ನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ಗಡಿ ಚೌಡೇಶ್ವರಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲದಾಗಿದ್ದು ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡುತ್ತಿರುವ ಮನವಿಗೆ ಯಾವುದೇ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ರಾಜಕಾರಣಿಗಳ ಇಚ್ಛಾಶಕ್ತಿ ಪ್ರದರ್ಶಿಸಿದರೆ ಸಂಪರ್ಕ ಒದಗಿಸುವುದು ಸಮಸ್ಯೆಯೆ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಬೇಕಿದೆ. ಬೆಳಕಿನ ವ್ಯವಸ್ಥೆಗಾಗಿ ಸೋಲಾರ್‌ ಅಳವಡಿಸಲಾಗಿದೆ. ಆದರೆ, ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಸೋಲಾರ್‌ ಕೆಲಸ ಮಾಡುವುದು ಕಷ್ಟಕರ ಸೋಲಾರ್ ಕೈಕೊಟ್ಟರೆ ಕತ್ತಲೆಯಲ್ಲೆ ಭಕ್ತರು ಕಾಲ ಕಳೆಯ ಬೇಕಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಹೆದ್ದಾರಿ ಪ್ರಯಾಣಿಕರ ಆರಾಧ್ಯ ದೈವ ಗಡಿಚೌಡೇಶ್ವರಿ ದೇವಸ್ಥಾನ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನ ಕೆಂಪುಹೊಳೆ ದಂಡೆಯಲ್ಲಿರುವ ಗಡಿ ಚೌಡೇಶ್ವರಿ ದೇವಸ್ಥಾನ ನಂಬಿದವರ ಪಾಲಿಗೆ ವರ ನೀಡುವ ದೇವಿ ಎಂಬ ಪ್ರತೀತಿ ಇದ್ದು, ಇಲ್ಲಿನ ಸನ್ನಿಧಿಗೆ ಸಕಲೇಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಾರೆ. ಅಲ್ಲದೆ ಹೆದ್ದಾರಿಯಲ್ಲಿ ಸಾಗುವ ಸಾಕಷ್ಟು ಪ್ರಯಾಣಿಕರು ದೇವರಿಗೆ ನಮಿಸಿಯೆ ಮುಂದೆ ಸಾಗುತ್ತಾರೆ. ಇದರಲ್ಲೂ ಲಾರಿ ಚಾಲಕರು ಸುಸೂತ್ರವಾಗಿ ಘಾಟಿ ದಾಟಲು ದೇವರಿಗೆ ಮೊರೆ ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೆ ತಮ್ಮ ಕೆಲಸಕ್ಕಾಗಿ ಸಾಕಷ್ಟು ಭಕ್ತರು ಹರಕೆಯ ಮೊರೆ ಹೋಗುವುದರಿಂದ ದಿನಂಪ್ರತಿ ಇಲ್ಲಿ ಹರಕೆ ಸಲ್ಲಿಕೆ ಮಾಡವುದರಿಂದ ದೇವಸ್ಥಾನದ ಮೂಲ ಸನ್ನಿಧಿ ನಿತ್ಯ ಭಕ್ತರಿಂದ ತುಂಬಿ ತುಳುಕುವುದು ಸಾಮಾನ್ಯ. ಸಾಕಷ್ಟು ಭಕ್ತರ ನಂಬಿಕೆಯ ಪಾಲಿನ ಚೌಡೇಶ್ವರಿ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಅಧೀನಕ್ಕೆ ಒಳಪಟ್ಟಿದ್ದು, ವಾರ್ಷಿಕ ಸುಮಾರು ೫೦ ಲಕ್ಷಕೂ ಅಧಿಕ ಹುಂಡಿ ಕಾಣಿಕೆ ಸಂಗ್ರಹವಾಗುವ ದೇವಾಲಯ ಮಾತ್ರ ಮೂಲಭೂತ ಸೌಕರ್ಯ ಸಮಸ್ಯೆ ಎದುರಿಸುತ್ತಿದೆ.

