ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮೈಸೂರು ಮುಡಾ ನಿವೇಶನ ಹಗರಣ ಮತ್ತು ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿಗೆ ಸಹೋದರನಿಂದ ಉಡುಗೊರೆಯಾಗಿ ಬಂದಿದ್ದ ಜಮೀನು ಅವರ ಗಮನಕ್ಕೆ ಬಾರದೆ ಮುಡಾ ಸ್ವಾಧೀನ ಪಡಿಸಿಕೊಂಡಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 3.16 ಎಕರೆ ಜಮೀನನ್ನು ಮುಡಾ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿತ್ತು ಎನ್ನುವುದು ಅವರ ವಾದ. ಆದರೆ ಮುಡಾದಿಂದ ನಿವೇಶನ ಯೋಜನೆ ರೂಪಿಸುವಾಗ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇಷ್ಟಾದರೂ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರೊಬ್ಬ ಪ್ರಭಾವಿ ರಾಜಕಾರಣಿ, ಮೇಲಾಗಿ ವಕೀಲರೂ ಆಗಿರುವ ಸಿದ್ದರಾಮಯ್ಯ ಅವರೇ ಅಕ್ರಮ ನಡೆದಿದೆ ಎಂದು ಹೇಳಿದರೆ ನಂಬುವುದು ಹೇಗೆ? ಎಂದು ಪ್ರಶ್ನಿಸಿದರು.
ನಿಯಮದ ಪ್ರಕಾರ ಸಿದ್ದರಾಮಯ್ಯ ಪತ್ನಿಗೆ 2 ನಿವೇಶನ ಕೊಡಬೇಕು. ಆದರೆ 14 ನಿವೇಶನ ಕೊಡಲಾಗಿದೆ. ಪ್ರಕರಣದ ತನಿಖೆಯನ್ನು ಐಎಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ಆದರೆ ಮುಖ್ಯಮಂತ್ರಿ ಕೈಕೆಳಗಿನ ಅಧಿಕಾರಿಗಳು ಏನು ವರದಿ ಕೊಡಬಹುದು ಎನ್ನುವುದನ್ನು ಯಾರು ಬೇಕಾದರೂ ನಿರೀಕ್ಷೆ ಮಾಡಬಹುದು. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಕ್ಲೀನ್ ಚಿಟ್ ಸಿಗುವ ತನಕ ಮುಖ್ಯಮಂತ್ರಿ ಅಧಿಕಾರ ತ್ಯಜಿಸಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಇಷ್ಟು ಬೃಹತ್ ಮೊತ್ತವನ್ನು ವರ್ಗಾ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಬೇಕು. ಆರ್ಥಿಕ ಇಲಾಖೆ ಸಿದ್ದರಾಮಯ್ಯ ಕೈಯಲ್ಲಿ ಇದೆ. ಹಾಗಾಗಿ ಅವರ ಅರಿವೆ ಬಾರದೆ ಈ ವರ್ಗಾವಣೆ ನಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ ರಾಜ್ಯ ಸರ್ಕಾರದ ಹಗರಣಗಳ ವಿರುದ್ಧಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿ ಸರ್ಕಾರ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬಂಧಿಸಿದೆ. ಅಲ್ಲದೆ ಪ್ರತಿಭಟನೆಗೆ ಅವಕಾಶ ನೀಡದೆ ತಡೆಯೊಡ್ಡುತ್ತಿದೆ, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು. ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ಸಾಲು ಸಾಲು ಹಗರಣಗಳಲ್ಲಿ ತೊಡಗಿದೆ. ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಸರ್ಕಾರದಿಂದ ಯಾವುದೇ ಅಡ್ಡಿ, ಆತಂಕ ಎದುರಾದರು ಜನರಿಗೆ ನ್ಯಾಯ ದೊರಕಿಸಲು ಬಿಜೆಪಿ ನಿರಂತರ ಹೋರಾಟವನ್ನು ನಡೆಸಲಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಚಲನ್ ಕುಮಾರ್ ಹಾಗೂ ವಕ್ತಾರ ಬಿ.ಕೆ.ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.