ಇಬ್ಬರೂ ತಂದೆ-ಮಗನಂತೆ, ಶ್ರೀಗಳ ಮಾರ್ಗದರ್ಶನವೇ ಶ್ರೀರಕ್ಷೆ

| Published : Feb 21 2024, 02:05 AM IST

ಇಬ್ಬರೂ ತಂದೆ-ಮಗನಂತೆ, ಶ್ರೀಗಳ ಮಾರ್ಗದರ್ಶನವೇ ಶ್ರೀರಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಂದಾ ಶ್ರೀಮಠದಲ್ಲಿ ಶಿಷ್ಯಸ್ವೀಕಾರ ಮಹೋತ್ಸವ ಭಾನುವಾರದಿಂದ ಆರಂಭವಾಗಿದ್ದು, ಫೆ. ೨೨ರ ವರೆಗೆ ನಡೆಯಲಿದೆ.

ಶಂಕರ ಭಟ್ ತಾರೀಮಕ್ಕಿ

ಶ್ರೀಮದ್ ಜಗದ್ಗುರು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಪೀಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಪೇಕ್ಷೆಯಂತೆ ಸೋಂದಾ ಶ್ರೀಮಠದಲ್ಲಿ ಶಿಷ್ಯಸ್ವೀಕಾರ ಮಹೋತ್ಸವ ಭಾನುವಾರದಿಂದ ಆರಂಭವಾಗಿದ್ದು, ಫೆ. ೨೨ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಗಳ ಸಂದೇಶ ಮತ್ತು ಶಿಷ್ಯತ್ವ ಸ್ವೀಕರಿಸಲಿರುವ ವೇದಮೂರ್ತಿ ನಾಗರಾಜ ಭಟ್ಟ ಅವರು ಕನ್ನಡಪ್ರಭಕ್ಕೆ ತಮ್ಮ ಅಮೃತ ನುಡಿಗಳನ್ನು ನೀಡಿದ್ದಾರೆ.ಆದಿ ಶಂಕರರ ಶಿಷ್ಯರಿಂದ ಸ್ಥಾಪಿಸಲ್ಪಟ್ಟ ಸ್ವರ್ಣವಲ್ಲೀ ಮಠದ ೫೩ನೇ ಯತಿಗಳಾಗಿ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಶ್ರೀಗಳ ತಪೋನಿಷ್ಠರಾಗಿ ಮಠದ ಪರಂಪರೆಯನ್ನು ನಿರಂತರ ಉಳಿಸಿಕೊಂಡು, ಶಿಷ್ಯರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಾ, ಬ್ರಹ್ಮೀಭೂತರಾದ ನಂತರ ಇಂದಿನ ಶ್ರೀಗಳಾದ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ಪೀಠಾರೋಹಣ ಮಾಡಿ ೩೩ ವರ್ಷಗಳಾಗಿವೆ. ಕಠಿಣ ತಪಸ್ವಿಗಳಾಗಿ ಶಿಷ್ಯರ ಕಲ್ಯಾಣದ ಬಗ್ಗೆ ಅತ್ಯಂತ ಕಾಳಜಿ ತೋರಿ, ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರತಿನಿತ್ಯವೂ ೧೬-೧೮ ಗಂಟೆ ಎಂತಹ ಸಂದರ್ಭದಲ್ಲಿಯೂ ಅವಿರತರಾಗಿ ರಾಜಿಯಾಗದೇ ತಪೋನುಷ್ಠಾನದಲ್ಲಿ ನಿರತರಾಗಿ ಶ್ರೀಮಠಕ್ಕೆ ಭವ್ಯವಾದ ವ್ಯವಸ್ಥೆ ರೂಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲ ಸೀಮೆಗಳ ಮತ್ತು ನಾಡಿನ ಭಕ್ತರ ಅಭ್ಯುದಯಕ್ಕಾಗಿ ಅನೇಕಾನೇಕ ಕಾರ್ಯಕ್ರಮ ರೂಪಿಸಿ, ಪ್ರತಿ ಮನೆ-ಮನಗಳಲ್ಲಿ ಧಾರ್ಮಿಕ ಮನೋಭಾವ ಬೆಳೆಸುತ್ತಿದ್ದಾರೆ. ಅದರಲ್ಲೂ ಭಗವದ್ಗೀತೆಯ ಅಮೃತವನ್ನು ಅಬಾಲವೃದ್ಧರವರೆಗೂ ನೀಡಿದ ಶ್ರೇಯಸ್ಸು ಶ್ರೀಗಳದ್ದು.ತಾವು ಪೀಠಾಧಿಪತಿಗಳಾಗಿ ಇನ್ನೂ ಬಹು ವರ್ಷಗಳ ಕಾಲ ಮುಂದುವರಿಯುವ ಅವಕಾಶವಿತ್ತು. ಆದರೆ, ಈಗಲೇ ಶಿಷ್ಯ ಸ್ವೀಕಾರ ಮಾಡುವ ಯೋಚನೆ ಏಕೆ ಬಂತು? ಉಳಿದ ಮಠಗಳಲ್ಲಿ ಇಷ್ಟು ಬೇಗ ಶಿಷ್ಯ ಸ್ವೀಕಾರ ಮಾಡುವ ಪದ್ಧತಿ ಕಡಿಮೆಯಲ್ಲವೇ? ತಾವು ನಮ್ಮ ಮಠದಲ್ಲಿ ಏಕಿಷ್ಟು ತ್ವರಿತಗತಿಯಲ್ಲಿ ಮಾಡುತ್ತಿದ್ದೀರಿ?

