ಸಾರಾಂಶ
ಚಾಮರಾಜನಗರದ ಸಮೀಪದ ಕರಿನಂಜನಪುರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಆರ್.ಡಿ. ಮಹೇಶ್ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ, ಸರ್ಕಾರದ ಶೂನ್ಯ ಬಡ್ಡಿದರದ ಸೌಲಭ್ಯವನ್ನು ಪಡೆದುಕೊಳ್ಳುವ ಜೊತೆಗೆ ಸಂಘದ ಪ್ರಗತಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಕರಿನಂಜನಪುರದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಆರ್.ಡಿ. ಮಹೇಶ್ ತಿಳಿಸಿದರು. ನಗರ ಸಮೀಪದಲ್ಲಿರುವ ಕರಿನಂಜನಪುರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘವು ನಷ್ಟದಲ್ಲಿದ್ದು, ರೈತರು ಪಡೆದುಕೊಂಡ ಸಾಲಗಳು ಸಕಾಲಕ್ಕೆ ಮರುಪಾವತಿಯಾಗದೇ ಸುಸ್ತಿಯಾಗಿರುವ ಕಾರಣದಿಂದ ಸಂಘ ನಿವ್ವಳ ನಷ್ಟದಲ್ಲಿದೆ. ಸರ್ಕಾರದಿಂದ ಶೂನ್ಯ ಬಡ್ಡಿ ಸಾಲದ ಬಾಬ್ತು ೧೩ ಲಕ್ಷ ರು. ಬಂದರೂ ರೈತರು ಸಂಘದಿಂದ ಪಡೆದುಕೊಂಡಿರುವ ೨೮ ಲಕ್ಷ ರು. ಸಾಲ ಸುಸ್ತಿಯಾಗಿದೆ. ಪಡಿತರ ವಿತರಣೆಯಲ್ಲಿ ಸಂಘಕ್ಕೆ ನಷ್ಟವಾಗುತ್ತಿದೆ. ಈ ಹಿಂದೆ ಪ್ರತಿ ಕಾರ್ಡುಗಳಿಗೆ ಅಕ್ಕಿ ವಿತರಣೆ ಮಾಡುತ್ತಿದ್ದಾಗ ಹೆಚ್ಚಿನ ಲಾಭವಾಗುತ್ತಿದೆ. ಈಗ ಸರ್ಕಾರ ಪಡಿತರದಾರರ ಖಾತೆಗೆ ಹಣ ಜಮಾ ಮಾಡುತ್ತಿರುವುದರಿಂದ ಪಡಿತರ ವಿತರಣೆಯಲ್ಲಿ ಸಹ ಸಂಘಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಸಂಘ ಅಭಿವೃದ್ದಿಪಡಿಸಲು ಪ್ರತಿಯೊಬ್ಬ ಸದಸ್ಯರು ಸಾಲ ಮರು ಪಾವತಿ ಮಾಡುವ ಜೊತೆಗೆ ಸಂಘಕ್ಕೆ ಠೇವಣಿ ಇಟ್ಟು ಹೆಚ್ಚಿನ ವ್ಯವಹಾರ ಮಾಡಬೇಕು. ನೂತನ ಸದಸ್ಯರಿಗೆ ಸಾಲ ನೀಡಲು ಈಗಾಗಲೇ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡಿದ್ದು, ಸದ್ಯದಲ್ಲಿಯೇ ಎಂಡಿಸಿಸಿ ಬ್ಯಾಂಕ್‌ನಿಂದ ಸಾಲ ಬಿಡುಗಡೆ ಮಾಡಿಸಲಾಗುವುದು. ವಾಹನ ಸಾಲ, ಇತರೇ ಸಾಲವನ್ನು ಪಡೆದುಕೊಂಡು ಸಂಘದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು. ಕರಿನಂಜನಪುರ ಸಹಕಾರ ಸಂಘಕ್ಕೆ ರಾಮಸಮುದ್ರದ ಮುಖ್ಯ ರಸ್ತೆಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವ ಆಸ್ತಿ ಇದೆ. ಇದನ್ನು ೧೯೭೫ರಲ್ಲಿ ಸಂಘಕ್ಕೆ ದಾನವಾಗಿ ಬರೆದುಕೊಡಲಾಗಿದೆ. ಈಗ ಅದರ ವಿರುದ್ಧ ನ್ಯಾಯಾಲಯದಲ್ಲಿ ನಮಗೆ ಸೇರಬೇಕೇಂದು ಕೆಲವರು ದಾವೆ ಹೂಡಿದ್ದಾರೆ. ಆದರೆ ಇದು ಸಫಲವಾಗುವುದಿಲ್ಲ. ನ್ಯಾಯಾಲಯದ ತೀರ್ಪು ಬಾಕಿ ಇದ್ದು, ನಮ್ಮ ಪರವಾಗಿ ಬರುತ್ತದೆ ಎಂಬ ವಿಶ್ವಾಸ ಇದೆ. ಸಂಘದ ಆಸ್ತಿಗೆ ಸುತ್ತುಗೋಡೆ ನಿರ್ಮಿಸಿ, ಅದನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸದಸ್ಯರು ಆಸ್ತಿ ವಿಚಾರದಲ್ಲಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಅದ್ಯಕ್ಷ ಮಹೇಶ್ ತಿಳಿಸಿದರು. ಸಂಘದ ಹಿರಿಯ ಸದಸ್ಯ ಆರ್.ವಿ.ಮಹದೇವಸ್ವಾಮಿ ಮಾತನಾಡಿ, ಸಂಘವನ್ನು ಅಭಿವೃದ್ದಿ ಪಡಿಸಲು ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಳ್ಳಲು ಸಾಲ ಪಡೆದ ರೈತರಿಗೆ ಕಟ್ಟಡ ಶುಲ್ಕವನ್ನು ಹಾಕುವ ಮೂಲಕ ಸಂಘದ ಪ್ರಗತಿಗೆ ಈ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್ ರಾಜೇಆರಸ್ ವಾರ್ಷಿಕ ವರದಿ ಓದಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಯರಾಮನಾಯಕ, ನಿರ್ದೇಶಕರಾದ ಚಂದ್ರಪ್ಪ, ಈಶ್ವರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಮನೋಜ್‌ಪಟೇಲ್, ನಾಗರತ್ನಮ್ಮ, ಶೀಲಾ, ಎನ್. ವೃಷಬೇಂದ್ರಸ್ವಾಮಿ, ಎಂ.ರಾಚಪ್ಪ, ಮಹದೇವಶೆಟ್ಟಿ, ಬಿ. ಶಿವಕುಮಾರ್, ಉಮೇಶ್, ಸದಸ್ಯರಾದ ಸಿ. ಮರಿಸ್ವಾಮಿ, ದೊಡ್ಡಶೆಟ್ಟಿ, ಎಸ್.ಡಿ.ರಾಜಪ್ಪ, ಮಹದೇವಸ್ವಾಮಿ, ಚಿಕ್ಕರಂಗಶೆಟ್ಟಿ, ಸತೀಶ್‌ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.