ಗಡಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರವಾರದಲ್ಲಿ ಡಿ.15ರಿಂದ 31ರವರೆಗೆ ಗಡಿನಾಡ ಕರಾವಳಿ ಉತ್ಸವ ಆಯೋಜಿಸಲಾಗಿದೆ.
ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ಸವದ ಲೋಗೋ ಬಿಡುಗಡೆ
ಕನ್ನಡಪ್ರಭ ವಾರ್ತೆ ಕಾರವಾರ
ಗಡಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರವಾರದಲ್ಲಿ ಡಿ.15ರಿಂದ 31ರವರೆಗೆ ಗಡಿನಾಡ ಕರಾವಳಿ ಉತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ್ ನಾಗೇಕರ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ನಗರದ ಮಯೂರವರ್ಮ ವೇದಿಕೆಯಲ್ಲಿ ಉತ್ಸವ ನಡೆಯಲಿದೆ. ಆರಂಭಿಕ ಒಂದು ವಾರ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ, ರ‍್ಯಾಪ್ ಗಾಯಕ ಅಲೋಕ್, ಐಶ್ವರ್ಯ ರಂಗರಾಜನ್, ಜೇನ ಧನಿಯೋಳೆ ಹಾಗೂ ಮೀನ ಕಣ್ಣೊಳೆ ಖ್ಯಾತಿಯ ಗಾಯಕ ಜಸ್ಕಿರಣ್ ಸಿಂಗ್ ಸೇರಿದಂತೆ ಹಲವು ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದರು.
ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಸ್ಥಳೀಯ ಜಾನಪದ ಕಲಾ ತಂಡಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು. ಉತ್ಸವದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಆಹಾರ ಮಳಿಗೆಗಳಿಗೂ ಅವಕಾಶ ನೀಡಲಾಗಿದೆ. ಒಟ್ಟು 15 ದಿನಗಳ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಅಕ್ಷಯ್ ನಾಗೇಕರ್ ಹೇಳಿದರು.ಉದ್ಘಾಟನಾ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರನ್ನು ಆಹ್ವಾನಿಸುವ ಚಿಂತನೆ ಇದ್ದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೃಷ್ಣ ಬಂಟ, ಸಂತೋಷ ನಾಯ್ಕ, ಚೇತನ ಕೋಚರೇಕರ್, ಹಸನ್, ಅಜೀಂ ಶೇಖ್ ಹಾಗೂ ಬ್ರಿಜೆಶ್ ನಾಯ್ಕ ಉಪಸ್ಥಿತರಿದ್ದರು.