ನಾವು ಜನರಿಗೆ ನೀಡುವ ಸಂದೇಶ ಇದೇ ಆಗಿದೆ. ನಾವು ಹೇಗೆ ಜನರಿಗೆ ಮಾರ್ಗದರ್ಶನ ಮಾಡುತ್ತೇವೆಯೋ ಅಂತೆಯೇ ನಾವೂ ನಡೆದುಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಹೊಸತನವಿರಬೇಕು. ಇದನ್ನು ನಾವೇ ಮಾಡದಿದ್ದರೆ ಹೇಗೆ? ಗುರುಶಿಷ್ಯ ಸಂಬಂಧವೆಂದರೆ ತಂದೆ-ಮಕ್ಕಳ ಸಂಬಂಧವಿದ್ದಂತೆ. ಮಗ ಬೇಗ ಕೈಗೆ ಬಂದರೆ ತಂದೆಗೆ ನಿರಾಳ. ನಾವು ಪೀಠಕ್ಕೆ ಬಂದು ೩೩ ವರ್ಷಗಳಾದವು. ಈ ದೃಷ್ಟಿಯಿಂದ ಇದನ್ನು ಬೇಗವೆಂದು ಅಂದುಕೊಳ್ಳಲಾಗದು. ಯೋಗ್ಯರು ಸಿಗುವುದು ಕಷ್ಟವಾಗಿರುವ ಸಂದರ್ಭದಲ್ಲಿ ದೊರಕಿರುವ ಯೋಗ್ಯರನ್ನು ಬಿಡಬಾರದು. ಜತೆಗೆ ದೇವರ ಅನುಗ್ರಹವೂ ಸಿಕ್ಕಿದೆ. ಆದ್ದರಿಂದಲೇ ಸೂಕ್ತವಾದ ಸಮಯದಲ್ಲಿಯೇ ಉತ್ತರಾಧಿಕಾರಿಯ ನಿಯೋಜನೆಗೆ ಮುಂದಾಗಿದ್ದೇವೆ. ತನ್ಮೂಲಕ ಕ್ರಮೇಣ ಸಾಧನೆಗಾಗಿ ನಾವು ಜಪ-ತಪದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ. ನಮ್ಮದು ತಂದೆ-ಮಗನ ಸಂಬಂಧ. ಆದ್ದರಿಂದಲೇ ಬೇಗ ಮಗ ತಯಾರಾಗಲೆಂಬುದು ನಮ್ಮ ಅಪೇಕ್ಷೆ. ಶಿಷ್ಯ ಸ್ವೀಕಾರದ ಈ ಸಂದರ್ಭದಲ್ಲಿ ತಮ್ಮ ಸಂದೇಶವೇನು?ಜೀವನದಲ್ಲಿ ಧರ್ಮ ಪರಿಪಾಲನೆ ಬಹುಮುಖ್ಯ. ಇಂದು ಜನರಿಗೆ ಧರ್ಮದ ಮಹತ್ವದ ಕುರಿತು ಅರಿವು ಕ್ಷೀಣಿಸುತ್ತಿದೆ. ನಿತ್ಯ ಜೀವನದಲ್ಲಿ ಧರ್ಮಕ್ಕೆ ಯಾವ ಮಹತ್ವವನ್ನೂ ನೀಡುತ್ತಿಲ್ಲ. ಉಳಿದ ವಿಚಾರಗಳಾದ ಸಂಪಾದನೆ, ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ವಿಷಯಗಳಲ್ಲಿ ತೊಡಗಲು ಅವಕಾಶವಿರುತ್ತದೆಯಾದರೂ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಲು ಜನರಿಗೆ ಸಮಯವೂ ಸಿಗುತ್ತಿಲ್ಲ, ಶ್ರದ್ಧೆಯೂ ಕಾಣುತ್ತಿಲ್ಲ. ಹಾಗಾಗಿ ನಾವು ಜೀವನದಲ್ಲಿ ಅನೇಕ ಕಷ್ಟ, ನಷ್ಟ, ಸಮಸ್ಯೆ ಎದುರಿಸುತ್ತೇವೆ. ಧರ್ಮಾಚರಣೆಯ ಮೂಲಕ ನಮ್ಮ ಜೀವನವನ್ನು ನಿರ್ವಹಿಸತೊಡಗಿದಾಗ ನೆಮ್ಮದಿಯ ಜೀವನ ಲಭಿಸುತ್ತದೆ. ತನ್ಮೂಲಕ ನಮ್ಮಲ್ಲಿ ಚೈತನ್ಯ ರೂಪದ ಶಕ್ತಿ ವೃದ್ಧಿಯಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರ ಜೀವನದಲ್ಲಿ ಸ್ವಲ್ಪ ಸಮಯವನ್ನಾದರೂ ಧರ್ಮಾಚರಣೆಗಾಗಿ ಮೀಸಲಿಡಬೇಕು. ಪ್ರಸ್ತುತ ನಮಗೆದುರಾಗುವ ಸಮಸ್ಯೆ ಎದುರಿಸುವ ಶಕ್ತಿ ಕಡಿಮೆಯಾಗುತ್ತಿದ್ದು, ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ನಿತ್ಯವೂ ಧರ್ಮಾಚರಣೆ ಅತ್ಯಗತ್ಯ. ಇಂತಹ ಧರ್ಮಾಚರಣೆಯ ಪ್ರೇರಣೆಯಿಂದಲೇ ಧರ್ಮದ ದಾರಿಯಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು.

