ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ
ನಿರ್ವಹಣಾ ಅನುದಾನದ ಕೊರತೆಯಿಂದ ಕಳೆ ಕಳೆದುಕೊಂಡ ಅರಣ್ಯ ಇಲಾಖೆ ನಿರ್ವಹಿಸುವ ಪಟ್ಟಣದ ಶ್ರೀ ಕುಮಾರೇಶ್ವರ ಸಸ್ಯೋದ್ಯಾನ ನವೀಕರಗೊಂಡು ಸಾರ್ವಜನಿಕರಿಗೆ ಲಭ್ಯವಾಗುವುದೇ? ಮತ್ತೆ ವಿದ್ಯಾರ್ಥಿಗಳು, ಹಿರಿಯರು, ಸಾರ್ವಜನಿಕರ ಸಂಭ್ರಮದ ತಾಣವಾಗುವುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.೨೦೧೭ರಲ್ಲಿ ಹಾನಗಲ್ಲ ಪಟ್ಟಣದ ಕೂಗಳತೆಯ ಚಿಕ್ಕೇರಿಹೊಸಳ್ಳಿ ಮಾರ್ಗದಲ್ಲಿ ೨೦ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಟ್ರೀಪಾರ್ಕ್ ಈಗ ಇದ್ದೂ ಇಲ್ಲದಂತಾಗಿದೆ. ಹಾನಗಲ್ಲ ಪಟ್ಟಣಕ್ಕೆ ಒಂದು ಉತ್ತಮ ಉದ್ಯಾನವನ ಬೇಕು ಎಂಬ ಆಶಯವನ್ನು ಹೊತ್ತು ಕೋಟಿ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಒಂದೆರಡು ವರ್ಷ ಸಾರ್ವಜನಿಕರು, ಅದರಲ್ಲೂ ಮಕ್ಕಳನ್ನು ಬಹುವಾಗಿ ಸೆಳೆದಿತ್ತು. ಇಲ್ಲಿ ಪ್ರವೇಶ ಪಡೆಯುವವರಿಗಾಗಿ ಮಕ್ಕಳಿಗೆ ₹ ೫, ಹಿರಿಯರಿಗೆ ₹ ೧೦ ಶುಲ್ಕವನ್ನೂ ವಿಧಿಸಲಾಗಿತ್ತು. ಇದರಿಂದ ಹತ್ತಾರು ಲಕ್ಷ ಸಂಗ್ರಹವೂ ಆಗಿದೆ. ಆದರೆ ಕ್ರಮೇಣ ನಿರ್ವಹಣೆಗಾಗಿ ಅನುದಾನವೇ ಲಭ್ಯವಾಗದೇ ಈಗ ಎಲ್ಲೆಂದರಲ್ಲಿ ಕಸ ಬೆಳೆದು, ಆಟಿಕೆ ವಸ್ತುಗಳು ನಿರುಪಯುಕ್ತವಾಗಿದ್ದು, ವಿಶ್ರಾಂತಿಗಾಗಿ ಕುಳಿತುಕೊಳ್ಳುವ ಆಸನಗಳಲ್ಲಿ ಹುತ್ತ, ಹುಲ್ಲು ಬೆಳೆದು ನಿಂತಿವೆ. ಇದನ್ನು ಬಳಸುವವರಿಗೆ ನಿರಾಸೆಯಾಗಿದೆ.