ಸಾರಾಂಶ
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಾ ವ್ಯಕ್ತಿಗಳಲ್ಲೂ ಒಬ್ಬ ಕವಿ ಅಡಗಿರುತ್ತಾನೆ, ಆದರೆ ಎಲ್ಲರೂ ಶ್ರೇಷ್ಠ ಕವಿಗಳಾಗಳು ಸಾಧ್ಯವಿಲ್ಲ. ಪ್ರಶ್ನೆ ಮಾಡದವನು ಕವಿಯಾಗಲು ಸಾಧ್ಯವಿಲ್ಲ. ಸಂತೃಪ್ತಿ ಆಗಿರುವವನ ಮನದಲ್ಲಿ ಕಾವ್ಯ ಹುಟ್ಟಲು ಸಾಧ್ಯವಿಲ್ಲ. ಕವಿಯಾಗಲು ಪ್ರಜ್ಞೆ ಮತ್ತು ಪ್ರತಿಭೆ ಮುಖ್ಯ ಎಂದು ಕವಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ದಸರಾ ಕವಿಗೋಷ್ಠಿ ಪಂಚ ಕಾವ್ಯೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಎಂಬುದು ಪುರಾತನವಾದದ್ದು. ಕಾವ್ಯದ ಜೊತೆಗೆ ಮನುಷ್ಯ ಐತಿಹಾಸಿಕವಾಗಿ, ಪೌರಾಣಿಕವಾಗಿ ಹಾಗೂ ಸಮಾಜಕವಾಗಿ ನಡೆದು, ಕಾವ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾನೆ ಎಂದರು.ನಾಡಹಬ್ಬ ದಸರಾ ಮಹೋತ್ಸವವು ರಾಜ್ಯಾದ್ಯಂತ ಬಹುಮುಖಿಯಾಗಿ ಹರಡಿಕೊಂಡಿದೆ. ಅದರ ಒಂದು ಭಾಗವಾಗಿ ಕವಿಗೋಷ್ಠಿ ನಡೆಯುತ್ತಿದೆ. ಕವಿಗೋಷ್ಠಿಯು ನೆರೆದಿರುವ ನೂರಾರು ಕವಿಗಳಿಂದ ಕಾವ್ಯ ಸಂಭ್ರಮ, ಕಾವ್ಯತೀತ ಹಾಗೂ ಸಂಸ್ಕೃತಿಕ ಸಂಭ್ರಮದಂತೆ ಭಾಸವಾಗುತ್ತಿದೆ. ಯುವಕರು ಕವಿಗೋಷ್ಠಿಗಳಿಂದ ದೂರ ಹೋಗುತ್ತಿದ್ದಾರೆ, ಕವಿಗೋಷ್ಠಿಗಳಲ್ಲಿ ನಿಜವಾದ ಕವಿಗಳ ಭಾಗವಹಿಸುವಿಕೆ ಕಡಿಮೆ ಎಂಬ ಸಂದರ್ಭದಲ್ಲಿ ದಸರಾ ಕವಿಗೋಷ್ಠಿಯು ಮಾದರಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಾವ್ಯ ಎನ್ನುವುದು ಒಂದು ಗಂಭೀರ ಕಲೆ. ಅದರ ಆಸಕ್ತಿ ಆಸ್ಪದಕ್ಕೆ ವಿಶಿಷ್ಟವಾದ ಮನಸ್ಥಿತಿ ಅವಶ್ಯಕತೆ ಇದೆ. ಅಂತಹ ವಿಶಿಷ್ಟ ಮನಸ್ಥಿಯುಳ್ಳವರು ಕಾವ್ಯಗಾರನಾಗಲು ಸಾಧ್ಯ. ಕಾವ್ಯವು ಪ್ರಜ್ಞೆ, ಪ್ರಶ್ನೆ, ಪ್ರತಿಭಟನೆ, ಪ್ರಯೋಗ ಹಾಗೂ ಪ್ರಮಾಣ ಎಂಬ ಅಂಶಗಳನ್ನು ಒಳಗೊಂಡಿದ್ದು, ಇವು ಕಾವ್ಯದ ಆಕಾರವನ್ನು ಸೃಷ್ಟಿಸುತ್ತವೆ. ಅದನ್ನು ಅಳವಡಿಸಿಕೊಂಡು ಕವಿತೆಗಳನ್ನು ಬರೆಯಬೇಕು ಎಂದರು.