ವೇ.ಮೂ. ನಾಗರಾಜ ಭಟ್ಟ ಅವರ ಸಂದರ್ಶನಪ್ರಶ್ನೆ: ಲೌಕಿಕ ಪ್ರಪಂಚದ ಪ್ರಸ್ತುತ ಸಂದರ್ಭದಲ್ಲಿ ಯಾರಿಗೂ ಎಳೆವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸುವ ಯೋಚನೆ ಬರುವುದು ವಿರಳ. ಆದರೆ ತಾವು ಸನ್ಯಾಸತ್ವ ಆಯ್ಕೆ ಮಾಡಿಕೊಂಡಿದ್ದೀರಿ. ಸನ್ಯಾಸತ್ವದ ಕುರಿತು ನಿಮಗೆ ಹೇಗೆ ಆಸಕ್ತಿ ಮೂಡಿತು?ಉ: ಸತ್ಯವಾದ ಮಾತು. ಈಗಿನ ಯುವಕರಲ್ಲಿ ಸನ್ಯಾಸತ್ವದ ಬಗೆಗೆ ಆಸಕ್ತಿ ಕಡಿಮೆ. ಆದರೆ ಜೀವನದಲ್ಲಿ ವಿರಕ್ತಿ ಮೂಡಿದಾಗ ಸನ್ಯಾಸತ್ವದ ಬಗ್ಗೆ ಹೆಚ್ಚಿನ ಒಲವು ಸಹಜವಾಗಿ ಎಲ್ಲರಿಗೂ ಬಂದೇ ಬರುತ್ತದೆ. ನನಗೂ ವಿರಕ್ತಿ ಬಂತು. ಈ ಕಾರಣದಿಂದಲೇ ಸನ್ಯಾಸತ್ವದ ಒಲವು ಮೂಡಿತು.

