ಇಲ್ಲಿನ ಕೋಡಿ ಕಡಲ ತೀರದಲ್ಲಿ ಶನಿವಾರ ಮುಂಜಾನೆ ಭಾರೀ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ ಬಂದು ಬಿದ್ದಿದ್ದು, ಮೀನು ಪ್ರಿಯರು ಮೀನಿನ ಹಬ್ಬ ಆಚರಿಸಿದರು.

ಕುಂದಾಪುರ : ಇಲ್ಲಿನ ಕೋಡಿ ಕಡಲ ತೀರದಲ್ಲಿ ಶನಿವಾರ ಮುಂಜಾನೆ ಭಾರೀ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ ಬಂದು ಬಿದ್ದಿದ್ದು, ಮೀನು ಪ್ರಿಯರು ಮೀನಿನ ಹಬ್ಬ ಆಚರಿಸಿದರು. ಕೋಡಿ ಕಡಲ ತೀರದಲ್ಲಿ ಸುಮಾರು ನೂರು ಮೀಟರ್ ಉದ್ದಕ್ಕೂ ರಾಶಿರಾಶಿ ಬೂತಾಯಿ ಮೀನುಗಳು ದಡದಲ್ಲಿ ಬಿದ್ದಿದ್ದವು. ಮಾಹಿತಿ ಪಡೆದ ಸ್ಥಳೀಯರು ಧಾವಿಸಿ ಬಂದು ಮೀನುಗಳನ್ನು ಹೆಕ್ಕಿಕೊಂಡು ಹೋಗಲು ಮುಗಿಬಿದ್ದರು, ಪ್ಲಾಸ್ಟೀಕ್, ಚೀಲ, ಬುಟ್ಟಿ ಇತ್ಯಾದಿಗಳಲ್ಲಿ ಮೀನುಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು.

ಇತ್ತೀಚಿನ ಜಿಲ್ಲೆಯ ಮರವಂತೆ, ಹೆಜಮಾಡಿ, ಮಲ್ಪೆಗಳಲ್ಲಿಯೂ ಇದೇ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು. ಸಮುದ್ರದ ತಳಭಾಗದಲ್ಲಿ ಆಮ್ಲಜನಕದ ಕೊರತೆ ಅಥವಾ ನೀರಿನ ಉಷ್ಣಾಂಶದಲ್ಲಿ ದಿಢೀರ್ ಬದಲಾವಣೆಯಾಗುವುದರಿಂದ ಮೀನುಗಳ ಹಿಂಡು ದಿಕ್ಕು ತಪ್ಪಿ ದಡದತ್ತ ಬರುತ್ತವೆ ಎಂದು ಅನುಭವಸ್ಥ ಮೀನುಗಾರರು ಹೇಳಿದ್ದಾರೆ.