ಕವಿಯು ದೂರದರ್ಶಕ ಉಳ್ಳವನು ಹಾಗೂ ದಿವ್ಯ ದರ್ಶಿಯೂ ಹೌದು. ಇಂದು ಸಂಭವಿಸುವ ಘಟನೆಗಳು ಹಾಗೂ ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ದೂರ ದೃಷ್ಟಿ ಇಟ್ಟು ಬರೆಯುವವನಾಗಿರುತ್ತಾನೆ. ಇದಕ್ಕೆ ಸಾಕ್ಷಿಯಾಗಿ ನಮ್ಮ ಹಿಂದಿನ ತಲೆಮಾರಿನ ಬಸವಣ್ಣ ಸೇರಿದಂತೆ ಮಹಾನ್ ಕವಿಗಳು ಬರೆದಿರುವ ಕವಿತೆ, ಕಾವ್ಯಗಳ ಪ್ರಸ್ತುತತೆಯನ್ನೇ ಕಾಣಬಹುದು ಎಂದರು.
ಕಾವ್ಯ ಎಂಬುದು ಒಬ್ಬ ವ್ಯಕ್ತಿಯಲ್ಲಿ ಸ್ವಾಭಿಮಾನ ಸೃಷ್ಟಿಸಿ ಸ್ವತಂತ್ರ್ಯ ನೀಡುತ್ತದೆ. ಒಬ್ಬ ಶ್ರೇಷ್ಠ ಕವಿಯು ಕಾಲವನ್ನೇ ಮೀರಿರುವವನಾಗಿರುತ್ತಾನೆ. ಇಂದು ಕವಿತೆ ಎಂಬುದು ಬಂಡಾಯ, ಸೃಷ್ಟಿಗಳನ್ನು ಮೀರಿ ಸಾಮಾಜಿಕ ಜಾಲತಾಣಕ್ಕೂ ಹರಡಿದ್ದು, ಅದರಲ್ಲಿ ಯಾವ ಕಾವ್ಯ ಓದುಗನಿಗೆ ಹೊಸದು ಎಸಿಸುತ್ತದೆಯೋ ಅದು ಕಾವ್ಯವಾಗಿ ಚಿರಕಾಲ ಉಳಿಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಕನಸು ಮತ್ತು ಕವಿತೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಮಗು ಹುಟ್ಟಿದ ಮೇಲೆ ಹೇಳುವ ಅಮ್ಮ ಎಂಬ ಪದವೇ ಮೊದಲ ಕಾವ್ಯ. ಹಾಗೆಂದ ಮಾತ್ರಕ್ಕೆ ಎಲ್ಲರೂ ಕವಿಗಳಾಗಳು ಸಾಧ್ಯವಿಲ್ಲ. ಕಾವ್ಯದ ಮೂಲವನ್ನು ಆಳವಾಗಿ ಅರಿಯಬೇಕು ಆಗ ಮಾತ್ರವೇ ಕವಿತನ ಉಳಿಯುತ್ತದೆ ಎಂದು ಅವರು ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಯು ಕವಿ, ಬರಹಗಾರ ಎನಿಸಿಕೊಳ್ಳುವುದು ದೊಡ್ಡ ಬಿರುದಾಗಿದ್ದು, ಅದಕ್ಕಾಗಿ ಹೆಚ್ಚು ಪರಿಶ್ರಮ ಹಾಕಬೇಕು. ಜನರು ಕವಿಯಿಂದ ಪ್ರಭಾವಿತರಾಗಬೇಕಾದರೆ ಮೊದಲು ಆ ಕವಿಯು ಜನರಿಂದ ಪ್ರಭಾವಿತನಾಗಿ ಜನರ ಮದ್ಯೆಯೇ ಇದ್ದು, ಅವರ ದುಃಖ-ದುಮ್ಮಾನಗಳನ್ನು ಅರಿತು ಬರೆಯಬೇಕು ಎಂದರು.ಕವಿಗಳಾದವರು ತನ್ನ ನೋವು ಹಾಗೂ ಆಲೋಚನೆಗಳಿಗಿಂತ ಪರರ ನೋವು ಹಾಗೂ ಆಲೋಚನೆಗಳ ಪ್ರತಿರೂಪವಾಗಿ ನಿಂತು ಬರೆಯಬೇಕು. ಆತನಿಗೆ ಮೊದಲು ಲೋಕದ ಪರಿಜ್ಞಾನವಿದ್ದು ಹಾಗೂ ಹಾಗು-ಹೋಗುಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರವೇ ಒಬ್ಬ ಶ್ರೇಷ್ಠ ಕವಿಯು ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಲು ಸಾಧ್ಯ ಎಂದರು.