ಚಿಕ್ಕಂದಿನಿಂದಲೂ ತಮಗೆ ಸನ್ಯಾಸತ್ವದ ಬಗ್ಗೆ ಆಸಕ್ತಿ ಇತ್ತೇ?ಕಳೆದ ಆರು ವರ್ಷಗಳಿಂದ ನನಗೆ ತೀವ್ರವಾದ ವೈರಾಗ್ಯ ಪ್ರಾರಂಭಗೊಂಡಿತು. ಈಗ ೨ ವರ್ಷಗಳಿಂದೀಚೆ ಚಿಂತನೆ ಬಲಗೊಂಡು, ಆ ದಾರಿಯಲ್ಲಿ ಮುಂದೆ ಸಾಗಿದ್ದೇನೆ.ಅನುಷ್ಠಾನಕ್ಕೆ ಹೆಸರಾದ ಸ್ವರ್ಣವಲ್ಲೀ ಮಠ ಇಡೀ ರಾಷ್ಟ್ರದಲ್ಲೇ ಹೆಚ್ಚಿನ ಗೌರವಕ್ಕೆ ಪಾತ್ರವಾಗಿದೆ. ಇಂತಹ ಮಠಕ್ಕೆ ಯತಿಗಳಾಗಿ ಸನ್ಯಾಸ ದೀಕ್ಷೆ ಪಡೆದು ಬರುತ್ತಿರುವಿರಿ. ಈ ವಿಷಯದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?ಇಂತಹ ಪರಂಪರೆಯಲ್ಲಿ ಸನ್ಯಾಸತ್ವ ಸ್ವೀಕರಿಸುತ್ತಿರುವ ಕಾರಣ ಧನ್ಯತಾ ಭಾವನೆ ಮೂಡುತ್ತಿದೆ. ಶ್ರೀಗಳ ಆಶೀರ್ವಾದದಿಂದ ಸನ್ಯಾಸ ಸ್ವೀಕರಿಸಿ ದೇಶಾಂತರ ಸಾಗಬೇಕೆಂಬ ಚಿಂತನೆ ನನ್ನದಾಗಿತ್ತು. ಆದರೆ, ಭಗವಂತನ ಇಚ್ಛೆ, ಪೂಜ್ಯ ಶ್ರೀಗಳ ಅನುಗ್ರಹದಿಂದಾಗಿ ನಾನು ಶ್ರೀಮಠದ ಪೂಜ್ಯ ಉತ್ತರಾಧಿಕಾರಿಯಾಗುವ ಭಾಗ್ಯ ದೊರೆತಿರುವುದು ಪುಣ್ಯವೆಂದು ಭಾವಿಸಿದ್ದೇನೆ. ಭಗವಂತನಿಂದ ಅನುಗ್ರಹ ಪಡೆದು, ಶಂಕರ ಭಗವತ್ಪಾದರ ಪರಂಪರೆಯ ಪೀಠವೇರಲು ಅವಕಾಶ ದೊರಕಿರುವುದು ಅತ್ಯಂತ ಮಹತ್ವದ್ದಾಗಿದೆ. ಈ ಪರಂಪರೆಗೆ ಅದ್ಭುತ ಶಕ್ತಿ ಇದೆ. ಇಂತಹ ಪರಂಪರೆಯಲ್ಲಿ ನಾನು ಬಂದಿರುವುದಕ್ಕೆ ಧನ್ಯತಾ ಭಾವನೆಯೂ ಇದೆ.ಇಷ್ಟು ವರ್ಷ ಕುಟುಂಬಸ್ಥರೊಂದಿಗೆ ಸಮಯ ಕಳೆದು, ಕುಟುಂಬದ ಸದಸ್ಯರಾಗಿ ಜೀವನ ನಡೆಸಿ, ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಈಗ ಸನ್ಯಾಸತ್ವ ಸ್ವೀಕರಿಸುತ್ತಿದ್ದೀರಿ. ಇದಕ್ಕೆ ಇಡೀ ಕುಟುಂಬ, ಮನೆಯನ್ನೇ ತೊರೆದು ಬರುವಂತಹ ಪರಿಸ್ಥಿತಿ ಬಂತು. ಇಂತಹ ಸಂದರ್ಭದಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಭಾವನೆ ಹೇಗಿತ್ತು ?

