ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಎಲ್ಲೆಡೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನವಾಗಿ ಆರಂಭಿಸಿರುವ ‘ಕೊಡವ ಪುಸ್ತಕ ಪತ್ತಾಯ’ ಯೋಜನೆಯು ಶ್ಲಾಘನಿಯ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮೆಚ್ಚುಗೆಯ ನುಡಿಗಳನ್ನಾಡಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಎಲ್ಲೆಡೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನವಾಗಿ ಆರಂಭಿಸಿರುವ ‘ಕೊಡವ ಪುಸ್ತಕ ಪತ್ತಾಯ’ ಯೋಜನೆಯು ಶ್ಲಾಘನಿಯ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮೆಚ್ಚುಗೆಯ ನುಡಿಗಳನ್ನಾಡಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆಯಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಮೊದಲಿಗೆ ಸ್ಥಾಪಿಸಿದ ‘ಕೊಡವ ಪುಸ್ತಕ ಪತ್ತಾಯ’ವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಅಕಾಡೆಮಿಯ ಇಂತಹ ಯೋಜನೆಯು ಕೊಡವ ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಸಹಕಾರಿಯಾಗಲಿದೆ ಎಂದರು. ಒಂದು ಭಾಷೆಯಿದ್ದರೆ ಮಾತ್ರ ಸಂಬಂಧಪಟ್ಟ ಜನಾಂಗ ಹಾಗೂ ಸಂಸ್ಕೃತಿ ಉಳಿಯಲು ಸಾಧ್ಯ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಯಾವುದೇ ಅನುಕೂಲತೆಗಳು ಇರಲಿಲ್ಲ. ಇಂತಿದ್ದರೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆಂದರೆ, ಅವನ್ನೆಲ್ಲ ನಾವು ನಮ್ಮ ಮುಂದಿನ ಪೀಳಿಗೆಗೆ ಸಾಂಪ್ರದಾಯಿಕವಾಗಿ ಮುಂದುವರಿಸುವ ಕಾರ್ಯ ಆಗಬೇಕು. ಕೊಡವ ಪುಸ್ತಕ ಪತ್ತಾಯವನ್ನು ಎಲ್ಲಾ ಐನ್‌ಮನೆಗಳಲ್ಲಿ, ಮನೆ ಮನೆಗಳಲ್ಲಿ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದು ಸಂತಸದ ವಿಷಯ. ಎಲ್ಲಾರೂ ಇದಕ್ಕೆ ಸಹಕರಿಸುವಂತಾಗಲಿ ಎಂದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಭಾಷೆಯು ತನ್ನದೇ ಆದ ಕಲೆ, ಜಾನಪದ, ಸಂಸ್ಕೃತಿ, ಸಾಹಿತ್ಯ ಹಾಗೂ ಒಂದು ಜೀವನ ಕ್ರಮವನ್ನು ರೂಪಿಸಿರುವ ಭಾಷೆಯಾಗಿದ್ದು ಇದರ ಬಳಕೆ ವೃದ್ಧಿಯಾಗಬೇಕು ಎಂದರು.
ನಮ್ಮ ಹಿರಿಯರಲ್ಲಿ ಜಾನಪದ ಸಾಹಿತ್ಯದ ಅರಿವಿತ್ತು. ಅದರಿಂದಾಗಿ ಪಟ್ಟೋಲೆ ಪಳಮೆಯಂತಹ ಕೃತಿ ಸೃಷ್ಟಿಯಾಗಲು ಸಾಧ್ಯವಾಗಿದೆ. ಕೊಡವ ಸಾಹಿತ್ಯ ಕ್ಷೇತ್ರವನ್ನು ಅಂದಿನ ಕಾಲಮಾನದಲ್ಲಿ ಉತ್ತುಂಗಕ್ಕೆ ಏರಿಸಿದವರು ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಐಚೆಟ್ಟಿರ ಮಾ. ಮುತ್ತಣ್ಣ, ಬಾಚಮಡ ಡಿ.ಗಣಪತಿ, ಮಂಡಿರ ಜಯ ಅಪ್ಪಣ್ಣ, ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ... ಇಂತಹವರು. ಅವರೆಲ್ಲರ ಸಾಹಿತ್ಯವು ಇಂದಿಗೂ ಜೀವಂತವಾಗಿದೆ. ಇವರೆಲ್ಲರ ಸಾಹಿತ್ಯವನ್ನು ಜೀವಂತವಾಗಿರಿಸಲು ‘ಕೊಡವ ಪುಸ್ತಕ ಪತ್ತಾಯ’ವು ಸಹಕಾರಿಯಾಗಲಿದೆ ಎಂದರು.ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿದರು. ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕುಟ್ಟ ಕೊಡವ ಸಮಾಜ ಹಾಗೂ ಬಾಳುಗೋಡು ಕೊಡವ ಫೆಡರೇಶನ್‌ನಲ್ಲಿ ‘ಕೊಡವ ಪುಸ್ತಕ ಪತ್ತಾಯ’ ಸ್ಥಾಪಿಸುವಂತೆ ಮನವಿ ಮಾಡಿದರು. ಪುಸ್ತಕ ಓದುವ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.ಅಕಾಡೆಮಿ ಅಧ್ಯಕ್ಷರ ಶಾಲಾದಿನಗಳಲ್ಲಿ ಶಿಕ್ಷಕಿಯಾಗಿದ್ದ ಹಿರಿಯರಾದ ಕರ್ನಂಡ ಬೊಳ್ಳಮ್ಮ ನಾಣಯ್ಯ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಆಶೀರ್ವದಿಸಿದರು.ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ತಮ್ಮ ಮಾತಿನಲ್ಲಿ, ಅಕಾಡೆಮಿಯ ವತಿಯಿಂದ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದಕ್ಕೆ ತಮ್ಮ ಸಹಕಾರ ನೀಡಿ, ಸೋಮವಾಪೇಟೆ ವಿಭಾಗದಲ್ಲಿ ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿಪರ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ ಎಂದರು. ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಪುಸ್ತಕ ಪತ್ತಾಯಕ್ಕೆ ಬೆಂಬಲ ಸೂಚಿಸಿದರು.ಕೊಡವ ಭಾಷಿಕ ಸಮಾಜದ ವತಿಯಿಂದ ಎಲ್ಲಾ ಸಮಾಜಗಳ ಪರವಾಗಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಪಡಿಞರಂಡ ಜಿ. ಅಯ್ಯಪ್ಪ, ಕೊಡವ ಭಾಷಿಕ ಸಮುದಾಯಗಳ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿದರು. ವಿರಾಜಪೇಟೆಯ ಪಂಜರಪೇಟೆ ಕೊಡವ ಕೇರಿ ಅಧ್ಯಕ್ಷ ವಾಂಚಿರ ಟಿ.ನಾಣಯ್ಯ, ಪರದಂಡ ವಿಠಲ ಹಾಗೂ ಪದಾಧಿಕಾರಿಗಳು, ಕೆಂಬಟ್ಟಿ ಸಮಾಜದ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ, ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಕಾರ್ಯಧ್ಯಕ್ಷ ಬಾಳೆಕುಟ್ಟಡ ಉದಯ ಮಾದಪ್ಪ ಮತ್ತಿತರರು ಆಗಮಿಸಿ ಕೊಡವ ಪುಸ್ತಕ ಪತ್ತಾಯಕ್ಕೆ ಬೆಂಬಲ ಸೂಚಿಸಿದರು.