ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಗೋಗಾಂವ್ ಕೆರೆ ವೆಸ್ಟ್‌ವೇರ್ ಹಾಗೂ ಕೆರೆ ಬದುವಿನಿಂದ ನೀರು ಉಕ್ಕಿ ಹರಿದು ಆಳಂದ ತಾಲೂಕಿನ ಹಲವು ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ, ಕರೆಂಟ್ ಕಂಬಗಳು 22 ಉರುಳಿ ಬಿದ್ದ ಪರಿಣಾಮ ತಾಲೂಕಿನ ಗಡಿಹಳ್ಳಿಗಳಲ್ಲಿ 2 ದಿನದಿಂದ ಕರೆಂಟ್ ಇಲ್ಲದಂತಾಗಿದೆ.ಈ ಪ್ರದೇಶಕ್ಕೆ ಸಿಇಒ ಭಂವರ್ ಸಿಂಗ್ ಮೀನಾ ಭೇಟಿ ನೀಡಿದಾಗ, ತಡೋಳಾ, ನಿರಗುಡಿ, ಖಾನಾಪೂರ ಸೇರಿ ಶಖಾಪೂರ ರಾಜ್ಯ ಹೆದ್ದಾರಿ, ವಾಗ್ದರಿ–ರಿಪ್ಪನ್‌ಪಲ್ಲಿ ಮಾರ್ಗದವರೆಗೂ ಪ್ರವಾಹದಿಂದ ಸೇತುವೆ, ರಸ್ತೆ, ಜಮೀನು, ವಿದ್ಯುತ್ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಕಬ್ಬು ಮತ್ತು ತೊಗರಿ ಸೇರಿದಂತೆ ಸಾವಿರಾರು ಎಕರೆ ಬೆಳೆ ಹಾನಿಗೊಳಗಾಗಿದ್ದು, ಅನೇಕ ಜಾನುವಾರುಗಳ ಸಾವಾಗಿದೆ ಎಂದು ಜನ ಗೋಳಾಡಿದರು.
ಹಾನಿಗೊಳಗಾದ ಶಖಾಪೂರ ಮತ್ತು ಜೀರೋಳಿ ಸೇತುವೆ ಹಾಗೂ ಹೊಲಗಳನ್ನು ಪರಿಶೀಲಿಸಿದರು. ಖಾನಾಪೂರ–ಜೀರೋಳಿ, ಶಖಾಪೂರ–ಜೀರೋಳಿ, ಜಿರೋಳಿ–ಚಿಂಚೋಳಿ ಬಿ, ಚಿಂಚೋಳಿ ರಸ್ತೆಗಳ ಸಂಪರ್ಕ ಕಡಿತಗೊಂಡಿರುವುದಕ್ಕೆ ಬದುಕು ನರಕವಾಗಿದೆ ಎಂದು ಹಳ್ಳಿ ಮಂದಿ ಸಿಇಒ ಮುಂದೆ ಅಳಲು ತೋಡಿಕೊಂಡರು.ಪ್ರವಾಹದ ಪರಿಣಾಮ 22 ವಿದ್ಯುತ್ ಕಂಬಗಳು ಹಾಗೂ 5 ವಿದ್ಯುತ್ ಪರಿವರ್ತಕಗಳು ಉರುಳಿ ಬಿದ್ದಿದ್ದು, ಒಂದು ಕೊಚ್ಚಿ ಹೋಗಿದೆ. ಇದರಿಂದಾಗಿ ಹಲವು ಹಳ್ಳಿಗಳು ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಅನುಭವಿಸುತ್ತಿವೆ ಎಂದು ಸ್ಥಳೀಯರು ಹಿಟ್ಟು ಬೀಸಿ ತರಲೂ ಪರದಾಡಬೇಕಾಗಿದೆ ಎಂದು ವಿವರಿಸಿದರು.
ಮೋಘಾ–ಸಾವಳೇಶ್ವರ, ಹಿರೋಳಿ–ಭೀಂಪೂರ ಸಂಪರ್ಕ ರಸ್ತೆ ಕೊಚ್ಚಿಹೋಗಿರುವುದರಿಂದ ತ್ವರಿತ ಕಾಮಗಾರಿ ನಡೆಸಬೇಕು ಎಂದು ಹೇಳಿದರು. ಪ್ರವಾಹದಿಂದಾಗಿ ಒಟ್ಟು 8 ಸೇತುವೆ ಹಾಗೂ 11 ರಸ್ತೆ ಹಾನಿಗೊಳಗಾದರೆ, ಈ ಮೊದಲು ಸುರಿದ ಮಳೆಯಿಂದಾಗಿ 18ರಸ್ತೆ ಮತ್ತು 8 ಸೇತುವೆಗಳು ಈಗಾಗಲೇ ಹಾನಿಯಾಗಿರುವ ಮಾಹಿತಿ ಜಿಪಂ ಎಇಇ ಸಂಗಮೇಶ ಬಿರಾದರ ಅವರು ಸಿಇಒ ಅವರಿಗೆ ನೀಡಿದಾಗ, ನಾಳೆಯಿಂದಲೇ ತುರ್ತು ಕಾಮಗಾರಿ ಕೈಗೊಂಡು ಸಂಪರ್ಕ ಪುನಃಸ್ಥಾಪನೆ ಮಾಡಬೇಕೆಂದು ಅಧಿಕಾರಿಗಳಿಗೆ ಸಿಇಒ ಭಂವರ್ ಸಿಂಗ್ ಮೀನಾ ಸೂಚನೆ ನೀಡಿದರು.ಸಿಇಒ ಮೀನಾ ಅವರು, “ಪ್ರವಾಹ ಹಾನಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ತಕ್ಷಣ ಸಲ್ಲಿಸಿದರೆ, ಎನ್‍ಡಿಆರ್‍ಎಫ್ ನಿಯಮದಂತೆ 60 ಸಾವಿರ ರೂಪಾಯಿಗಿಂತ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾತಿ ಪಡೆಯಬಹುದು. ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ಪುನಃಸ್ಥಾಪನೆಗೆ ತಕ್ಷಣ ಕಾಮಗಾರಿ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಜಿಲ್ಲಾ ಪಂಚಾಯಿತಿ ಎಇಇ ಸಂಗಮೇಶ್ ಬಿರಾದಾರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೋಳ, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಬನ್ಸಿದ್ದಪ್ಪ ಬಿರಾದಾರ್ ಸೇರಿದಂತೆ ಜೆಸ್ಕಾಂ ಇತರ ಇಲಾಖೆ ಅಧಿಕಾರಿಗಳು ಇದ್ದರು.