ಎರಡು ವರ್ಷಗಳ ಹಿಂದೆಯೇ ನನ್ನ ಅಧ್ಯಯನ ಮುಗಿದ ನಂತರ ನನ್ನ ಕಿರಿ ವಯಸ್ಸಿನಲ್ಲಿ ನನ್ನ ಕುಟುಂಬದ ತಂದೆ-ತಾಯಿಗಳಿಗೆ ಸನ್ಯಾಸತ್ವ ಸ್ವೀಕರಿಸುವ ಕುರಿತು, ಗುರುಗಳ ಹತ್ತಿರ ಸನ್ಯಾಸ ದೀಕ್ಷೆ ಪಡೆದು, ಹೊರಟು ಹೋಗುವ ಚಿಂತನೆಯನ್ನು ಹಂತ-ಹಂತವಾಗಿ ತಿಳಿಸುತ್ತ ಬಂದಿದ್ದೆ. ಒಮ್ಮೆಲೇ ಹೇಳಿದರೆ ಅವರು ಒಪ್ಪಲಾರರೆಂಬ ಆತಂಕವಿತ್ತು. ಆಗಿನಿಂದಲೇ ಅವರ ಸಮ್ಮತಿಗಾಗಿ ತಯಾರಿ ನಡೆಸುತ್ತಿದ್ದೆ. ಒಮ್ಮೆಲೇ ಹೇಳಿ ಅವರ ಮನಸ್ಸಿಗೆ ನೋವಾಗಬಾರದೆಂಬ ಕಾರಣದಿಂದ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೆ. ಆದ್ದರಿಂದ ಅವರಿಗೂ ಅಷ್ಟೊಂದು ದುಃಖವಾಗಲಿಲ್ಲ. ಇದೇ ಮಠದಲ್ಲಿರುವೆನೆಂದು ಸಂತೋಷವೂ ಅವರಿಗಾಗಿದೆ.ಸ್ವರ್ಣವಲ್ಲಿ ಮಠದ ಯತಿಗಳಾಗಿ ನಿಯುಕ್ತಿಗೊಳ್ಳುವಿರೆಂಬ ಯೋಚನೆ ಮೊದಲೇ ಇತ್ತೇ?

ಇಲ್ಲ. ಮೊದಲು ಸನ್ಯಾಸಾಶ್ರಮ ಸ್ವೀಕರಿಸುವ ಯೋಚನೆ ಇತ್ತು. ಆದರೆ ಮಠದ ಯತಿಗಳಾಗಿ ನಿಯುಕ್ತಿಗೊಳ್ಳುವ ಯೋಚನೆ, ಕನಸು ಮನಸಿನಲ್ಲಿ ಇರಲಿಲ್ಲ. ಆದರೆ, ಪೂಜ್ಯ ಶ್ರೀಗಳ ಅನುಜ್ಞೆಯನ್ನು ಮೀರಲಾಗದೇ ಈ ಕುರಿತು ನಿರ್ಣಯಿಸಿದೆ.

