ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉದ್ಯಾನ ನಗರಿಗೆ ಒಟ್ಟಾರೆ ಶೇ.43ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮ ಮಳೆ ನೀರಿನಿಂದಲೇ ತುಂಬುವ ನಗರದ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಮಳೆಗಾಲಕ್ಕೆ ಮೊದಲೇ ಅಂತರ್ಜಲ ಬತ್ತುವ ಭೀತಿ ಎದುರಾಗಿದೆ.

-ಈ ಬಾರಿ ರಾಜಧಾನೀಲಿ 43% ಮುಂಗಾರು ಮಳೆ ಕೊರತೆ । ನೀರಿಲ್ಲದೇ ಬತ್ತಿ ಹೋಗಿರುವ ಕೆರೆಗಳು । ಟ್ಯಾಂಕರ್ ನೀರು ಹೆಚ್ಚಳ ಸಾಧ್ಯತೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉದ್ಯಾನ ನಗರಿಗೆ ಒಟ್ಟಾರೆ ಶೇ.43ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮ ಮಳೆ ನೀರಿನಿಂದಲೇ ತುಂಬುವ ನಗರದ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಮಳೆಗಾಲಕ್ಕೆ ಮೊದಲೇ ಅಂತರ್ಜಲ ಬತ್ತುವ ಭೀತಿ ಎದುರಾಗಿದೆ.

ಮಳೆಗಾಲದ ಜೂ.1ರಿಂದ ಸೆ.30ರವರೆಗೆ ನಗರದಲ್ಲಿ ಸರಾಸರಿ 549 ಮಿ.ಮೀ ಮಳೆಯಾಗಬೇಕು. ಈ ಬಾರಿ ಶೇ.43ರಷ್ಟು ಕೊರತೆಯಾಗಿ ಬರೀ 313 ಮಿ.ಮೀ ಮಳೆಯಾಗಿದ್ದು, 236 ಮಿ.ಮೀ ಮಳೆ ಕೊರತೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಮಳೆಗಾಲ ಆರಂಭದ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ನಗರಕ್ಕೆ ಕಡಿಮೆ ಮಳೆ ಬಿದ್ದಿದೆ. ಅದರಲ್ಲೂ ಜುಲೈನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಸೆಪ್ಟಂಬರ್‌ ಕೊನೆಯಲ್ಲಿ ಸುರಿದ ಉತ್ತಮ ಮಳೆಯಿಂದ ನಗರದ ಜಲ ಮೂಲಗಳಿಗೆ ಸ್ವಲ್ಪ ಕಳೆ ಬಂದಿದೆ.

ಇನ್ನು ನಾಗವಾರ ಕೆರೆ, ಹೆಬ್ಬಾಳ ಕೆರೆ, ಹಲಸೂರು ಕೆರೆ ಸೇರಿದಂತೆ ಪ್ರಮುಖ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೆರೆಗಳಿಗೆ ಕೊಳಚೆ ನೀರು ಹರಿಯದಂತೆ ತಡೆಯಲು ಕಾಲುವೆಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, ಕೆರೆ ಮತ್ತು ಕೆರೆ ಸುತ್ತ ಇರುವ ಉದ್ಯಾನದಂತಹ ಸ್ಥಳಗಳಲ್ಲಿ ಬೀಳುವ ಮಳೆ ನೀರು ಮಾತ್ರ ಕೆರೆಗೆ ಆಧಾರವಾಗಿದೆ. ಆದರೆ, ಈ ವರ್ಷ ತೀವ್ರ ಮಳೆ ಕೊರತೆಯಾಗಿರುವುದರಿಂದ ಮಳೆಗಾಲದಲ್ಲೇ ಕೆರೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ನಿಂತಿದೆ.

ನೀರಿನ ಅಭಾವ ಭೀತಿ: ಕೆರೆಗಳಲ್ಲಿ ನೀರಿಲ್ಲದೇ ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತುವ ಆತಂಕ ಎದುರಾಗಿದೆ. ಇದರಿಂದ ನಗರದಾದ್ಯಂತ ಬೋರ್‌ವೆಲ್ ನೀರು ನಂಬಿಕೊಂಡಿರುವ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಕಚೇರಿಗಳಿಗೆ ನೀರಿನ ಕೊರತೆಯ ಭೀತಿ ಎದುರಾಗಿದೆ.

ಕಾವೇರಿ ನೀರಿಗೆ ಶುಲ್ಕ ಹೆಚ್ಚು ಎಂದು ನಗರದ ಅನೇಕ ಕಡೆಗಳಲ್ಲಿ ಕಾವೇರಿ ನೀರಿನ ಸಂಪರ್ಕವನ್ನು ಪಡೆಯದೆ ಬೋರ್‌ವೆಲ್ ಮತ್ತು ಟ್ಯಾಂಕರ್ ನೀರು ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ಯಾಂಕರ್ ನೀರಿನ ದರ ದುಬಾರಿಯಾಗುವ ಜೊತೆಗೆ ನೀರಿನ ಲಭ್ಯತೆಯು ಇಳಿಮುಖವಾಗುವ ಆತಂಕವಿದೆ.

ಹಿಂಗಾರು ಕೂಡ ಕೊರತೆ: ರಾಜ್ಯಕ್ಕೆ ಹಿಂಗಾರು ಕೂಡ ಶೇ.30ರಷ್ಟು ಕೊರತೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

2 ದಿನ ಮಳೆ ಸಾಧ್ಯತೆ: ಅ.5 ಮತ್ತು ಅ.6ರಂದು ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಫೋಟೋ ಕ್ಯಾಪ್ಷನ್‌

ಅಭಿವೃದ್ಧಿಪಡಿಸಲಾಗುತ್ತಿರುವ ನಾಗವಾರ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ನಿಂತಿರುವುದು.