ಉದ್ದಿನ ಬಿತ್ತನೆ ಬೀಜದ ವಿತರಣೆ

| Published : Mar 24 2025, 12:31 AM IST

ಸಾರಾಂಶ

ಜೆಎಸ್ಎಸ್ ಕೆವಿಕೆಯು ರೈತರಿಗೆ ಅವಶ್ಯಕತೆಯಿರುವ ಹೊಸ ಉತ್ತಮವಾದ ತಳಿಗಳನ್ನು ಪರಿಚಯಿಸಿ,

ಕನ್ನಡಪ್ರಭ ವಾರ್ತೆ ಸುತ್ತೂರುಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೋರುಕಾ ಚಾರಿಟೀಸ್ ಟಿ. ನರಸೀಪುರ ಇವರ ಸಹಯೋಗದಲ್ಲಿ ಟಿ. ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಉದ್ದಿನ ತಳಿ ಎಲ್.ಬಿಜಿ 791 ತಳಿಯ ಬೇಸಾಯ ಕ್ರಮ, ಬೀಜೋಪಚಾರ ಹಾಗೂ ಬೀಜೋತ್ಪಾದನೆ ಕುರಿತಾದ ಕಾರ್ಯಕ್ರಮವನ್ನು ಪ. ಜಾತಿ ಹಾಗೂ ಪಂಗಡದವರಿಗೆ ಏರ್ಪಡಿಸಿತ್ತು. ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ,ಜೆಎಸ್ಎಸ್ ಕೆವಿಕೆಯು ರೈತರಿಗೆ ಅವಶ್ಯಕತೆಯಿರುವ ಹೊಸ ಉತ್ತಮವಾದ ತಳಿಗಳನ್ನು ಪರಿಚಯಿಸಿ, ತರಬೇತಿ ಮುಖಾಂತರ ಹೆಚ್ಚು ಇಳುವರಿ ಪಡೆಯಲು ಮಾರ್ಗದರ್ಶನ ನೀಡಿ, ರೈತರು ಉತ್ತಮ ಇಳುವರಿ ಪಡೆಯಲು ಶ್ರಮಿಸುತ್ತಿದ್ದಾರೆ ಎಂದರು. ಕೆವಿಕೆಯ ಬೀಜತಂತ್ರಜ್ಞದ ವಿಷಯ ತಜ್ಞೆ ಎಚ್.ವಿ. ದಿವ್ಯಾ ಮಾತನಾಡಿ, ಈ ಭಾಗದ ರೈತರು ಟಿ 9 ಅಥವಾ ಸ್ಥಳೀಯ ಉದ್ದಿನ ತಳಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಆ ತಳಿಗೆ ರೋಗ ಹೆಚ್ಚಾಗಿದ್ದು, ಕಡಿಮೆ ಇಳುವರಿ ನೀಡುತ್ತದೆ. ಈ ತಳಿಗೆ ಪರ್ಯಾಯವಾಗಿ ಉತ್ತಮ ಇಳುವರಿ ಕೊಡುವ ಹಳದಿ ಎಲೆ ರೋಗ ತಡೆದುಕೊಳ್ಳುವ ಉದ್ದಿನ ತಳಿಯಾದ ಎಲ್ ಬಿ ಜಿ 791 ತಳಿಯನ್ನು ಬಳಸಲು ಸೂಚಿಸಿದರು. ರೈತರು ಉತ್ತಮ ಗಿಡಗಳನ್ನು ಆಯ್ಕೆ ಮಾಡಿ ಮುಂದಿನ ಬಿತ್ತನೆಗೆ ಬೀಜವನ್ನು ಬಳಸಿಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದ ನಂತರ ಎಲ್ಲ ರೈತರ ದಾಖಲೆ ಪಡೆದುಕೊಂಡು ಉದ್ದಿನ ಬಿತ್ತನೆ ಬೀಜ (ತಳಿ ಎಲ್ ಬಿಜಿ 791 ) ವಿತರಿಸಲಾಯಿತು. ಬೋರುಕಾ ಚಾರಿಟೀಸ್ ಕಾರ್ಯಕ್ರಮ ಸಂಯೋಜಕಿ ಮಂಗಳಾ, ಕೆವಿಕೆಯ ವಿಷಯ ತಜ್ಞ ಡಾ.ಜಿ.ಎಂ. ವಿನಯ್, ಡಾ.ವೈ.ಪಿ. ಪ್ರಸಾದ್, ಡಾ. ದೀ ಪಕ್, ಕ್ಷೇತ್ರ ಸಹಾಯಕರಾದ ಅಕ್ಷಯ್, ಮಹೇಂದ್ರ, ಮಹದೇವಸ್ವಾಮಿ ಇದ್ದರು. ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.