ಹಲವಾರು ಶ್ರೇಷ್ಠ ಕವಿಗಳ ಮಾತುಗಳನ್ನು ಇಂದು ಎಷ್ಟೋ ಪತ್ರಿಕೆಗಳ ತಲೆಬರಹವಾಗಿ ಕಾಣಬಹುದು. ಅವರೆಲ್ಲರೂ ಜನರೊಂದಿಗೆ ಜನರಿಗಾಗಿಯೇ ಬದುಕಿದಂತ ಮಹಾನ್ ವ್ಯಕ್ತಿಗಳು. ಹಾಗಾಗಿ ಅವರ ಕವಿತೆಗಳು ಬರವಣಿಗೆಗಳು ಇಂದಿಗೂ ಪ್ರಸ್ತುತ. ಅವರಂತೆಯೇ ನಾವು ಆಗಬೇಕೆಂದರೆ ಅವರ ಆದರ್ಶ ಪಾಲಿಸಬೇಕು ಎಂದು ಸಲಹೆ ನೀಡಿದರು.ದಸರಾ ಕವಿಗೋಷ್ಠಿ ಎಂಬುದು ಯುವ ಕವಿಗಳಿಗೆ ಒಂದು ದೊಡ್ಡ ವೇದಿಕೆಯಾಗಿದ್ದು, ಕೆಲವರಿಗೆ ಈ ಬಾರಿ ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ಅವಕಾಶವೇ ಸಿಗುವುದಿಲ್ಲ ಎಂದರ್ಥವಲ್ಲ. ಈ ಬಾರಿ ಅವಕಾಶ ಸಿಗದಿದ್ದಂತಹ ಕವಿಗಳು ಮುಂದಿನ ಬಾರಿಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಮುಂದೆ ಸಿಗುವ ಬೇರೆ ಬೇರೆ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಮತ್ತು ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ದಸರಾ ಮಹೋತ್ಸವದಲ್ಲಿ 44ನೇ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿ ಆಚರಿಸುತ್ತಿರುವುದು ಕನ್ನಡಾಭಿಮಾನಿಗಳಿಗೆ ಸಂತಸದ ವಿಷಯ. ಈ ಕವಿಗೋಷ್ಠಿಯನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿಯೇ ತಮ್ಮ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಇಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸಿರುವುದು ಕವಿಗೋಷ್ಠಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ವಿವಿಧ ದೇಶಗಳಿಂದ ವಿವಿಧ ಭಾಷೆಯ ಜನರು ಆಗಮಿಸುತ್ತಾರೆ. ಅದರಲ್ಲಿ ಒಂದು ಭಾಗವಾಗಿರುವ ಈ ಕವಿಗೋಷ್ಠಿಯಿಂದ ನೂರಾರು ಕವಿಗಳ ಪ್ರತಿಭೆ ಅನಾವರಣಗೊಳ್ಳಲಿದ್ದು, ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳಲು ಕವಿಗಳಿಗೆ ಇದೊಂದು ದೊಡ್ಡ ವೇದಿಕೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಪ್ರತಿಯೊಬ್ಬರು ಪೂರ್ಣ ಮನಸ್ಥಿತಿಯಿಂದ ಪಾಲ್ಗೊಳ್ಳಬೇಕು ಎಂದರು.