ಕಬ್ಬಿಣದ ಆಟದ ಸಾಮಗ್ರಿಗಳು ಮುರಿದು ಜಂಗು ಹಿಡಿದಿದೆ. ಎಲ್ಲೆಂದರಲ್ಲಿ ಕಸ ಹರಡಿದೆ, ಮುಳ್ಳು ಕಂಟಿಗಳು ಬೆಳೆದಿವೆ. ಕಾಡು ಕಾಪಾಡುವ ಘೋಷಣೆ ಉಳ್ಳ ಫಲಕಗಳೂ ಬಣ್ಣ ಕಳೆದುಕೊಂಡು ಮಸುಕಾಗಿವೆ. ಪ್ರವೇಶ ದ್ವಾರ ಬಣ್ಣ ಬೇಕೆಂದು ಬಯಸುತಿದೆ. ಇದರ ಗೋಡೆಯ ಮೇಲೆ ಅಳವಡಿಸಲಾದ ಪಕ್ಷಿಗಳ ಚಿತ್ರಗಳು ಜಂಗು ಹಿಡಿದು, ಬಣ್ಣವಿಲ್ಲದೆ ಭಣಗುಡುತ್ತಿವೆ. ವಾಟರ್ ಫಾಲ್ಸ್ ಕೆಲಸ ಮಾಡುತ್ತಿಲ್ಲ. ವಾಕಿಂಗ್ ಟ್ರ್ಯಾಕ್ ಇಲ್ಲದಂತಾಗಿದೆ. ವಿದ್ಯುದ್ದೀಪಗಳಿಲ್ಲದೇ ಸೊರಗಿದೆ.ಸಿಬ್ಬಂದಿ-ಇಲ್ಲ: ಇಡೀ ೨೦ ಎಕರೆಯ ಸಸ್ಯೋದ್ಯಾನ ನಿರ್ವಹಣೆಗೆ ಒಬ್ಬನೇ ಒಬ್ಬ ಸಿಬ್ಬಂದಿ ಇದ್ದಾರೆ. ಇದರ ನಿರ್ವಹಣೆಗೆ ಕನಿಷ್ಠ ೮ ಸಿಬ್ಬಂದಿ ಬೇಕು. ಇನ್ನು ಮುೂಲ ಸೌಕರ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಕೆಟ್ಟು ಹೋದ ಸಿಸಿ ಕ್ಯಾಮೆರಾ ಸರಿಪಡಿಸಬೇಕು. ಇನ್ನೂ ನಾಲ್ಕು ಕೊಳವೆಬಾವಿ ಬೇಕು. ವಿದ್ಯುದ್ದೀಪಗಳನ್ನು ಅಳವಡಿಸಬೇಕು. ಸಸ್ಯ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಅರಣ್ಯ ಮಾಹಿತಿ ಕೇಂದ್ರ ಬೇಕು. ಹಣ್ಣು ಔಷಧಿ ಗಿಡಗಳನ್ನು ನೆಟ್ಟು ಪರಿಚಯಿಸಬೇಕು. ಬೇಕುಗಳು ಬಹಳಷ್ಟು ಇವೆ. ಇದಕ್ಕೆ ಅನುದಾನ ಬೇಕು ಎಂಬ ಬೇಡಿಕೆ ಇದೆ.ಹಾನಗಲ್ಲಿನಲ್ಲಿ ಪಾರ್ಕ್ ನಿರ್ಮಾಣಕ್ಕಾಗಿಯೇ ಸರ್ಕಾರ ೧ ಕೋಟಿ ರು. ಅನುದಾನ ಕಲ್ಪಿಸಿದೆ. ಈ ಹಣವನ್ನು ಇದೇ ಶ್ರೀ ಕುಮಾರೇಶ್ವರ ಸಸ್ಯೋದ್ಯಾನ ಅಭಿವೃದ್ಧಿಗೆ ಬಳಸಿ ಸರಿಯಾದ ನಿರ್ವಹಣೆ ಮಾಡಿದಲ್ಲಿ ಇಡೀ ತಾಲೂಕಿನ ವಿದ್ಯಾರ್ಥಿಗಳು, ಮಕ್ಕಳು ಸಾರ್ವಜನಿಕರನ್ನು ಅತ್ಯುತ್ತಮವಾಗಿ ಆಕರ್ಷಿಸುವ ಕೇಂದ್ರ ಇದಾಗುತ್ತದೆ.ನಕ್ಷತ್ರವನ-ಪಂಚವಟಿ: ಇದೇ ಸಸ್ಯೋದ್ಯಾನದಲ್ಲಿ ವೈಜ್ಞಾನಿಕವಾಗಿ ಪಂಚವಟಿ ವನ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ವಾಸ್ತು, ಸಸ್ಯ ಶಾಸ್ತ್ರದ ಆಧಾರದಲ್ಲಿ ಸಸ್ಯಗಳನ್ನು ನೆಡಲಾಗಿತ್ತು. ಅಲ್ಲದೆ ಔಷಧಿ ಸಸ್ಯಗಳನ್ನು ಕೂಡ ನೆಡಲಾಗಿತ್ತು. ನಕ್ಷತ್ರ ಮರಗಳನ್ನು ನೆಡಲಾಗಿತ್ತು. ಆದರೆ ಈಗ ಅವುಗಳ ಅಸ್ತಿತ್ವವೇ ಇಲ್ಲ. ಇದರ ಅಭಿವೃದ್ಧಿಯೂ ಅತ್ಯವಶ್ಯವಾಗಿ ಬೇಕಾಗಿದೆ.