ವಿದ್ಯುತ್ ಇಲ್ಲ:

ನಿತ್ಯ ಸಾವಿರಾರು ಭಕ್ತಾಧಿಗಳು ಭೇಟಿ ನೀಡುವ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲದಾಗಿದ್ದು ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡುತ್ತಿರುವ ಮನವಿಗೆ ಯಾವುದೇ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ರಾಜಕಾರಣಿಗಳ ಇಚ್ಛಾಶಕ್ತಿ ಪ್ರದರ್ಶಿಸಿದರೆ ಸಂಪರ್ಕ ಒದಗಿಸುವುದು ಸಮಸ್ಯೆಯೆ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಬೇಕಿದೆ. ಬೆಳಕಿನ ವ್ಯವಸ್ಥೆಗಾಗಿ ಸೋಲಾರ್‌ ಅಳವಡಿಸಲಾಗಿದೆ. ಆದರೆ, ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಸೋಲಾರ್‌ ಕೆಲಸ ಮಾಡುವುದು ಕಷ್ಟಕರ ಸೋಲಾರ್ ಕೈಕೊಟ್ಟರೆ ಕತ್ತಲೆಯಲ್ಲೆ ಭಕ್ತರು ಕಾಲ ಕಳೆಯ ಬೇಕಿದೆ. ಕುಡಿಯುವ ನೀರಿಲ್ಲ:

ಹೆಚ್ಚಿನ ವರಮಾನ ಹೊಂದಿರುವ ದೇವಸ್ಥಾನದಲ್ಲಿ ಶುದ್ಧಕುಡಿಯುವ ನೀರಿನ ಸೌಲಭ್ಯವು ಇಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸದ್ಯ ನೈಸರ್ಗಿಕವಾಗಿ ಗುಡ್ಡದಿಂದ ಬರುವ ನೀರೆ ದೇವಸ್ಥಾನದ ಮೂಲ ನೀರಿನ ಆಧಾರ. ಬೇಸಿಗೆಯಲ್ಲಿ ನೀರಿನ ಸೆಲೆ ಬರಿದಾದರೆ ಭಕ್ತಾದಿಗಳ ನೀರಿಗಾಗಿ ನದಿಗೆ ತೆರಳಬೇಕಿದೆ. ಇನ್ನೂ ಬಾಯಾರಿಕೆ ತಣಿಸಲು ನೀರಿನ ಬಾಟಲ್‌ಗಳ ಮೊರೆ ಹೋಗುವುದು ಅನಿವಾರ್ಯ. ಹಲವು ವರ್ಷಗಳ ಹಿಂದೆ ದೇವಸ್ಥಾನದ ಮೂಲ ಸನ್ನಿಧಿಯಲ್ಲಿ ತೆರೆದ ಬಾವಿ ನಿರ್ಮಿಸಿ ಕೈಬಿಟ್ಟಿರುವುದನ್ನು ಹೊರತುಪಡಿಸಿ ಸರ್ಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಇದುವರಗೆ ಯಾವುದೆ ಪ್ರಯತ್ನಗಳು ನಡೆದಿಲ್ಲ. ಯಾತ್ರಿನಿವಾಸ: ವರ್ಷಪೂರ್ಣ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳು ನಡೆಯುವುದು ಹಾಗೂ ಹರಕೆ ತೀರುವಳಿಯಂತಹ ಸಂಭ್ರಮಗಳು ನಡೆಯುವುದರಿಂದ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆ ಇಲ್ಲದಾಗಿದೆ. ಇದನ್ನು ಗಮನಿಸಿದ ದೇವಸ್ಥಾನ ಆಡಳಿತ ಮಂಡಳಿ ಹಲವು ವರ್ಷಗಳಿಂದ ದೇವಾಲಯದ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡುವಂತೆ ಮನವಿ ಮಾಡುತ್ತಾ ಬಂದಿದೆ. ಆದರೆ, ಈ ಕೂಗು ಸರ್ಕಾರಕ್ಕೆ ಕೇಳದಾಗಿದೆ. ಯಾತ್ರಿ ನಿವಾಸ ನಿರ್ಮಿಸಿದರೆ ಅತ್ಯಂತ ರಮಣೀಯ ನೈಸರ್ಗಿಕ ಪ್ರದೇಶದಲ್ಲಿರುವ ದೇವಸ್ಥಾನ ಪ್ರವಾಸಿ ಕೇಂದ್ರವಾಗಿಯೂ ಗಮನಸೆಳೆಯಲಿದೆ. ಮಧ್ಯಘಾಟಿಯಲ್ಲಿರುವ ದೇವಸ್ಥಾನದ ಸಮೀಪ ಯಾತ್ರಿ ನಿವಾಸ ನಿರ್ಮಿಸಿದರೆ ಆಪತ್ತಿಗೆ ಸಿಲುಕಿದ ಪ್ರಯಾಣಿಕರಿಗೂ ಆಶ್ರಯವಾಗಲಿದೆ ಎಂಬುದು ಭಕ್ತಾದಿಗಳ ಮಾತು. ತಡೆಗೋಡೆ