ಈ ಬಾರಿ ವಿಶೇಷವಾಗಿ ಪಂಚ ಕಾವ್ಯೋತ್ಸವದ ಪರಿಕಲ್ಪನೆ:
ಈ ಬಾರಿ ದಸರಾ ಕವಿಗೋಷ್ಠಿಯಲ್ಲಿ ಪಂಚ ಕಾವ್ಯೋತ್ಸವವನ್ನು 5 ದಿನಗಳ ಕಾಲ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದು, ಸಮರಸ ಕವಿಗೋಷ್ಠಿ, ಸಮಾನತ ಕವಿಗೋಷ್ಠಿ, ಸಂತಸ ಕವಿಗೋಷ್ಠಿ, ಸಮಷ್ಠಿ ಕವಿಗೋಷ್ಠಿ ಹಾಗೂ ಸಮೃದ್ಧ ಕವಿಗೋಷ್ಠಿ ಎಂಬ ಪರಿಕಲ್ಪನೆಯ ಸ್ವರೂಪಗಳು ಯುವ ಕವಿಗಳು ಹಾಗೂ ಹಿರಿಯ ಕವಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದರು.ದಸರಾ ಕವಿಗೋಷ್ಠಿ ಉಪ ಸಮಿತಿ ಉಪ ವಿಶೇಷಾಧಿಕಾರಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ. ಕೃಷ್ಣ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ದಸರಾ ಕವಿಗೋಷ್ಠಿಯ ಅಧಿಕಾರೇತರ ಸಮಿತಿ ಅಧ್ಯಕ್ಷೆ ಹೇಮಲತಾ, ಮೈಸೂರು ವಿವಿ ಪ್ರಸಾರಂಗ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು, ಚಿಗುರು ಅತಿಥಿ ಪ್ರಣತಿ ಆರ್. ಗಡಾದ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಮತ್ತು ಅಧಿಕಾರಿಗಳು ಇದ್ದರು.
ಬದುಕು ಕಲಿಸುವುದು ಶಿಕ್ಷಣದ ಉದ್ದೇಶವಾಗಬೇಕು. ನಮ್ಮ ಶಿಕ್ಷಣದ ಬೋಧನ ಪದ್ಧತಿಯಲ್ಲಿ ಏಕತೆ ಇಲ್ಲ, ಶಾಲೆಗಳಲ್ಲಿ ಪ್ರತಿ ತಿಂಗಳು ಶಾಲಾ ಪತ್ರಿಕೆ ಹೊರ ತರಬೇಕು. ಮಕ್ಕಳು ಬರೆಯುವುದು ಮಕ್ಕಳ ಸಾಹಿತ್ಯವಾಗಬೇಕು. ಹಿರಿಯರು ಪರಕಾಯ ಪ್ರವೇಶಿಸಿ ಬರೆಯುವುದು ಮಕ್ಕಳ ಸಾಹಿತ್ಯವೇ? ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದು, ಬರೆಯುವಂತೆ ಮಾಡುವುದು ಯಾರ ಕೆಲಸ?- ಪ್ರಣತಿ ಆರ್. ಗಡಾದ, ಚಿಗುರು ಕವಿಗೋಷ್ಠಿ ಅತಿಥಿ