ಸಸ್ಯೋದ್ಯಾನದ ಹಿಂಭಾಗಕ್ಕೆ ಅರಣ್ಯ ಹೊಂದಿಕೊಂಡಿದೆ. ಅಲ್ಲಿಂದ ಕಾಡು ಪ್ರಾಣಿಗಳು ಸಸ್ಯೋದ್ಯಾನದತ್ತ ಧಾವಿಸುವ ಸಾಧ್ಯತೆಯೂ ಇದೆ. ಈ ಭಾಗದಲ್ಲಿ ಭದ್ರವಾದ ತಂತಿ ಬೇಲಿಯ ಅಗತ್ಯವೂ ಇದೆ. ಹಾನಗಲ್ಲ ತಾಲೂಕಿಗೆ ಅತ್ಯಂತ ಆಶಾದಾಯಕವಾಗಿದ್ದ ಈ ಸಸ್ಯೋದ್ಯಾನ ಪುನರ್ ನಿರ್ಮಾಣವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿ ಎಂಬ ಆಶಯ ಇಲ್ಲಿನ ಸಾರ್ವಜನಿಕರದ್ದಾಗಿದೆ. ಪಟ್ಟಣದಲ್ಲಿ ಪುರಸಭೆ ನಿರ್ವಹಿಸುವ ಒಂದೂ ಉದ್ಯಾನವನ ಸುಸ್ಥಿತಿಯಲ್ಲಿಲ್ಲ. ಅವು ಉದ್ಯಾನಗಳು ಎಂದೆನಿಸುತ್ತಲೇ ಇಲ್ಲ. ಇರುವ ಈ ಸಸ್ಯೋದ್ಯಾನವನ್ನಾದರೂ ಅಭಿವೃದ್ಧಿಪಡಿಸಲಿ.ಸಸ್ಯೋದ್ಯಾನ ಮರುನಿರ್ಮಾಣಕ್ಕೆ ಅನುದಾನಕ್ಕಾಗಿ ಬೇಡಿಕೆ ಇದೆ. ಶೀಘ್ರ ಅಭಿವೃದ್ಧಿಪಡಿಸುವ ಕಾರ್ಯ ಕೈಗೂಡುವ ಭರವಸೆಯೂ ಇದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯುವ ಯತ್ನದಲ್ಲಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಗಣೇಶ ಶೆಟ್ಟರ ಹೇಳಿದರು.ಸಿ.ಎಂ. ಉದಾಸಿ, ಮನೋಹರ ತಹಶೀಲ್ದಾರ ಅವರ ಕಾಲದಲ್ಲಿ ನಿರ್ಮಾಣವಾದ ಈ ಸಸ್ಯೋದ್ಯಾನ ಅಭಿವೃದ್ಧಿಗೆ ಅರಣ್ಯ ಇಲಾಖೆ ಈಗಲಾದರೂ ಕಾಳಜಿವಹಿಸಬೇಕು. ಇರುವ ಒಂದೇ ಒಂದು ಉದ್ಯಾನ ಹಾಳುಗೆಡವಿದರೆ ಸಾರ್ವಜನಿಕರು ಬೇಸರಕ್ಕೊಳಗಾಗುವುದು ಸಹಜವೇ ಆಗಿದೆ. ಶೀಘ್ರ ಇದರ ಅಭಿವೃದ್ಧಿಗೆ ಮುಂದಾಗಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ನಾಗರಿಕ ಉದಯ ನಾಸಿಕ ಹೇಳಿದರು.