ಸಾರಾಂಶ
ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡಿನ ಬಳಿ ಸೋಮವಾರ ತಡರಾತ್ರಿ ಕಾಡಾನೆ ಮರಿ ಹಾಕಿ, ಜನರ ಗದ್ದಲದಿಂದ ಹೆದರಿ ಮರಿಯನ್ನು ಬಿಟ್ಟು ಕಾಡಿನೊಳಗೆ ಹೋಗಿತ್ತು. ಬಳಿಕ, ತಾಯಿ ಆನೆ ಜೊತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮನೆಯೊಂದರ ಆವರಣದಲ್ಲಿ ಮರಿಯಾನೆಯೊಂದು ಜನ್ಮ ಪಡೆದು, ತಾಯಿಯಿಂದ ದೂರವಾಗಿ ರೋಧನೆ ಮಾಡುತ್ತಿದ್ದ ಘಟನೆ ನಡೆದಿತ್ತು. ಸದ್ಯ ಇದೀಗ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡಿನ ಬಳಿ ಸೋಮವಾರ ತಡರಾತ್ರಿ ಕಾಡಾನೆ ಮರಿ ಹಾಕಿ, ಜನರ ಗದ್ದಲದಿಂದ ಹೆದರಿ ಮರಿಯನ್ನು ಬಿಟ್ಟು ಕಾಡಿನೊಳಗೆ ಹೋಗಿತ್ತು. ಬಳಿಕ, ತಾಯಿ ಆನೆ ಜೊತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಕರಡ ಗ್ರಾಮದ ಕೀಮಲೆ ಕಾಡಿನ ಮಂಜು ಎಂಬವರ ಮನೆಯ ಆವರಣದಲ್ಲಿ ಕಾಡಾನೆ ಮರಿ ಹಾಕಿತ್ತು. ಮಂಗಳವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಮರಿಯನ್ನು ವೀಕ್ಷಿಸಲಾರಂಭಿಸಿದ್ದರು. ಇದರಿಂದ ವಿಚಲಿತವಾದ ಕಾಡಾನೆ ಮರಿಯನ್ನು ಬಿಟ್ಟು ತೆರಳಿತ್ತು. ಮರಿಯಾನೆಯನ್ನು ಬಿಟ್ಟು ಹೋದ ಹಿನ್ನೆಲೆಯಲ್ಲಿ ಮರಿಯ ರೋಧನೆ ಮುಗಿಲು ಮುಟ್ಟಿತ್ತು. ಹೀಗಾಗಿ ಗ್ರಾಮಸ್ಥರು ಮರಿಯಾನೆಗೆ ಹಾಲು ಉಣಿಸಿ ಆರೈಕೆ ಮಾಡಿದ್ದರು.ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಗೆ ಗ್ಲೂಕೋಸ್ ನೀಡಿ ಸ್ವಲ್ಪದೂರ ಎತ್ತಿಕೊಂಡು, ಸ್ವಲ್ಪ ದೂರ ಜೀಪ್‌ನಲ್ಲಿ ಕೊಂಡು ಹೊಗಿ ನಂತರ ಕಾಡಿನೊಳಗೆ ನಡೆಸಿಕೊಂಡು ಹಳ್ಳ, ಕೊಳ್ಳ ಹಾಗೂ ದಟ್ಟ ಅರಣ್ಯದ ನಡುವೆ ಸಾಗಿ ಮರಿಯಾನೆಯನ್ನು ಅಂತಿಮವಾಗಿ ತಾಯಿಯಾನೆಯೊಂದಿಗೆ ಸೇರಿಸಿದ್ದಾರೆ. ತಾಯಿ ಆನೆ ತನ್ನ ಮರಿಯನ್ನು ಬಿಟ್ಟು ಸುಮಾರು 7 ಕಿ.ಮೀ ದೂರ ಹೋಗಿರುವುದು ಅಪರೂಪ. ನಾವು ಕಾಡಿನೊಳಗೆ ಹುಡುಕಿಕೊಂಡು ಹೋಗಿ ಮರಿಯನ್ನು ತಾಯಿ ಆನೆಯೊಂದಿಗೆ ಸೇರಿಸಿದ್ದೇವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.