಪುಸ್ತಕಗಳ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯುವುದೇ ಇಲ್ಲ.ಇದರಿಂದ ಲೇಖಕರು ಮತ್ತು ಓದುಗರ ಮಧ್ಯೆ ಸಂಪರ್ಕವಾಗುವುದಿಲ್ಲ. ಈ ದೃಷ್ಟಿಯಲ್ಲಿ ಪುಸ್ತಕ ಪ್ರೀತಿ ಕಾರ್ಯಕ್ರಮ ಉತ್ತಮವಾಗಿದ್ದು ಲೇಖಕರು ಓದುಗರು ಮತ್ತು ವಿಮರ್ಶಕರು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕಳಿಸಬಹುದು ಎಂದರು.

ಹಾವೇರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿಭಿನ್ನವಾಗಿದ್ದು, ಮುಂದಿನ ದಿನಗಳಲ್ಲಿ ಇದು ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡು ಅತ್ಯುತ್ತಮ ಚಿಂತನೆ ಸಮಾಜಕ್ಕೆ ನೀಡಲೆಂದು ಆಶೀಸಿದರು.

ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಓದುಗರು ಲೇಖಕರು ಮತ್ತು ವಿಮರ್ಶಕರನ್ನು ಒಂದೆಡೆ ತಂದು ಚರ್ಚಿಸುವುದರಿಂದ ಅನೇಕರಿಗೆ ಬರವಣಿಗೆಯ ಪ್ರೇರಣೆ ನೀಡಿದೆ. ನಮ್ಮ ಇತಿಮಿತಿಗಳ ಆಚೆಗೂ ಒಂದು ಕಡೆ ಸೇರುವುದರಿಂದ ನಮ್ಮ ಆದ್ಯತೆ,ಬಾಧ್ಯತೆ ಮತ್ತು ಸಾಧ್ಯತೆ ಗುರುತಿಸಲು ಸಾಧ್ಯವಾಗುತ್ತದೆ. ಬರಹಗಾರರಿಗೆ ಸಮಾಜದಲ್ಲಿ ನಡೆಯುವ ಘಟನೆಗಳ ಕುರಿತು ಸೂಕ್ಷ್ಮ ಸಂವೇದನೆ ಇದ್ದರೆ ಅದರ ಗಾಯಗಳಿಗೆ ಚಿಕಿತ್ಸೆ ನೀಡುವ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ. ಈ ಬಾರಿ ಬೇರೆ ಜಿಲ್ಲೆಗಳ ಲೇಖಕರ ಪುಸ್ತಕಗಳನ್ನು ವಿಮರ್ಶಿಸುತ್ತಿರುವುದು ವಿಶೇಷವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಭಾವಸಂಗಮ ಸಾಹಿತ್ಯ ವೇದಿಕೆ ಇಂತಹ ಸಾಹಿತ್ಯದ ಚರ್ಚೆ ಹಮ್ಮಿಕೊಂಡು ಉತ್ತಮ ಕಾರ್ಯ ಮಾಡುತ್ತಿದೆ.ಇದರಿಂದ ಉತ್ತಮ ಸಾಹಿತ್ಯ ರಚನೆಯಾಗಿ ಇತರ ಲೇಖಕರಿಗೆ ಪ್ರೇರಣೆಯಾಗುತ್ತದೆ. ಜಿಲ್ಲೆಯ ಎಲ್ಲ ಲೇಖಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ನಂತರ ಸುನಂದ ಕಡಮೆಯವರ ಹೈವೇ- 63 ಪುಸ್ತಕವನ್ನು ಲೇಖಕಿ ತೇಜವತಿ ಎಚ್.ಡಿ. ವಿಮರ್ಶಿಸಿದರು.

ನಂತರ ಜಿಲ್ಲಾಧಿಕಾರಿಗಳು ಮತ್ತು ಕುಲಪತಿ ಅವರನ್ನು ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು. ಮೂರು ಜನ ಲೇಖಕರು ಮತ್ತು ವಿಮರ್ಶಕರನ್ನು ಗೌರವಿಸಲಾಯಿತು. ಇದೇ ವೇಳೆ ಇತ್ತೀಚಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ನೇಮಕ ಹೊಂದಿದ ಪರಿಮಳ ಜೈನ್ ರವರನ್ನು ಸತ್ಕರಿಸಲಾಯಿತು.

ನಂತರ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮತ್ತು ಪರಿಮಳ ಜೈನ್ ಉಪಸ್ಥಿತರಿದ್ದರು. ಉಪನ್ಯಾಸಕ ಈಶ್ವರಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯ ಎಂ.ಕೆ. ನಿರೂಪಿಸಿದರು. ಸಂವಾದ ಕಾರ್ಯಕ್ರಮವನ್ನು ಮಂಜುನಾಥ ಹತ್ತಿ ನಿರೂಪಿಸಿ, ಬೀರಪ್ಪ ಕುರುಬರ ವಂದಿಸಿದರು.

ಸಾಹಿತಿಗಳು ನಮ್ಮ ನೆಲದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ, ಬದುಕಿನ ಮೌಲ್ಯ ದಾಖಲಿಸುತ್ತಾರೆ. ನಮ್ಮ ವಿಶ್ವವಿದ್ಯಾಲಯದಿಂದ ಜಿಲ್ಲೆಯ ಎಲ್ಲ ಸಾಹಿತಿಗಳ ಮಾಹಿತಿ ದಾಖಲಿಸಲು ಬಯಸಿದ್ದೇವೆ. ಪುಸ್ತಕ ಪ್ರೀತಿ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಇಂತಹ ಕಾರ್ಯಕ್ರಮ ರೂಪಿಸಿದ ಸಂಸ್ಥೆಗಳಿಗೆ ಅಭಿನಂದನೆಗಳು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ತಿಳಿಸಿದ್ದಾರೆ.