ಸಮಾಜದಲ್ಲಿ ಧರ್ಮಾಚರಣೆ ಕ್ಷೀಣವಾಗುತ್ತಿದ್ದು, ಧರ್ಮಾಚರಣೆಯನ್ನು ಹೆಚ್ಚಿಸುವುದರ ಕುರಿತು ತಮ್ಮ ಅಭಿಪ್ರಾಯವೇನು?

ಈ ಕುರಿತಾಗಿ ಶ್ರೀಮಠದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಧಾರ್ಮಿಕ ಮತ್ತು ಧರ್ಮಾಚರಣೆಯ ಕುರಿತಾಗಿ ಜನರಲ್ಲಿ ಆಗಾಗ ಧರ್ಮಕಾರ್ಯ ನಡೆಯುತ್ತಾ ಬಂದಿದೆ. ಶ್ರೀಗಳು ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಂಡು ಬಂದಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಮಠದ ಯಾವುದೇ ಆಚರಣೆ, ಪದ್ಧತಿ, ವ್ಯವಸ್ಥೆ ಎಲ್ಲವನ್ನೂ ಪೂಜ್ಯರ ಮಾರ್ಗದರ್ಶನದಲ್ಲಿ ಇನ್ನಷ್ಟು ಉತ್ತಮವಾಗಿ ಮುಂದುವರಿಸಿಕೊಂಡು ಹೋಗುವ ಸತ್ಸಂಕಲ್ಪವಿದೆ.

ಸನ್ಯಾಸ ಸ್ವೀಕಾರದ ನಂತರ ಸಾಧನೆಯ ಮೊದಲ ಹಂತ ಯಾವುದು? ಸಾಧನೆಗಾಗಿ ಗುರುಗಳು ಹೇಳಿಕೊಟ್ಟಂತಹ ಅನುಷ್ಠಾನ, ಉಪಾಸನೆಗಳು, ಮಠದ ಪರಂಪರೆಯಲ್ಲಿ ಬಂದ ಎಲ್ಲ ಚಟುವಟಿಕೆ ಮುಂದುವರಿಸಿಕೊಂಡು ಹೋಗುವುದು.ಧರ್ಮ ಕ್ಷೇತ್ರಕ್ಕೆ ಹೆಸರಾದ ಈ ಮಠ ಧರ್ಮಾಚರಣೆಯ ವಿಚಾರದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಅದೇ ರೀತಿ ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದಾರೆ. ಈ ವಿಷಯದಲ್ಲಿ ನಿಮ್ಮ ಆಕಾಂಕ್ಷೆ ಏನು? ಹೊಸತನ ಜಾರಿಗೆ ತರುವ ಕುರಿತು ನಿಮ್ಮ ವಿಚಾರವೇನು? ಉದಾಹರಣೆಗೆ : ತಾಂತ್ರಿಕ, ವೈದ್ಯಕೀಯ ಸೇರಿದಂತೆ ಹತ್ತಾರು ಶಿಕ್ಷಣ ವ್ಯವಸ್ಥೆಗಳನ್ನು ಮಠದ ಮೂಲಕ ನಡೆಯುವಂತೆ ತಾವು ಪ್ರಯತ್ನಿಸಬಹುದೇ? ಶ್ರೀಗಳ ಮಾರ್ಗದರ್ಶನದಂತೆ ಮೌಲ್ಯಯುತ ಶಿಕ್ಷಣ ಕೊಡಲು ಹೆಚ್ಚಿನ ಆದ್ಯತೆ ನೀಡುವೆ. ನಂತರ ಗುರುಗಳ ನಿರ್ದೇಶನದಂತೆ ಮುಂದೆ ಆ ಕುರಿತು ಯೋಚಿಸುತ್ತೇನೆ.