ಇನ್ನೂ ಮಳೆಗಾಲದ ವೇಳೆ ಮೂಲ ಸನ್ನಿಧಿ ಕೆಂಪುಹೊಳೆ ನೀರಿನಿಂದ ಮುಳುಗಡೆಯಾಗುತ್ತಿದ್ದು ಈ ವೇಳೆ ಹರಕೆ ತೀರಿಸಲು ಭಕ್ತರಿಗೆ ಸಮಸ್ಯೆಯಾಗಿದೆ ಅಲ್ಲದೆ ಮುಖ್ಯ ದೇವಾಲಯವನ್ನು ನದಿನೀರಿನಿಂದ ರಕ್ಷಿಸ ಬೇಕಾದರೆ ಬೃಹತ್ ತಡೆಗೋಡೆಯ ಅಗತ್ಯವಿದೆ. ಆದರೆ, ಯಾವುದೇ ಅಭಿವೃದ್ಧಿಗೂ ತಾಲೂಕು ಆಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಮೂಲ ಸನ್ನಿಧಿಗೆ ಬೇಕಿದೆ ಕಟ್ಟಡ:

ಕಳೆದ ಹಲವು ವರ್ಷಗಳಿಂದ ಬಯಲಿನಲ್ಲಿದ್ದ ಮೂಲ ಸನ್ನಿಧಿಗೆ ಭಕ್ತರೆ ಗುಡಿ ನಿರ್ಮಿಸಿದ್ದಾರೆ. ಆದರೆ, ಮೂಲ ಸನ್ನಿಧಿಗೆ ಬದಲಿ ಕಟ್ಟಡ ನಿರ್ಮಿಸಬೇಕು ಎಂಬ ಒತ್ತಾಯ ಸಹ ಕೇಳಿ ಬರುತ್ತಿದೆ.ಆಡಳಿತ ಮಂಡಳಿ ನೇಮಕ: ಹಲವು ವರ್ಷಗಳಿಂದ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ದೇವಾಲಯದ ಆಡಳಿತ ಮಂಡಳಿ ವಿಸರ್ಜಿಸಿ ಮೂರು ವರ್ಷಗಳೇ ಕಳೆದಿದ್ದು, ದೇವಾಲಯದ ಆಗುಹೋಗಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸುವುದಿಲ್ಲ. ಆದ್ದರಿಂದ, ಆಡಳಿತ ಮಂಡಳಿ ನೇಮಕವಾಗ ಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.ಅಶುಚಿತ್ವ:

ದೇವಾಲಯದ ಮೂಲ ಸನ್ನಿಧಿಯಲ್ಲಿ ಹರಕೆ ತೀರುವಳಿ ಮಾಡುವ ಭಕ್ತರು ತಾವು ನೀಡಿದ ಹರಕೆಯನ್ನು ಹೊಳೆಯ ದಂಡೆಯಲ್ಲೆ ಅಡುಗೆ ಮಾಡಿ ಸೇವಿಸುವುದು ಸಾಮಾನ್ಯವಾಗಿದೆ. ಇಲ್ಲಿ ನೀಡುವ ಹರಕೆಯ ಎಲ್ಲ ತ್ಯಾಜ್ಯವನ್ನು ಅದೇ ಸ್ಥಳದಲ್ಲೆ ಬಿಟ್ಟು ಭಕ್ತರು ತೆರಳುತ್ತಿದ್ದಾರೆ. ಇದರಿಂದಾಗಿ ಇಡಿ ವಾತಾವರಣ ಅಸಾಧ್ಯ. ಪ್ರಮಾಣದಲ್ಲಿ ಕಲುಷಿತಗೊಂಡಿದೆ. ಇನ್ನೊಂದೆಡೆ ಊಟ ಮಾಡಿದ ತಟ್ಟೆಗಳು ಇಡೀ ಪ್ರದೇಶವನ್ನು ಆವರಿಸಿದೆ. ಶುಚಿತ್ವದ ಬಗ್ಗೆ ಗಮನಹರಿಸಬೇಕಿದ್ದ ಹೆಗ್ಗದ್ದೆ ಗ್ರಾಪಂ ಆಡಳಿತಾಧಿಕಾರಿಗಳು ಅತ್ತ ತಲೆಹಾಕಿಯು ಮಲಗುತ್ತಿಲ್ಲ ಎಂಬುದು ಭಕ್ತರ ದೂರು.

ಅಪಾಯಕಾರಿಯಾದ ಹೊಳೆ:

ದೇವಾಲಯದ ಸಮೀಪ ಹರಿಯುವ ಕೆಂಪುಹೊಳೆ ಬೇಸಿಗೆಯಲ್ಲೂ ಅಪಾಯಕಾರಿಯಾಗಿದೆ. ಈ ಹಿಂದೆ ಬೇಸಿಗೆಯ ವೇಳೆ ದೇವಾಲಯ ಸಮೀಪದ ನದಿಯಲ್ಲಿ ಭಕ್ತರು ಸ್ನಾನ ಮಾಡುವುದು ಮೋಜುಮಸ್ತಿ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ಈಗ ಹೊಳೆಯ ನೀರಿಗೆ ಇಳಿಯದಂತೆ ದೇವಾಲಯದ ಮುಂಭಾಗವೇ ಫಲಕ ಹಾಕಲಾಗಿದ್ದು ಹೊಳೆಯ ಮೇಲ್ಭಾಗದಲ್ಲಿ ಸಾಕಷ್ಟು ಕಿರುಡ್ಯಾಮ್‌ಗಳನ್ನು ನಿರ್ಮಿಸಿರುವುದರಿಂದ ಈ ಡ್ಯಾಮ್‌ಗಳಿಂದ ಯಾವಾಗ ಬೇಕಿದ್ದರೂ ನೀರನ್ನು ನದಿಗೆ ಬೀಡುವುದರಿಂದ ನದಿಯಲ್ಲಿ ಏಕಾಏಕಿ ನೀರಿನ ರಭಸ ಹೆಚ್ಚಲಿದೆ. ಆದ್ದರಿಂದ, ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

------------------------------------------- * ಹೇಳಿಕೆ1

ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಸಾಕಷ್ಟು ಆದಾಯವು ಸಂಗ್ರಹವಾಗುತ್ತಿದೆ. ಆದರೆ, ಸಾಕಷ್ಟು ವರ್ಷಗಳಿಂದ ಹಲವು ಮೂಲಭೂತ ಸೌಕರ್ಯವನ್ನು ಸನ್ನಿಧಿ ಎದುರಿಸುತ್ತಿದೆ.

- ಆನಂದ, ದೇವಾಲಯದ ಉಸ್ತುವಾರಿ (21ಎಚ್ಎಸ್ಎನ್3ಬಿ)

======

* ಹೇಳಿಕೆ2

ದೇವಸ್ಥಾನ ಆವರಣ ಸಾಕಷ್ಟು ಅಶುಚಿತ್ವದಿಂದ ಕೂಡಿದ್ದು ಸ್ವಚ್ಛತೆ ಕಾಪಾಡಬೇಕಿರುವ ಗ್ರಾಮ ಪಂಚಾಯ್ತಿ ಆಡಳಿತ ಗಾಢನಿದ್ರೆಯಲ್ಲಿದೆ. ದೇವಸ್ಥಾನಕ್ಕೆ ತೀರ ಅಗತ್ಯವಿರುವ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.

ಯೋಗೇಶ್, ಭಕ್ತ (21ಎಚ್ಎಸ್ಎನ್3ಸಿ)